ರಂಗಭೂಮಿಯನ್ನು ಮೆಟ್ಟಿಲಾಗಿಸಿಕೊಂಡು ಬೆಳ್ಳಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ ನಿರ್ದೇಶಕರು ಸಾಕಷ್ಟು ಮಂದಿಯಿದ್ದಾರೆ.ರಂಗ ಪ್ರೇಮಿ ರಾಜ್ ಗುರು ಹೊಸಕೋಟೆ ನಿರ್ದೇಶನದ ‘ಸಮಯದ ಹಿಂದೆ ಸವಾರಿ’ ಚಿತ್ರದ ಮೂಲಕ ಹೊಸ ಸವಾರಿ ಮಾಡಲು ಹೊರಟಾಗ ರಾಜ್‍ಗುರು ಯಾವ ರೀತಿಯ ಛಾಪು ಮೂಡಿಸುತ್ತಾರೆ ಅನ್ನುವ ಕುತೂಹಲ ಮೂಡಿತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಛಾಪು ಬಿಡಿ, ರಾಜ್‍ಗುರು ಒಂದು ಉತ್ತಮ ಕಾದಂಬರಿಯನ್ನು ಹೇಗೆ ಸಪ್ಪೆಯಾಗಿ ತೋರಿಸಬಹುದು ಅನ್ನುವುದನ್ನು ಶ್ರಮಪಟ್ಟು ಪ್ರೂವ್ ಮಾಡಿದ್ದಾರೆ.
ಚಿತ್ರದ ಆಡಿಯೋ ಕಳೆದ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿ, ಎಲ್.ಎನ್.ಶಾಸ್ತ್ರೀಯವರು ಹಾಡಿದ ಟೈಟಲ್ ಟ್ರಾಕ್ ಸಾಕಷ್ಟು ಸದ್ದು ಮಾಡಿತ್ತು. ಆ ನಂತರ ಎಲ್ಲೂ ಸದ್ದು ಮಾಡದ ಚಿತ್ರತಂಡ ಈಗ ಸಿನಿಮಾ ರಿಲೀಸ್‍ಗೂ ಮುನ್ನ ಅಫೀಶಿಯಲ್ ಟೀಸರ್ ಬಿಡುಗಡೆ ಮಾಡಿ ಇನ್ನಷ್ಟು ಕುತೂಹಲ ಕೆರಳಿಸುವಲ್ಲಿ ಸಫಲವಾಗಿತ್ತು ಕೂಡ. ನಿಮ್ಗೆ ಗೊತ್ತಿದೆ,’ಸಮಯದ ಹಿಂದೆ ಸವಾರಿ’, ಪತ್ರಕರ್ತ ಜೋಗಿ ಅವರ ‘ನದಿಯ ನೆನಪಿನ ಹಂಗು’ ಕಾದಂಬರಿ ಆಧಾರಿತ ಸಿನಿಮಾ. ಈಗಾಗಲೇ ಜೋಗಿ ಅವರ ಈ ಕಾದಂಬರಿ ‘ಬಲ್ಲ ಮೂಲಗಳ ಪ್ರಕಾರ’ ಎಂಬ ಹೆಸರಿನಲ್ಲಿ ನಾಟಕವಾಗಿದೆ. ನಿರ್ದೇಶಕ ರಾಜ್ ಗುರು ಹೊಸ ಕೋಟೆ ‘ಸಮಯದ ಹಿಂದೆ ಸವಾರಿ’ ಚಿತ್ರಕ್ಕೆ ‘ಬಲ್ಲ ಮೂಲಗಳ ಪ್ರಕಾರ ಆತ’ ಎಂಬ ಅಡಿ ಶೀರ್ಷಿಕೆ ನೀಡಿ ಚಿತ್ರವನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ.
ಜೋಗಿಯವರ ಕಾದಂಬರಿ ಓದಿದವರಿಗೆ, ನಾಟಕ ನೋಡಿದವರಿಗೆ, ‘ಇದು ಸಿನ್ಮಾ ಆದ್ರೆ ಚೆನ್ನಾಗಿರುತ್ತೆ’ ಅನ್ನುವ ಥಾಟ್ ಬಂದಿರುತ್ತೆ. ಬಿಕಾಸ್, ಕಾದಂಬರಿ ಮತ್ತು ನಾಟಕ ಒಂದು ವಿಶೇಷ ಅನುಭವವನ್ನು ನೀಡುತ್ತದೆ. ಆದರೆ, ರಾಜ್‍ಗುರು ನೋಡುಗನಿಗೆ ಕಾಂದಂಬರಿಯ ಮೂಲ ಸತ್ವವನ್ನು ದಾಟಿಸುವಲ್ಲಿ ಸೋತಿದ್ದಾರೆ. ಚಿತ್ರದ ಆರಂಭದ ಓಪನಿಂಗ್ ಕಾರ್ಡ್‍ಅನ್ನು ಡಿಫೆರೆಂಟ್ ಆಗಿ ಮಾಡಲು ಹೋಗಿ, ಆರಂಭದಿಂದಲೇ ಪ್ರೇಕ್ಷಕನ ತಾಳ್ಮೆ ಪರೀಕ್ಷೆ ಮಾಡಲು ನಿಂತುಬಿಡುತ್ತಾರೆ. ಅದಾದ ನಂತರ ಈಟೂದ್ದ ಪತ್ರವೊಂದನ್ನು ರಾಜ್‍ಗುರು ಓದುತ್ತಾರೆ. ಪತ್ರದಲ್ಲಿ ಜೋಗಿಯವರ ಹೆಸರು ಬಿಟ್ಟುಹೋಗಿದ್ರೂ ಧ್ವನಿಯಲ್ಲಿ ಅದನ್ನು ಮ್ಯಾಚ್ ಮಾಡಿಕೊಂಡು ತಾನೋಬ್ಬ ‘ಬೋರ್‍ಸಾಮಿ’ ಅನ್ನಿಸಿಕೊಳ್ಳುತ್ತಾರೆ.
ಚಿತ್ರಕ್ಕೆ ನಿರ್ದೇಶನ, ಚಿತ್ರಕಥೆ, ಸಾಹಿತ್ಯ, ಸಂಗೀತ ಮತ್ತು ಸಂಭಾಷಣೆ.. ಹೀಗೆ ಸಾಕಷ್ಟು ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದ ರಾಜ್ ಗುರು ಜೋಗಿಯವರು ಹೇಳಹೊರಟಿದ್ದ ಸಂಗತಿಗಳನ್ನು ತೆರೆಯ ಮೇಲೆ ರಂಗಭೂಮಿಕರಣ ಮಾಡಲು ಹೋಗಿ ಎಡವಿದ್ದಾರೆ. ಚಿತ್ರ ರಿಲೀಸ್‍ಗೂ ಮೊದಲು ‘ಇದು ಸಿನಿಮಾ ಅಲ್ಲ ಒಂದು ಪ್ರಯೋಗ’ ಅಂತ ರಾಜ್‍ಗುರು ಯಾಕೆ ಹೇಳಿದರು ಅನ್ನುವುದು ಸಿನ್ಮಾ ನೋಡಿದ ಮೇಲೆ ಅರ್ಥವಾಗುತ್ತೆ!
ರಾಜ್‍ಗುರು ಕನಸಿಗೆ ಬಣ್ಣಹಚ್ಚಲು,ರಾಹುಲ್ ಹೆಗ್ಡೆ, ರಂಜಿತ್ ಶೆಟ್ಟಿ ಮತ್ತು ಪ್ರವೀಣ್ ಹೆಗ್ಡೆ ಚಿತ್ರದ ನಿರ್ಮಾಣ ಹೊಣೆ ಹೊತ್ತಿದ್ದರು. ಮೂವರು ಸೇರಿ ಕಷ್ಟಪಟ್ಟು ಚಿತ್ರವನ್ನು ರಿಲೀಸ್ ಮಟ್ಟಕ್ಕೂ ತಂದಿರೋದು ನಿಜಕ್ಕೂ ಮೆಚ್ಚಬೇಕಾದ ಸಂಗತಿಯೇ. ಆದರೆ, ಚಿತ್ರದಲ್ಲಿ ಸತ್ವವಿಲ್ಲವಾದರೆ? ಅವರ ಇನ್ವೆಸ್ಟ್‍ಮೆಂಟ್ ರಿಟರ್ನ್ ಬರುವ ಮಾರ್ಗ ಯಾವುದು?
ಚಿತ್ರದಲ್ಲಿ ಮೂವರು ನಿರ್ಮಾಪಕರು ಸಹ ಅಭಿನಯಿಂಸಿದ್ದರಿಂದಲೋ ಏನೋ, ರಾಹುಲ್ ಹೆಗಡೆ ಚಿತ್ರದ ನಾಯಕ ಎಂಬುವುದನ್ನು ಅರಗಿಸಿಕೊಳ್ಳವುದು ಅಕಟಕಟಾ ಕಷ್ಟ. ಇನ್ನೂ ಚಿತ್ರದ ನಾಯಕಿ ಆಗಿ ಕಹಾನಾ ಬಣ್ಣ ಹಚ್ಚಿದ್ದು, ನವರಸ ಬಿಡಿ, ಒಂದೆರಡು ರಸವನ್ನು ವ್ಯಕ್ತಪಡಿಸುವುದಿಲ್ಲ. ಇನ್ನು, ಅಭಿನಯವನ್ನು ತುಂಬಾ ‘ಈಸೀ’ ಅಂದುಕೊಂಡು ಚಿತ್ರರಂಗಕ್ಕೆ ಬಂದಿರುವ ರಾಹುಲ್ ಭವಿಷ್ಯದ ಬಗ್ಗೆ ಸಿರೀಯಸ್ ಆಗಿ ಯೋಚಿಸೋದು ಬೆಟರ್. ಸಾಕಷ್ಟು ನವನಟರ ಕೈಯಲ್ಲಿ ಜೋಗಿ ಕಾಂದಂಬರಿಯನ್ನಿಟ್ಟು ರಾಜ್‍ಗುರು ನಲುಗಿ ಹೋಗಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ ಅಂದರೆ ಕೇವಲ ಡ್ರಾನ್ ಶಾಟ್‍ಗಳ ಮೂಲಕ ಚಿತ್ರವನ್ನು ಚಂದಗಾಣಿಸೋದು ಅಂದುಕೊಂಡಂತಿದೆ. ನಿಜಕ್ಕೂ ರಾಜ್‍ಗುರು ಮಾತನ್ನು ಬದಿಗೊತ್ತಿ ಎಡಿಟರ್ ರಾಜಣ್ಣ ಮುಲಾಜಿಲ್ಲದೆ ಕತ್ತರಿಪ್ರಯೋಗ ಮಾಡಿದ್ದರೆ ‘ಸಮಯ’ ನೋಡಿದ ಪ್ರೇಕ್ಷಕ ಮೈಪರಚಿಕೊಳ್ಳುತ್ತಿರಲಿಲ್ಲ. ಡಬ್ಬಿಂಗ್ ಸಮಯದಲ್ಲಿ ತುರಿಕಿರುವ ಲಿಪ್‍ಸಿಂಕ್ ಆಗದ ಸಂಭಾಷಣೆಗಳು ಕಿರಿಕಿರಿ ಮಾಡುತ್ತವೆ. ಕಾಮಿಡಿ ಮಾಡಲು ಟ್ರೈ ಮಾಡುವ ಕೆಲವು ಪಾತ್ರಗಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ.
ಈಗ ಆನ್ಲೈನ್ನಲ್ಲಿ ಪ್ರಯೋಗಾತ್ಮಕ ಕನ್ನಡ ಚಿತ್ರಗ ಟ್ರೇಲರ್ದ್ದೇ ದೊಡ್ಡ ಸದ್ದು. ಈಹಿಂದೆ ಸದ್ದುಮಾಡಿದ್ದ, ಉರ್ವಿ, ಶುದ್ಧಿ, ಚಿತ್ರಗಳ ಟ್ರೇಲರ್ಗಳ ಮಧ್ಯೆ ಹೊಸಬರ ಇನ್ನೊಂದು ಚಿತ್ರವೂ ನೋಡುಗರ ಗಮನ ಸೆಳೆದಿದೆ, ಎಂದು ‘ಸಮಯದ ಹಿಂದೆ ಸವಾರಿ’ ಟ್ರೈಲರ್ ನೋಡೊ ಚಿತ್ರ ನೋಡಲು ನೀವು ಯಾರಿಗಾದರು ಹೇಳಿದರೆ, ಮುಂದಿನ ಸಲ ಅವರು ನಿಮ್ಮೆದುರಾದರೆ ನೀವು ಪರಾರಿಯಾಗಬೇಕಾಗುತ್ತದೆ. ಚಿತ್ರ ಅಷ್ಟು ಬೋರ್ ಹೊಡೆಸುತ್ತದೆ. ರಾಜ್ ಗುರು ಹೊಸಕೋಟೆ ಒಂದು ಮರ್ಡರ್ ಮಿಷ್ಟರಿಯನ್ನು ಕೂಡ ಇಷ್ಟೂ ಬೋರ್ ಆಗಿ ತೋರಿಸಬಹುದು ಅನ್ನುವುದನ್ನು ನಿರೂಪಿಸಿದ್ದಾರೆ.
ಬರಹಗಾರ, ಪತ್ರಕರ್ತ ಜೋಗಿ ಇನ್ನುಮುಂದೆ ತಮ್ಮ ಕಥೆ-ಕಾದಂಬರಿ ಹಕ್ಕನ್ನು ನೀಡುವಾಗ ತನ್ನ ಸೃಜನಶೀಲತೆಯ ‘ಬಲಿ’ಯನ್ನು ನೆನಪಲ್ಲಿಟ್ಟುಕೊಳ್ಳಬೇಕು.ರಾಜ್ಗುರು ಹೊಸಕೋಟೆ ರಂಗ ಕ್ಷೇತ್ರದಲ್ಲಿ ಸಂಗೀತಗಾರರಾಗಿ ಹೆಸರು ಮಾಡಿದ್ದಾರೆ. ರಂಗನಟನಾಗಿ ಸಾಕಷ್ಟು ನಟರಿಗೆ ಮಾದರಿ ಅನ್ನಿಸುವಂತಹ ಪಾತ್ರಗಳನ್ನು ಮಾಡಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಅದೇ ರಂಗಾಭಿನಯವನ್ನು ಕ್ಯಾಮರ ಮುಂದಿಟ್ಟಾಗ ಯಾಕೋ ‘ಓವರ್’ ಅನ್ನಿಸಿಬಿಡುತ್ತದೆ. ಅವರು ನಿರ್ವಹಿಸಿದ ಪೋಲಿಸ್ ಪಾತ್ರದ ಗಟ್ಟಿತನ ಮಾಸಿಹೋಗುತ್ತೆ. ಕೆಲ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶಿಸಿದ ನಾಟಕಗಳೆಲ್ಲಾ ಒಂದಕ್ಕಿಂತ ಒಂದು ಅದ್ಭುತ. ಹಾಗಂತ ಅದನ್ನೇ ಬೆಳ್ಳಿತೆರೆಯ ಮೇಲೂ ಪ್ರೂವ್ ಮಾಡಲು ಹೊರಟರೆ, ಇಂತಹ ಅನಾಹತುಗಳು ಸಂಭವಿಸುತ್ತವೆ. ಚಿತ್ರದ ಕ್ಲೈಮಾಕ್ಸ್ ಹಂತದಲ್ಲಿ ದೈವದ ಕೋಲವನ್ನು ಡಾಕ್ಯೂಮೆಂಟರಿ ಥರ ತೋರಿಸುವ ರಾಜ್, ದೈವಕೋಲವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ರಾಜಿ ಮಾಡಿಕೊಳ್ಳುತ್ತಾರೆ.ಒಪ್ಪಿಕೊಳ್ಳೋಣ, ರಂಗತಂಡವೊಂದು ಚಿತ್ರ ಮಾಡುವುದು ಖಂಡಿತಾ ಸುಲಭದ ಸಂಗತಿಯಲ್ಲ. ಆದರೆ, ಚಿತ್ರತಂಡ ಚಿತ್ರ ತೆರೆಗೆ ತರಲು ಪಟ್ಟ ಪಡಾಪಾಡಲಿನ ಸಿಂಪಥಿ ಮೇಲೆ ನೋಡುಗ ನೋಡುವುದಿಲ್ಲವಲ್ಲ? ‘ಮೂರೂ ಚಿಲ್ಲರೆ ವರ್ಷ ಕಾದಿದ್ದು ಸಾರ್ಥಕವಾಯಿತು’ ಅನ್ನುವ ಫೀಲಿಂಗ್ ಅನ್ನೂ ಚಿತ್ರತಂಡಕ್ಕೆ ದಕ್ಕದೇ ಹೋಯಿತೇ ಅನ್ನುವುದು ರಂಗಗೆಳಯರ ಬೇಸರ ಅಷ್ಟೇ. ರಾಜ್‍ಗುರು ಏನಂತಾರೋ?
**********@bcinemas.in
Pingback: Azure DevOps