ಚಿತ್ರ ವಿಮರ್ಶೆ :1980: ಎರಡು ಲೋಕದ ನಂಟಿನ ಕತೆ

ಚಿತ್ರ: 1980

ನಿರ್ದೇಶನ: ರಾಜ್ ಕಿರಣ್

ನಿರ್ಮಾಣ: ಆರ್ ಕೆ ಪ್ರೊಡಕ್ಷನ್ಸ್

ತಾರಾಗಣ: ಪ್ರಿಯಾಂಕಾ ಉಪೇಂದ್ರ, ಅರವಿಂದ್ ರಾವ್, ಶರಣ್ಯ ಶೆಟ್ಟಿ ಮೊದಲಾದವರು

ಬಿಸಿಮಾಸ್ ರೇಟಿಂಗ್ : 3.5/5

ಈ ವಾರ ಬಿಡುಗಡೆಯಾದ ಕನ್ನಡ ಚಿತ್ರಗಳು ನಾಲ್ಕು. 1980 ಎನ್ನುವ ಈ ಚಿತ್ರ ಅವುಗಳಲ್ಲಿ ಒಂದಾಗಿದ್ದು ನಮ್ಮ ಫ್ಲಿಕ್ಸ್ ಮೂಲಕ ತೆರೆಕಂಡಿದೆ. ಇದು ಒಂದು ವೈಜ್ಞಾನಿಕ ಹಿನ್ನೆಲೆಯನ್ನು ಇರಿಸಿಕೊಂಡಿರುವ ಕಾಲ್ಪನಿಕ ಕತೆ ಇರುವ ಚಿತ್ರ. ನಾವು ವಾಸಿಸುತ್ತಿರುವ ಜಗತ್ತಿಗೆ ಸಮಾನಾಂತರವಾಗಿ ಇರಬಹುದಾದ ಮತ್ತೊಂದು ಜಗತ್ತಿನ ಸಂಪರ್ಕ ನಮಗಾದರೆ ಏನಾದೀತು ಎನ್ನುವುದನ್ನು ಹೇಳುವ ಕತೆ ಇಲ್ಲಿದೆ.

ಅದು ನಾಲ್ಕು ದಶಕದ ಹಿಂದಿನ ಕತೆ. ಸೋಮವಾರ ಪೇಟೆ ತಾಲೂಕಿನ ಅಪ್ಪೆಶೆಟ್ಟಳ್ಳಿ ಎನ್ನುವ ಊರು. ಪ್ರಿಯಾ ದಂಪತಿ ಅಲ್ಲಿಗೆ ಹೊಸದಾಗಿ ವಾಸ್ತವ್ಯಕ್ಕೆ ಬರುತ್ತಾರೆ. ವಿದೇಶದಲ್ಲಿ ವೃತ್ತಿ ನಿರತನಾಗಿರುವ ಪ್ರಿಯಾಳ ಗಂಡ ಮತ್ತೆ ಅಲ್ಲಿಗೆ ಮರಳುತ್ತಾನೆ. ಹೊರಡುವ ಮೊದಲು ಪತ್ನಿ ತನ್ನೊಂದಿಗೆ ಮಾತಿನ ಸಂಪರ್ಕದಲ್ಲಿ ಇರಲಿಕ್ಕಾಗಿ ಆತ ಆ ಮನೆಗೆ ಲ್ಯಾಂಡ್ ಲೈನ್ ಟೆಲಿಫೋನ್ ವ್ಯವಸ್ಥೆ ಮಾಡಿಸುತ್ತಾನೆ. ಅದಕ್ಕೆ ತಂತಿಯ ಸಂಪರ್ಕ ನೀಡುವ ಮೊದಲೇ ಆ ಮನೆಗೊಂದು ಫೋನ್ ಕರೆ ಬರುತ್ತದೆ! ಸಂಪರ್ಕ ನೀಡಿದ ಬಳಿಕವೂ ಆ ಕರೆ ಮುಂದುವರಿಯುತ್ತದೆ. ಅದು ಒಬ್ಬಳು ಹುಡುಗಿಯ ಧ್ವನಿ. ರಾಂಗ್ ನಂಬರ್ ಮೂಲಕ ಪ್ರಿಯಾಗೆ ಪರಿಚಯವಾಗುವ ಸಾನ್ವಿ ಎನ್ನುವ ಆ ಯುವತಿ ದಿನೇ ದಿನೇ ಪ್ರಿಯಾಗೆ ಆತ್ಮೀಯಳಾಗುತ್ತಾಳೆ. ತನ್ನ ಬಗ್ಗೆ ವಿವರಿಸುತ್ತಾ ಆಕೆಯ ಅಜ್ಜಿ ಪ್ರಿಯಾ ಎನ್ನುವ ಮಾತನ್ನು ಹೇಳುತ್ತಾಳೆ. ಹೀಗೆ ಕುತೂಹಲಗೊಳಿಸುವ ಆ ಕರೆ 2020ರ ಕಾಲಘಟ್ಟದಿಂದ ತನಗೆ ಬರುತ್ತಿದೆ ಎನ್ನುವ ಸತ್ಯ ಪ್ರಿಯಾಗೆ ಅರಿವಾಗುತ್ತದೆ!

ಹೀಗೆ ಕುತೂಹಲಕರವಾಗಿ ಸಾಗುವ ಕತೆಯಲ್ಲಿ ಮತ್ತೊಂದು ಪ್ರಮುಖ ಎಳೆಯೂ ಇದೆ. ಪ್ರಿಯಾ ಇರುವ ಊರಿನ ಓಣಿಯೊಂದರಲ್ಲಿ ಹದಿನೈದು ದಿನಕ್ಕೊಮ್ಮೆ ಮನುಷ್ಯರ ಅಪಹರಣ ನಡೆಯುತ್ತಿರುತ್ತದೆ. ಮೊಮ್ಮಗಳು ಸಾನ್ವಿಯ ಮೂಲಕ ಭವಿಷ್ಯದ ಬಗ್ಗೆ ಮೊದಲೇ ತಿಳಿದುಕೊಳ್ಳುವ ಪ್ರಿಯಾಗೆ ಮುಂದೆ ತಾನು ಕೂಡ ನಾಪತ್ತೆಯಾಗುವ ಬಗ್ಗೆ ಅರಿವಾಗುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಯೋಜನೆ ಹಾಕುತ್ತಾಳೆ. ಆದರೆ ಆ ಯೋಜನೆ ಫಲಿಸುವುದೇ? ಅಪಹರಣ ನಡೆಸುವ ವ್ಯಕ್ತಿಗಳು ಯಾರು? ಪ್ರಿಯಾ ಮತ್ತು ಸಾನ್ವಿಯ ಎರಡು ಜಗತ್ತಿನ ಸಂಬಂಧಗಳು ಒಂದಾಗುವುದೇ? ಮೊದಲಾದ ಆಸಕ್ತಿ ಅಂಶಗಳಿಗೆ ಚಿತ್ರದಲ್ಲಿ ಮನಮುಟ್ಟುವಂಥ ಉತ್ತರಗಳಿವೆ.

ಚಿತ್ರದಲ್ಲಿ ಪ್ರಿಯಾ ಎನ್ನುವ ಮಧ್ಯವಯಸ್ಸಿನ ಕತೆಗಾರ್ತಿಯಾಗಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದಾರೆ. ಚಿತ್ರದ ಮೂಲಕ ಅವರಿಗೆ ವಾತ್ಸಲ್ಯ, ಅಸಹನೆ, ಆಶ್ಚರ್ಯ, ಆತಂಕ ಮೊದಲಾದ ಭಾವನೆಗಳನ್ನು ವ್ಯಕ್ತಪಡಿಸುವಂಥ ಒಂದು ಪಾತ್ರ ದೊರಕಿದೆ. ಅವರ ಪತಿಯ ಪಾತ್ರದಲ್ಲಿ ಅರವಿಂದ್ ರಾವ್ ನಟಿಸಿದ್ದಾರೆ. ಬಂಟಿಯೆಂಬ ಎಳೆಯ ಪುತ್ರನ ಪಾತ್ರವೂ ಇದೆ. ಸಾನ್ವಿಯ ತಂದೆಯಾಗಿ ಶಂಕರ್ ಅಶ್ವಥ್ ಕಾಣಿಸಿಕೊಂಡಿದ್ದಾರೆ. ಕೆ.ಎಸ್ ಶ್ರೀಧರ್ ಕೂಡ ಒಂದು ಪಾತ್ರ ಮಾಡಿದ್ದಾರೆ. ನಾಪತ್ತೆ ಪ್ರಕರಣವನ್ನು ತನಿಖೆ ಮಾಡುವ ಪೊಲೀಸ್ ಅಧಿಕಾರಿಯಾಗಿ ರಮೇಶ್ ಪಂಡಿತ್ ಇದ್ದಾರೆ. ಲೊಕೇಶನ್ ಜೊತೆಗೆ ಪ್ರಿಯಾಂಕ, ಅರವಿಂದ್ ರಾವ್ ಮೊದಲಾದ ಪಾತ್ರಗಳ ವಸ್ತ್ರದ ಶೈಲಿಯಿಂದಲೂ ಎಂಬತ್ತರ ಕಾಲಘಟ್ಟವನ್ನು ಕಟ್ಟಿಕೊಡಲಾಗಿದೆ. ಕನ್ನಡದ ಮಟ್ಟಿಗೆ ಹೊಸ ಮಾದರಿಯ ಚಿತ್ರವನ್ನು ನೀಡಿರುವ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಬಹುದು.

@bcinemas.in

Be the first to comment

Leave a Reply

Your email address will not be published. Required fields are marked *

Translate »
error: Content is protected !!