ಸಖತ್ ಆಗಿಯೇ ಮೂಡಿ ಬಂದ ಸಖತ್ ಚಿತ್ರ
ಚಿತ್ರ: ಸಖತ್
ನಿರ್ದೇಶನ: ಸುನಿ
ನಿರ್ಮಾಣ: ನಿಶಾ ವೆಂಕಟ್ ಕೋಣಂಕಿ ,ಸುಪ್ರಿತ್
ತಾರಾಗಣ: ಗೋಲ್ಡನ್ ಸ್ಟಾರ್ ಗಣೇಶ್, ನಿಶ್ವಿಕಾ ನಾಯ್ಡು ಮೊದಲಾದವರು
ಬಿಸಿನಿಮಾಸ್ ರೇಟಿಂಗ್ : 4/5
ಬಾಲು ಬಾಲಕನಾಗಿದ್ದಾಗಲೇ ತುಂಟ. ಎಲ್ಲರಿಗಿಂತ ವಿಭಿನ್ನ. ಬೆಳೆದ ಮೇಲೆಯೂ ಬದಲಾಗಿಲ್ಲ ಎನ್ನುವುದು ಆತನ ವಿಶೇಷ ಗುಣ. ಆರ್ಕೆಸ್ಟ್ರಾ ತಂಡದಲ್ಲಿ ಗಾಯಕನಾಗಿದ್ದವನು ರಿಯಾಲಿಟಿ ಶೋ ನಿರೂಪಕಿಯ ಮೇಲಿನ ಪ್ರೀತಿಗಾಗಿ ನಗರಕ್ಕೆ ಬರುತ್ತಾನೆ. ಏನಾದರೂ ಕುಂದು ಇರುವ ಸ್ಪರ್ಧಿಗಳಿಗೆ ಮಾತ್ರ ಶೋಗಳಲ್ಲಿ ಪ್ರೋತ್ಸಾಹ ದೊರಕುತ್ತದೆ ಎನ್ನುವ ಕಾರಣಕ್ಕಾಗಿ ತಾನು ಒಬ್ಬ ಅಂಧನಂತೆ ನಟಿಸುತ್ತಾನೆ. ಆದರೆ ಅದರಿಂದ ಎದುರಿಸಬೇಕಾಗಿ ಬಂದ ಸಮಸ್ಯೆಗಳೇನು ಎನ್ನುವುದೇ ಚಿತ್ರದ ಪ್ರಮುಖ ಅಂಶ.
ಒಂದು ರೀತಿಯಲ್ಲಿ ನೋಡಿದರೆ ಅಂಧನಂತೆ ನಟಿಸಿದ್ದಕ್ಕೆ ಮಾತ್ರ ಸಮಸ್ಯೆ ಎದುರಾಗಿರುವುದಿಲ್ಲ. ಆ ಪಾತ್ರದಲ್ಲಿದ್ದುಕೊಂಡು ಕೂಡ ಇತರರಿಗೆ ಸಹಾಯ ಮಾಡಬೇಕು ಎಂದು ಮುಂದಾಗುತ್ತಾನಲ್ಲ? ಆ ಕಾರಣಕ್ಕಾಗಿ ಸಮಸ್ಯೆ ಎದುರಿಸುತ್ತಾನೆ. ಅದಕ್ಕೆ ತಕ್ಕಂತೆ ಚಿತ್ರದಲ್ಲಿ ಒಂದು ಸಂಭಾಷಣೆ ಇದೆ “ಬಾಲು ಕಣ್ಣಿಲ್ಲದ ಕುರುಡನಂತೆ ಸುಲಭವಾಗಿ ನಟಿಸಬಲ್ಲ.ಆದರೆ ಮನುಷ್ಯತ್ವ ಇರದಂತೆ ಆಕ್ಟ್ ಮಾಡುವುದು ಆತನಿಂದ ಸಾಧ್ಯವಿಲ್ಲ” ಎಂದು. ಅದರಂತೆ ಚಿತ್ರದಲ್ಲಿ ಹಾಸ್ಯ, ಕೀಟಲೆ, ಸಂದೇಶಗಳ ಜೊತೆಗೆ ಒಂದು ಮನುಷ್ಯತ್ವದ ಗೆಲುವಿನ ಕತೆ ಇದೆ.
ಬಾಲುವಾಗಿ ಗಣೇಶ್ ಎಂದಿನಂತೆ ಲವಲವಿಕೆಯ ಯುವಕ. ಆದರೆ ಕಣ್ಣು ಕಾಣಿಸುತ್ತಿಲ್ಲ ಎನ್ನುವ ಒಂದು ಸನ್ನಿವೇಶದಲ್ಲಿ ಅವರ ನಟನೆ ನಿಜಕ್ಕೂ ಆಕರ್ಷಕ. ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಇಬ್ಬರು ನಟಿಯರಿದ್ದಾರೆ. ನಿರೂಪಕಿ ಮಯೂರಿಯಾಗಿ ನಟಿಸಿರುವ ಅವರು ಭರವಸೆ ಮೂಡಿಸುತ್ತಾರೆ. ನಿಶ್ವಿಕಾ ನಾಯ್ಡು ಅಂಧೆಯ ಪಾತ್ರದಲ್ಲಿದ್ದರೂ ಅಂದವಾಗಿಯೇ ಕಾಣಿಸುತ್ತಾರೆ. ಗಣೇಶ್ ಸ್ನೇಹಿತನಾಗಿ ಸಾಧುಕೋಕಿಲ ರುಚಿಗೆ ತಕ್ಕಂತೆ ಬಂದುಹೋಗುತ್ತಾರೆ. ಕಾರ್ಪೊರೇಟರ್ ಮಹಾಬಲನಾಗಿ ಶೋಭರಾಜ್ ಚಿತ್ರಕ್ಕೆ ಒಂದು ಬಲ ತಂದುಕೊಟ್ಟಿದ್ದಾರೆ.
ನಟ ರಾಮಕೃಷ್ಣ ಅವರು ಒಂದು ವಿಭಿನ್ನ ಪಾತ್ರವಾಗಿ ಚಿತ್ರದ ತುಂಬ ಉಳಿಯುತ್ತಾರೆ. ರಂಗಾಯಣ ರಘು ಲಾಯರ್ ಪಾತ್ರ ಮಾಡಿದರೂ ಅದರಲ್ಲಿ ಕೂಡ ತಮ್ಮ ವೈವಿಧ್ಯತೆಯ ಮೂಲಕ ಗಮನ ಸೆಳೆಯುತ್ತಾರೆ. ರವಿಶಂಕರ್ ಗೌಡ ಅವರು ಕೂಡ ಒಬ್ಬ ಲಾಯರ್ ಪಾತ್ರ ಮಾಡಿದ್ದಾರೆ.
ನಿರ್ದೇಶಕ ಸುನಿ ಎಂದಿನಂತೆ ತಮ್ಮ ಸಂಭಾಷಣೆಗಳ ಮೂಲಕ ಗಮನ ಸೆಳೆಯುತ್ತಾರೆ. ಹಾಡುಗಳಲ್ಲಿ ದೃಶ್ಯ ಕಾವ್ಯ ಮೂಡಿದೆ. ಒಟ್ಟಿನಲ್ಲಿ ಕುಟುಂಬ ಸಮೇತ ಬರುವ ಪ್ರೇಕ್ಷಕರಿಗೆ ಮನೋರಂಜನೆ ನೀಡುವ ಚಿತ್ರವಾಗಿ ಸಖತ್ ಮೂಡಿ ಬಂದಿದೆ.
@ಬಿಸಿನಿಮಾಸ್ ಡಾಟ್ ಇನ್
Be the first to comment