ಟೈಮ್ ಪಾಸ್

Movie Review: ಟೈಮ್ ಮರೆತು ಟೈಮ್ ಪಾಸ್ ಮಾಡುವ ಸಿನಿಮಾ

ಚಿತ್ರ: ಟೈಮ್ ಪಾಸ್
ನಿರ್ದೇಶನ: ಕೆ ಚೇತನ್ ಜೋಡಿದಾರ್
ನಿರ್ಮಾಪಕರು: ಗುಂಡೂರ್ ಶೇಖರ್, ಕಿರಣ್ ಕುಮಾರ್ ಶೆಟ್ಟಿ ಮತ್ತು ಎಂ ಎಚ್ ಕೃಷ್ಣ ಮೂರ್ತಿ
ತಾರಾಗಣ: ಇಮ್ರಾನ್ ಪಾಶ, ಅಶ್ವಿನಿ, ರಾಮ್, ಪ್ರಭಾಕರ್ ರಾವ್ ಮುಂತಾದವರು.
ರೇಟಿಂಗ್: 3.5

ಆತ ನಿರ್ದೇಶಕನಾಗುವ ಕನಸು ಕಂಡಂಥ ಯುವಕ.‌ ಇಲ್ಲೊಬ್ಬ ನಿರ್ಮಾಣದಲ್ಲಿ ಸೋತು ಸುಣ್ಣವಾದ ನಿರ್ಮಾಪಕ. ಏಳು ಸಿನಿಮಾಗಳಲ್ಲಿ ಗೆಲುವು ಕಾಣದ ನಿರ್ಮಾಪಕನಿಗೆ ಹೊಸ ನಿರ್ದೇಶಕ ಗೆಲುವು ತಂದು ಕೊಡುತ್ತಾನ? ಅದು ಹೇಗೆ ಸಾಧ್ಯ? ಇಂಥದೊಂದು ಕುತೂಹಲಕಾರಿ ವಸ್ತುವನ್ನು ಇಟ್ಟುಕೊಂಡು ಆಕರ್ಷಕವಾಗಿ ಚಿತ್ರ ಮಾಡಿದೆ ಟೈಮ್ ಪಾಸ್ ತಂಡ.

ಬಣ್ಣದ ಲೋಕದ ಕಥೆ ಹೇಳಲು ಹೊರಟರೆ ಕೇಳಲು ನೂರಾರು ಕಿವಿಗಳಿರುತ್ತವೆ. ಅಲ್ಲೊಂದು ಗಾಸಿಪ್ ಗಾಗಿ ಕಾದಿರುವ ಗುಂಪೇ ಇದೆ. ಆದರೆ ಇದು ರಿಯಲ್ ಸ್ಟಾರ್ ಗಳ ಕಥೆಯಲ್ಲ. ಆದರೆ ಚಿತ್ರರಂಗದಲ್ಲಿ ಅವಕಾಶ ಬೇಡುವ ಪ್ರತಿಯೊಬ್ಬ ಆಕಾಂಕ್ಷಿಯ ರಿಯಲ್ ಕಥೆ. ಹೀಗಾಗಿಯೇ ಚಿತ್ರ ನೋಡುವ ಪ್ರತಿಯೊಬ್ಬ ಪ್ರೇಕ್ಷಕನಿಗೂ ಒಂದಲ್ಲ ಒಂದು ಪಾತ್ರ ತಾನೇ ಎನ್ನುವ ಅನುಭವ ನೀಡುತ್ತದೆ. ಅಥವಾ ತಾನು ಹತ್ತಿರದಿಂದ ಕಂಡಿದ್ದೇನೆ ಎನ್ನುವಂತೆ ಮಾಡುತ್ತದೆ.

ಹೇಗಾದರೂ ಮಾಡಿ‌‌ ಒಂದು ಸಿನಿಮಾ ಮಾಡಲೇಬೇಕು ಎನ್ನುವ ಹಠಕ್ಕೆ ಬಿದ್ದಂಥ ಯುವಕನಾಗಿ ಇಮ್ರಾನ್ ಪಾಶ ಕಾಣಿಸಿದ್ದಾರೆ. ಈತನಿಗೆ ಬೆಂಬಲವಾಗಿ ಸಂಗೀತ ನಿರ್ದೇಶಕನ‌‌ ಕನಸುಕಂಡ ಬಾಲನೂ ಬಾಲದಂತೆ ಹಿಂಬಾಲಿಸುತ್ತಾನೆ. ತಂದೆಯ ಹಂಗೇ ಬೇಡ ಎಂದು ಮನೆಬಿಟ್ಟು ಹೊರಡುವಾಗ ತೊಟ್ಟ ಒಳಬಟ್ಟೆಯನ್ನೂ ಅಲ್ಲೇ ಎಸೆದು ನಡೆದಿರುತ್ತಾನೆ ಶಂಕರ್! ಇಂಥದೊಂದು ಛಲದೊಂದಿಗೆ ಸಿನಿಮಾ ನಿರ್ದೇಶನದ ಕನಸು ಕಂಡಾತನ ಕನಸು ಏನಾಗುತ್ತದೆ? ಅರಳುವುದೇ, ಕಮರುವುದೇ ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ.

ನಿರ್ದೇಶಕ ಚೇತನ್ ಜೋಡಿದಾರ್ ಕಥೆಯನ್ನು ಹಾಸ್ಯದೊಂದಿಗೆ ಉಣಬಡಿಸಿದ್ದಾರೆ. ಈ ಹಾಸ್ಯದಲ್ಲಿ ಸಂದರ್ಭಕ್ಕೆ ತಕ್ಕಂತೆ ವಯಸ್ಕರಷ್ಟೇ ನೋಡಬೇಕಾದ ಒಂದಷ್ಟು ದೃಶ್ಯಗಳು ಕೂಡ ಕಾಣಿಸುತ್ತವೆ. ಒಟ್ಟು ಚಿತ್ರವೇ ವಯಸ್ಕರ ಚಿತ್ರವಾದ ಕಾರಣ, ಸಿನಜಮಾ ನೋಡಲು ಬರುವ ಪ್ರೇಕ್ಷಕ ವರ್ಗ ಅದಕ್ಕೆ ಸಿದ್ಧವಾಗಿಯೇ ಇರುತ್ತದೆ. ಇದೇ ಸಂಧರ್ಭದಲ್ಲಿ ಮ್ಯಾನೇಜರ್ ಪಾತ್ರಧಾರಿ ನವೀನ್ ಮಹಾಬಲೇಶ್ ನಗಿಸುವಲ್ಲಿ ಯಶಸ್ಸಾಗುತ್ತಾರೆ.

ಟೈಮ್ ಪಾಸ್ ಸಿನಿಮಾ ನೋಡುತ್ತಾ ಟೈಮ್ ಸರಿದದ್ದೇ ತಿಳಿಯುವುದಿಲ್ಲ. ಇದಕ್ಕೆ ಸಿನಿಮಾದ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನವೂ ಕಾರಣ. ರಸ್ತೆ ಬದಿ ವ್ಯಾಪಾರಿ ಮತ್ತು ಖಳಪಾತ್ರಧಾರಿಯಾಗಿ ಒಬ್ಬರನ್ನೇ ತೋರಿಸಿರುವ ನಿರ್ದೇಶಕರ ಧೈರ್ಯ ಮೆಚ್ಚಲೇಬೇಕು. ಸಿನಿಮಾದೊಳಗಿನ ಸಿನಿಮಾ ಕಥೆಯಂತೆ ಇದು‌ ಕೂಡ ಪ್ರಯೋಗಾತ್ಮಕ ಚಿತ್ರ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!