ಚಿತ್ರ: ಭೂಮಿಕಾ
ತಾರಾಗಣ: ಆಲಿಶಾ ಅಂದ್ರಾದೆ, ನವೀನ್ ಡಿ ಪಡೀಲ್
ರ್ದೇಶನ: ಪಿ.ಕೆ.ಎಚ್ ದಾಸ್
ನಿರ್ಮಾಪಕಿ: ಗೀತಾ ನರೇಂದ್ರ ನಾಯಕ
ಬಿಸಿನಿಮಾಸ್ ರೇಟಿಂಗ್ 4/5
ಚಿತ್ರ ವಿಮರ್ಶೆ :
‘ಭೂಮಿಕಾ’ ಈ ವಾರ ಒ.ಟಿ.ಟಿ ಮೂಲಕ ಬಿಡುಗಡೆಯಾದ ಚಿತ್ರ. ಕನ್ನಡದ ಖ್ಯಾತ ಛಾಯಾಗ್ರಾಹಕ ಪಿ.ಕೆ.ಎಚ್ ದಾಸ್ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅನಾಥ ಹೆಣ್ಣೊಬ್ಬಳ ಬದುಕಿನ ಏರು ಪೇರುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ.
ಮನೆಯೊಂದರಲ್ಲಿ ಕೆಲಸಕ್ಕಿರುವ ಪುಟ್ಟ ಹುಡುಗಿ ಭೂಮಿಕಾ. ಆಕೆ ಬೆಳೆದು ‘ದೊಡ್ಡವಳಾದಾಗ’ ಆ ಮನೆಯ ದೊಡ್ಡ ವ್ಯಕ್ತಿಯ ಚಿಕ್ಕ ಕಣ್ಣು ಅವಳ ಮೇಲೆ ಬೀಳುತ್ತದೆ. ಅಲ್ಲಿಂದ ಓಡಿ ತಪ್ಪಿಸಿಕೊಂಡು ರಸ್ತೆಗೆ ಬರುವ ಹುಡುಗಿಗೆ ಯಾವುದೋ ಕಾರೊಂದು ಎದುರಾಗುತ್ತದೆ. ಅದಕ್ಕೆ ಕೈತೋರಿಸಿದಾಗ ಅವರು ಕಾರೊಳಗೆ ಸೇರಿಸಿಕೊಳ್ಳುತ್ತಾರೆ. ಬೆಂಕಿಯಿಂದ ಬಾಣಲೆಗೆ ಎನ್ನುವಂತೆ ಆ ಕಾರಲ್ಲಿದ್ದಾಕೆ ವೇಶ್ಯಾವಾಟಿಕೆ ನಡೆಸುವ ಮಹಿಳೆಯಾಗಿರುತ್ತಾಳೆ. ಹಾಗೆ ವೇಶ್ಯೆಯಾಗುವ ಹುಡುಗಿ ಯುವತಿಯಾದಾಗ ಪತ್ರಕರ್ತನೋರ್ವ ಬಂದು ಆಕೆಯನ್ನು ಸಂದರ್ಶನ ಮಾಡುತ್ತಾನೆ. ಸಂದರ್ಶನ ನಡೆದ ಕೆಲವು ದಿನಗಳ ಬಳಿಕ ಅವಳು ಎದುರಾದಾಗ ಮದುವೆಯಾಗುವುದಾಗಿ ಹೇಳುತ್ತಾನೆ. ಮುಂದಿನ ಕತೆಯನ್ನು ನೀವು ಒಟಿಟಿ ಮೂಲಕವೇ ನೋಡಬೇಕು. ಯಾಕೆಂದರೆ ಇಲ್ಲಿ ಮದುವೆಯಾಗುತ್ತಾಳೋ ಇಲ್ಲವೋ ಎನ್ನುವುದು ಕ್ಲೈಮ್ಯಾಕ್ಸ್ ಅಲ್ಲ. ಆನಂತರದಲ್ಲಿ ನಡೆಯುವುದೇ ಚಿತ್ರದ ಪ್ರಮುಖ ಕತೆ. ಸಾಮಾಜಿಕ ಕಳಕಳಿಯ ಜೊತೆಗೆ ಮಹಿಳಾ ಪ್ರಾಧಾನ್ಯತೆ ತುಂಬಿದ ಅಪರೂಪದ ಚಿತ್ರ.
ಚಿತ್ರದಲ್ಲಿ ಭೂಮಿಕಾ ಪಾತ್ರವನ್ನು ಆಲಿಶಾ ಅಂದ್ರಾದೆ ನಿರ್ವಹಿಸಿದ್ದಾರೆ. ವೇಶ್ಯೆಯಿಂದ ಗೃಹಿಣಿಯಾಗಿ ಬದಲಾಗುವ ಪ್ರಕ್ರಿಯೆಯನ್ನು ಅವರು ತಮ್ಮ ನಟನೆಯ ಮೂಲಕ ಅದ್ಭುತವಾಗಿ ತೋರಿಸಿದ್ದಾರೆ. ಟೆಂಪೋ ಚಾಲಕ ಗಣೇಶನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನವೀನ್ ಡಿ ಪಡೀಲ್ ನಟನೆ ನೈಜವಾಗಿದೆ. ಮಜಾ ಟಾಕೀಸ್ನಲ್ಲಿ ಅವರ ಹಾಸ್ಯವನ್ನು ಕಂಡ ಕನ್ನಡಿಗರಿಗೆ ಗಂಭೀರ ಪಾತ್ರವೊಂದಕ್ಕೆ ಜೀವ ತುಂಬಿರುವ ಅವರ ಅಭಿನಯ ಅಚ್ಚರಿ ಮೂಡಿಸುವುದರಲ್ಲಿ ಸಂದೇಹವಿಲ್ಲ. ಭೂಮಿಕಾದ ಕತೆ ನಡೆಯುವುದು ಮಂಗಳೂರು ಕರಾವಳಿಯಲ್ಲಿ. ಅಲ್ಲಿನ ಪ್ರಾದೇಶಿಕ ಸೊಗಡು ದೃಶ್ಯಗಳಲ್ಲಿ ಮಾತ್ರವಲ್ಲ, ಮಾತಿನಲ್ಲಿಯೂ ಎದ್ದು ಕಾಣುತ್ತದೆ. ಜೆ. ಸಾತಪ್ಪನ್ ನಾರಾಯಣ್ ಅವರ ಛಾಯಾಗ್ರಾಹಣಕ್ಕೆ ಕಲಾವಿದರ ಮಾತುಗಳು ಸಾಥ್ ನೀಡಿದ್ದು, ಪ್ರೇಕ್ಷಕರನ್ನು ಕರಾವಳಿಗೆ ಕರೆದೊಯ್ಯುತ್ತದೆ. ಚಿತ್ರದಲ್ಲಿ ಕಾಣಿಸಿಕೊಂಡಿರುವ ಬಾಲನಟ, ನಟಿಯರು ಸೇರಿದಂತೆ ಪ್ರತಿಯೊಂದು ಪಾತ್ರಗಳು ಚಿತ್ರ ಮುಗಿದ ಬಳಿಕವೂ ಕಾಡುವಂತಿವೆ.
@ಬಿಸಿನಿಮಾಸ್
Be the first to comment