ಚಿತ್ರ ವಿಮರ್ಶೆ : ಮೌಢ್ಯ ನಿರಂತರ; ವಂಚನೆ ಅಮರ..!

ಮೌಢ್ಯ ನಿರಂತರ; ವಂಚನೆ ಅಮರ..

ಚಿತ್ರ: ಮತ್ತೆ ಉದ್ಭವ
ತಾರಾಗಣ: ಪ್ರಮೋದ್, ಮಿಲನಾ ನಾಗರಾಜ್, ರಂಗಾಯಣ ರಘು

ರೆಟಿಂಗ್ 3.5/5

ಮೂರು ದಶಕದ ಹಿಂದೆ ತೆರೆಕಂಡ ಉದ್ಭವ ಸಿನಿಮಾದ ಎರಡನೇ ಭಾಗ `ಮತ್ತೆ ಉದ್ಭವ’ ಹೆಸರಿನಲ್ಲಿ ತೆರೆಗೆ ಬಂದಿದೆ. ಉದ್ಭವದಲ್ಲಿ ಅನಂತನಾಗ್ ನಾಯಕರಾಗಿದ್ದರು. ಮತ್ತೆ ಉದ್ಭವದಲ್ಲಿ ಅವರ ಪಾತ್ರವನ್ನು ರಂಗಾಯಣ ರಘು ಮುಂದುವರಿಸಿದ್ದಾರೆ. ಆದರೆ ಇಲ್ಲಿ ರಘು ಅವರ ಪುತ್ರನ ಪಾತ್ರ ನಿರ್ವಹಿಸಿದ ಪ್ರಮೋದ್ ಚಿತ್ರಕ್ಕೆ ನಾಯಕರಾಗಿದ್ದಾರೆ.

‘ಉದ್ಭವ’ ಚಿತ್ರ ನೋಡಿದವರಿಗೆ ಗಣೇಶನ ಮೂರ್ತಿ ತಂದಿಟ್ಟು, ಅದನ್ನು ಉದ್ಭವ ಗಣೇಶನನ್ನಾಗಿಸಿ ಜನರನ್ನು ಮೋಸಗೊಳಿಸಿ ದುಡ್ಡು ಮಾಡಿದ ನಾಯಕ ನೆನಪಿರುತ್ತಾನೆ. ಒಂದು ವೇಳೆ ಚಿತ್ರ ನೋಡಿರದಿದ್ದರೂ, ಅದನ್ನು ಅರ್ಥ ಮಾಡಿಕೊಂಡು ಮುಂದುವರಿಯುವ ಮುನ್ಸೂಚನೆ ಈ ಚಿತ್ರದಲ್ಲಿದೆ. ಅಂದು ಗುಡಿಯಂತಿದ್ದ ಗಣೇಶ ದೇವಾಲಯ ಇಂದು ಗೋಪುರಗಳುಳ್ಳ ದೊಡ್ಡ ಆರಾಧನಾ ಕ್ಷೇತ್ರವಾಗಿ ಮುಂದುವರಿದಿದೆ. ಆದರೆ ಭಕ್ತರಿಲ್ಲ ಎನ್ನುವ ಕೊರಗನ್ನು ದೂರ ಮಾಡಲು ಧರ್ಮದರ್ಶಿ ರಾಘವೇಂದ್ರ ರಾಯರು (ರಂಗಾಯಣ ರಘು) ಮತ್ತು ಕಿರಿಯ ಪುತ್ರ ಗಣೇಶ (ಪ್ರಮೋದ್) ಸೇರಿಕೊಂಡು ನಡೆಸುವ ಪ್ರಹಸನದ ಮೂಲಕ ಕತೆ ಶುರುವಾಗುತ್ತದೆ.

ಚಿತ್ರದಲ್ಲಿ ಕತೆ ಎನ್ನುವುದಕ್ಕಿಂತ ಸಮಾಜದಲ್ಲಿ ಮೂಢರನ್ನು ಹೇಗೆಲ್ಲ ವಂಚಿಸಬಹುದು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಘಟನಾವಳಿಗಳು ಇವೆ. ಹಾಗಾಗಿ ಅದರ ನಡುವೆ ಬರುವ ಪ್ರೇಮಕತೆ ಕೂಡ ವಂಚನೆಗೆ ಸಿಗುವ ಗೆಲುವಿನ ಮತ್ತೊಂದು ಸಾಕಾರ ರೂಪವೇ ಆಗಿದೆ. ಜತೆಗೆ ಪ್ರೀತಿಗಿಂತಲು ಪರಿಸರ ಪ್ರೇಮಿಯಾಗಿರುವ ಜನಪ್ರಿಯ ನಟಿಯನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನವೇ ಪ್ರಮುಖವಾಗಿ ತೋರಿಸಲಾಗಿದೆ. ಆದರೆ `ಮಳೆಯಲ್ಲಿ ನಿಂತು ನೆನೆವಾಗ ನಿನ್ನ..’ ಗೀತೆ ವಿ ಮನೋಹರ್ ಅವರ ಸಂಗೀತದಲ್ಲಿ ಆಕರ್ಷಕ ಯುಗಳ ಗೀತೆಯಾಗಿ ಮೂಡಿ ಬಂದಿದೆ. ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ತಮ್ಮದೇ ಶೈಲಿಯಲ್ಲಿ ಪ್ರಚಲಿತದಲ್ಲಿರುವ ನೈಜ ಘಟನೆಗಳನ್ನು ಇರಿಸಿಕೊಂಡೇ ಅವುಗಳ ತಲೆಮೇಲೆ ಹೊಡೆಯುವಂಥ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಅದಕ್ಕೆ ಒಗ್ಗರಣೆ ಹಾಕುವ ರೀತಿಯಲ್ಲಿ ಮೋಹನ್ ಅವರ ಸಂಭಾಷಣೆಗಳಿವೆ. ಇಲ್ಲಿ ಸಂಭಾಷಣೆಯೊಂದಿಗೆ ಕಾಮಿಸ್ವಾಮಿ ರಾಧಾಕೃಷ್ಣನಾಗಿ ನಟಿಸಿದ್ದಾರೆ. ಅವರಿಂದ ಮೋಸ ಹೋಗುವ ಸಮೀಪ ಎನ್ನುವ ಮಹಿಳೆಯ ಪಾತ್ರವನ್ನು ಶುಭರಕ್ಷಾ ನಿರ್ವಹಿಸಿದ್ದಾರೆ.

ನಾಯಕನಾಗಿ ಪ್ರಮೋದ್ ಅವರಿಗೆ ಇದು ಈ ಹಿಂದಿಗಿಂತ ವಿಭಿನ್ನವಾದ ಪಾತ್ರ. ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಯಾವುದೇ ಭಾವವನ್ನು ಕೂಡ ಸರಿಯಾಗಿ ನಿಭಾಯಿಸಬಲ್ಲೆ ಎಂದು ಅವರು ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಸ್ಪಂದನಾ ಎನ್ನುವ ಪರಿಸರ ಪ್ರೇಮಿ ನಟಿಯಾಗಿ ಮಿಲನಾ ನಾಗರಾಜ್ ಪಾತ್ರಕ್ಕೆ ಜೀವ ನೀಡಿದ್ದಾರೆ. ತಮಗೆ ಯಾವ ಪಾತ್ರ ಸಿಕ್ಕರೂ ಅವುಗಳ ಮೂಲಕ ಕನ್ನಡದ ಸಹಜನಟಿಯಾಗಿ ಛಾಪು ಮೂಡಿಸುವ ಶಕ್ತಿ ತಮ್ಮಲ್ಲಿದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಉಳಿದಂತೆ ರಾಜಕಾರಣಿ ರಂಗನಾಥ ರೆಡ್ಡಿಯಾಗಿ ಅವಿನಾಶ್ ತಮ್ಮ ಎಂದಿನ ಖದರ್ ತೋರಿಸಿದ್ದಾರೆ. ಚೈತನ್ಯಾನಂದ ಸ್ವಾಮಿಯಾಗಿ ನರೇಶ್, ಧರ್ಮದರ್ಶಿಯಾಗಿ ರಂಗಾಯಣ ರಘು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗಣೇಶನ ಅಣ್ಣ ಸ್ವರೂಪನಾಗಿ ಮಂಡ್ಯ ರವಿ, ತಾಯಿಯಾಗಿ ಸುಧಾ ಬೆಳವಾಡಿ, ನ್ಯಾಯಾಧೀಶೆಯಾಗಿ ವಿನಯಾ ಪ್ರಸಾದ್ ನಟಿಸಿದ್ದಾರೆ.

ಸಮಾಜದಲ್ಲಿ ಇಂದು ಎಡಪಂಥ ಮತ್ತು ಬಲಪಂಥವಾದಿಗಳ ನಡುವಿನ ಚರ್ಚೆ, ಜಗಳ, ಕಾದಾಟ ಸಾಮಾನ್ಯವೆನಿಸಿದೆ. ಆದರೆ ಈ ಪಂಥಗಳ ನಡುವೆ ಬುದ್ಧಿವಂತ ಹೇಗೆ ಎರಡನ್ನೂ ನಂಬದೇ ಲಾಭ ಮಾಡಿಕೊಳ್ಳುತ್ತಾನೆ ಮತ್ತು ಇತರರಿಗೆ ಹೇಗೆಲ್ಲ ಮೋಸ ಮಾಡುತ್ತಾನೆ ಎನ್ನುವುದನ್ನು ನೈಜ ಘಟನೆಗಳ ಹೋಲಿಕೆ ಇರಿಸಿಕೊಂಡೇ ತೋರಿಸಿದ್ದಾರೆ ನಿರ್ದೇಶಕರು. ಚಿತ್ರ ಮನರಂಜನೆಯ ಜತೆಯಲ್ಲೇ ನಮ್ಮೊಳಗಿನ ಮೋಸಗಾರರ ಬಗ್ಗೆ ಒಂದು ಎಚ್ಚರಿಕೆಯನ್ನು ಕೂಡ ನೀಡುತ್ತದೆ.

-ಶಶಿಕರ ಪಾತೂರು

Be the first to comment

Leave a Reply

Your email address will not be published. Required fields are marked *

Translate »
error: Content is protected !!