ಚಿತ್ರ: ಧರಣಿ ಮಂಡಲ ಮಧ್ಯದೊಳಗೆ
ನಿರ್ಮಾಣ: ಓಂಕಾರ್
ನಿರ್ದೇಶನ: ಶ್ರೀಧರ್ ಶಿಕಾರಿಪುರ
ಪಾತ್ರವರ್ಗ: ನವೀನ್ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಬಾಲ ರಾಜವಾಡಿ ಮುಂತಾದವರು.
ಸ್ಟಾರ್ ರೇಟಿಂಗ್: 3.5/5
ನಾವು ಒಬ್ಬರಿಗೆ ಸಹಾಯ ಮಾಡಿದರೆ, ಇನ್ನೊಬ್ಬರು ನಮಗೆ ಸಹಾಯ ಮಾಡುತ್ತಾರೆ ಎಂಬ ಕಾನ್ಸೆಪ್ಟ್ನಲ್ಲಿ ಮೂಡಿ ಬಂದಿರುವ ಚಿತ್ರ ಧರಣಿ ಮಂಡಲ ಮಧ್ಯದೊಳಗೆ ತನ್ನ ವಿಭಿನ್ನತೆ ಮೂಲಕ ಗಮನ ಸೆಳೆಯುತ್ತದೆ.
ನಾಲ್ಕು ಡಿಫರೆಂಟ್ ಕಥೆಗಳು ಈ ಸಿನಿಮಾದ ಆರಂಭದಲ್ಲಿ ತೆರೆದುಕೊಳ್ಳುತ್ತವೆ. ಪ್ರಾರಂಭದಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದ ಕಥೆಗಳು ನಂತರದಲ್ಲಿ ನಿಧಾನವಾಗಿ ಬೆಸೆದುಕೊಳ್ಳಲು ಆರಂಭಿಸುತ್ತವೆ. ಕೆಲವೇ ಗಂಟೆಗಳಲ್ಲಿ ನಡೆಯುವ ಒಂದಷ್ಟು ಘಟನೆಗಳನ್ನು ಇಟ್ಟುಕೊಂಡು ನಿರ್ದೇಶಕರು ಒಂದು ರೋಚಕ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಪ್ರೇಕ್ಷಕರಿಂದ ಹೆಚ್ಚು ಗಮನವನ್ನು ಬೇಡುವಂತಹ ಸಿನಿಮಾ ಇದಾಗಿದೆ. ಗಮನವನ್ನು ಬೇರೆಡೆಗೆ ಹರಿಸಿದರೆ ಕೆಲವೊಂದು ದೃಶ್ಯಗಳು ಗೊಂದಲಮಯ ಎನಿಸಬಹುದು. ಕೆಲವೇ ಗಂಟೆಗಳಲ್ಲಿ ನಡೆಯುವ ಘಟನೆಗಳು ಕಾಕತಾಳೀಯವಾಗಿ ಒಂದಕ್ಕೊಂದು ಬೆಸದುಕೊಳ್ಳುವ ರೀತಿಯೇ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತದೆ.
ನವೀನ್ ಶಂಕರ್ ಅವರಿಗೆ ಜೋಡಿಯಾಗಿ ಐಶಾನಿ ಶೆಟ್ಟಿ ನಟಿಸಿದ್ದಾರೆ. ಮಾದಕ ವಸ್ತುಗಳಿಗೆ ಅಡಿಕ್ಟ್ ಆಗಿರುವ ಹುಡುಗಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಸಿದ್ದು ಮೂಲಿಮನೆ, ಯಶ್ ಶೆಟ್ಟಿ ನಿಭಾಯಿಸಿರುವ ಪಾತ್ರಗಳು ಪ್ರೇಕ್ಷಕರಿಗೆ ಅಚ್ಚರಿ ನೀಡುತ್ತವೆ. ಪ್ರಕಾಶ್ ತುಮ್ಮಿನಾಡ್ ಅವರು ಭರ್ಜರಿ ನಗು ಉಕ್ಕಿಸುತ್ತಾರೆ.
ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣ, ರೋನಾಡ್ ಬಕ್ಕೇಶ್ ಹಾಗೂ ಕಾರ್ತಿಕ್ ಚನ್ನೋಜಿ ರಾವ್ ಅವರು ಸಂಗೀತ ಕೂಡ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರ ಪರಿಕಲ್ಪನೆಗೆ ಸೂಕ್ತವಾಗಿ ಕೆಲಸ ಮಾಡಿದ್ದಾರೆ.
ಹೊಸ ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರು ಎಲ್ಲವನ್ನೂ ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ಕಥೆ ಮತ್ತು ಅದನ್ನು ಕಟ್ಟಿಕೊಟ್ಟಿರುವ ವಿಚಾರದಲ್ಲಿ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಒಂದು ಭಿನ್ನ ಪ್ರಯತ್ನವಾಗಿ ಕಾಣುತ್ತದೆ.
_______
Be the first to comment