ವಾರಕ್ಕೆ ಐದಾರು ಚಿತ್ರ ಬಿಡುಗಡೆಯಾದರೆ ಪ್ರೇಕ್ಷಕ ಯಾವುದನ್ನು ನೋಡುತ್ತಾನೆ.. ಅನ್ನುವ ಗೊಂದಲದ ನಡುವೆಯೇ ನಿರ್ದೇಶಕ ವಿನಯ್ ಬಾಲಾಜಿ ಅವರ ಪ್ರಕಾರ ‘ಉತ್ತಮ ಚಿತ್ರವನ್ನು ಪ್ರೇಕ್ಷಕ ಬೆಂಬಲಿಸುತ್ತಾನೆ’ ಅನ್ನುವ ನಂಬಿಕೆಯೊಂದಿಗೆ `ನನ್ನ ಪ್ರಕಾರ’ ರಿಲೀಸ್ ಮಾಡಿದ್ದಾರೆ. ರಿಸ್ಕ್ ತಗೊಂಡು ರಿಲೀಸ್ ಆದ ಚಿತ್ರ ಹೇಗಿದೆ?
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು’ ಅನ್ನುವ ಬೇಸ್ ಮೇಲೆ ನಿಂತಿರುವ ಚಿತ್ರ ‘ನನ್ನ ಪ್ರಕಾರ’. ಒಂದು ಸತ್ಯದ ಬೆನ್ನಟ್ಟಿ ಹೋದಾಗ ಹಲವು ಸತ್ಯಗಳು ಹೇಗೆ ಒಂದರ ಹಿಂದೆ ಒಂದರಂತೆ ಎದುರಾಗುತ್ತವೆ, ಆ ಸತ್ಯಗಳು ಹಲವರ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿನಯ್ ಸಮರ್ಥವಾಗಿ ಹೇಳಿದ್ದಾರೆ.
ಆಕ್ಸಿಡೆಂಟ್ ಆಗಿ, ಅರ್ಧಂಬರ್ಧ ಉರಿದು ಹೋಗಿರುವ ಕಾರು. ಅಲ್ಲೊಂದು ಡೆಡ್‍ಬಾಡಿ. ಅದು ಮರ್ಡರಾ? ಸುಸೈಡಾ? ಅಥವಾ ಆಕ್ಸಿಡೆಂಟಾ? ಈ ದ್ವಂದ್ವಗಳನ್ನು ಬೇಧಿಸಲು ಹೊರಡುವ ತನಿಖಾಧಿಕಾರಿ ಅಶೋಕ್ (ಕಿಶೋರ್). ತನಿಖೆಯ ಹಾದಿಯಲ್ಲಿ ಆ ಅಧಿಕಾರಿಗೆ ಮೂಡುವ ಹಲವು ಸಂದೇಹಗಳು. ಹೇಳಿಕೆಗಳು, ಸಾಕ್ಷಿಗಳು, ಸಾಕ್ಷ್ಯಾಧಾರಗಳು ಹೀಗೆ ಇಡೀ ಸಿನಿಮಾ ಕ್ಯೂರಿಯಾಸಿಟಿ ಮೂಡಿಸುತ್ತಲೇ ಸಾಗುತ್ತದೆ. ವಿನಯ್ ಸ್ಕ್ರೀನ್‍ಪ್ಲೇ ಬೋರ್ ಹೊಡೆಸದೆ ಸಾಗುತ್ತದೆ ಸಮಸ್ಯೆಗೊಂದು ಪರಿಹಾರ ಸಿಕ್ಕಿತು ಎನ್ನುವಷ್ಟರಲ್ಲಿ, ಅನುಮಾನದ ಮತ್ತೊಂದು ಕೊಂಡಿ ಜತೆಯಾಗುತ್ತದೆ. ಅನುಮಾನಗಳ ಬೆನ್ನಟ್ಟಿ ಹೋಗುವ ಅಶೋಕ್ ಬದುಕಿನ ಫ್ಲಾಶ್‍ಬ್ಯಾಕ್‍ಗಳು ಕಥೆಯೊಂದಿಗೆ ಬೆಸೆದುಕೊಳ್ಳುವ ರೋಚಕ ಸನ್ನಿವೇಶಗಳನ್ನು ನೋಡಿಯೇ ಅನುಭವಿಸಬೇಕು.
ಸತ್ಯ ಆ ಕ್ಷಣದಲ್ಲಿ ಸುಳ್ಳಾಗಿ, ಮತ್ತೊಂದು ಸತ್ಯಕ್ಕೆ ಆಹ್ವಾನಿಸುತ್ತದೆ. ಇಂಥದ್ದೊಂದು ಸಂಕೀರ್ಣದ ಕಥೆಯನ್ನು ಹೇಳುವಾಗ ಪ್ರೇಕ್ಷಕನಿಗೆ ಗೊಂದಲ ಮೂಡುವುದು ಸಹಜ. ಆದರೆ, ಈ ಸಿಮಾದಲ್ಲಿ ಎಲ್ಲಿಯೂ ಕನ್‌ಫ್ಯೂಸ್‌ಗೆ ಆಸ್ಪದ ಕೊಟ್ಟಿಲ್ಲ ವಿನಯ್. ಸಸ್ಫೆನ್ಸ್ ಜಾನರ್‍ನ ಚಿತ್ರವಾದ್ದರಿಂದ ಒಂದಷ್ಟು ಕನ್‍ಫ್ಯೂಸ್ ಮಾಡುವ ಅವಕಾಶವಿದ್ದರೂ ವಿನಯ್ ಈ ಅವಕಾಶವನ್ನು ಕೈಚೆಲ್ಲಿದ್ದಾರೆ. ನೋಡುಗನನ್ನು ಕನಫ್ಯೂಸ್ ಮಾಡಿದ್ದರೆ. ಚಿತ್ರ ಇನ್ನಷ್ಟು ನೋಡೆಬಲ್ ಆಗುತ್ತಿತ್ತು.
ಒಂದು ಕಡೆ ಅಶೋಕ್ ಎಲ್ಲಾ ಅನುಮಾದ ಹುತ್ತಗಳನ್ನು ಒಡೆಯುತ್ತಿದ್ದರೆ ನೋಡುಗನ ತಲೆಯಲ್ಲಿ ತನ್ನದೇ ಸ್ಕ್ರೀನ್‍ಪ್ಲೇ ಓಡುತ್ತಲೇ ಇರುತ್ತದೆ. ಹಾಗಾಗಿ ಚಿತ್ರದ ಟೈಟಲ್ ‘ನನ್ನ ಪ್ರಕಾರ’ ಆಪ್ಟ್ ಆಗಿದೆ. ಚಿತ್ರದಲ್ಲಿ ರೋಚಕ ಟ್ವಿಸ್ಟ್‍ಗಳನ್ನು ಸುಖಾಸುಮ್ಮನೆ ಕೊಟ್ಟು, ಕೊನೆಯಲ್ಲಿ ಅದಕ್ಕೊಂದು ಲಾಜಿಕ್ ಇಲ್ಲದ ‘ಶುಭಂ’ ಕಲ್ಪಿಸೋದು ಇತ್ತೀಚಿಗಿನ ಸಾಕಷ್ಟು ನಿರ್ದೇಶಕರ ಹೊಸ ಲಾಜಿಕ್! ಆದರೆ ವಿನಯ್ ಪ್ರತಿಯೊಂದು ಟ್ವಿಸ್ಟ್‍ಗಳಿಗೂ ಲಾಜಿಕ್ ಕಲ್ಪಿಸುತ್ತಾರೆ. ಮತ್ತೆ, ಆ ಅಷ್ಟೂ ಲಾಜಿಕ್‍ಗಳೂ ಸತ್ಯಕ್ಕೆ ಹತ್ತಿರದ್ದಾಗಿರುತ್ತದೆ. ಇದರಿಂದ ವಿನಯ್ ಪ್ರೀಪ್ರೊಡಕ್ಷನ್ ಅನ್ನು ಸಿರೀಯಸ್ ಆಗಿ ತೆಗೆದುಕೊಂಡಿದ್ದು ಅರ್ಥ ವಾಗುತ್ತದೆ.
ವಿನಯ್ ಅವರ ಅಪರೋಪದ ಸ್ಕ್ರೀನ್‍ಪ್ಲೇಗೆ ನಟರಾದ ಕಿಶೋರ್, ಪ್ರಿಯಾಮಣಿ, ಮಯೂರಿ, ಪ್ರಮೋದ್ ಶೆಟ್ಟಿ ಪ್ರಾಮಾಣಿಕ ಕೆಲಸ ಮಾಡಿದ್ದಾರೆ. ನಿರಂಜನ್, ಗಿರಿಜಾ ಲೋಕೇಶ್, ಅರ್ಜುನ್ ಯೋಗಿ ಸೇರಿದಂತೆ ಬಹುತೇಕ ಕಲಾವಿದರು ತಮ್ಮ ಪಾತ್ರಗಳ ಹಿನ್ನೆಲೆ ಅರಿತು ಜೀವ ತುಂಬಿದ್ದಾರೆ.
ಕಿಶೋರ್ ಮಾತಿಗಿಂತ ನೋಟದಲ್ಲೇ ಇಡೀ ಸಿನಿಮಾ ಸಾಗಿಸುತ್ತಾರೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಕಿಶೋರ್‍ನಂತಹ ನಟನ ಆಯ್ಕೆ ಸೂಕ್ತ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಕಾಮಿಡಿ ಬಂದರೆ ಹೇಗಿರುತ್ತದೆ? ಇಡ್ಲಿಗೆ ಸಾಂಬರ್ ಬದ್ಲು ಪಲ್ಯ ಕೊಟ್ಟಂಗಿರುತ್ತದೆ ಅಲ್ಲವೇ.. ಆದರೆ ವಿನಯ್ ಇಲ್ಲೂ ಸಿಚುವೇಶನ್ ಕಾಮಿಡಿಯನ್ನು ಸೃಷ್ಟಿಸಿ ಗೆದ್ದಿದ್ದಾರೆ. ಅರ್ಜುನ್ ರಾಮು ಮ್ಯೂಸಿಕ್ ಸೂಪರ್. ಸಿನಿಮಾಟೋಗ್ರಫರ್ ಮನೋಹರ್ ಜೋಷಿ ಕಲರ್‍ಗ್ರೇಡಿಂಗ್‍ಗೂ ಹೆಚ್ಚು ತಲೆಕೆಡಿಸಿಕೊಂಡಿದ್ದರೆ, ವಿನಯ್ ಕಥೆ ಇನ್ನೊಂದು ಲೆವೆಲ್‍ಗೆ ಹೋಗುತ್ತಿತ್ತು. ಕಲರ್‍ಗ್ರೇಡಿಂಗ್ ಕೂಡ ಸಿನಿಮಾಟೋಗ್ರಫರ್‍ನ ಕೆಲಸ ಅನ್ನೋದು ಗೊತ್ತಿದ್ದೂ ನಿರ್ಲಕ್ಷ್ಯ ಮಾಡಿದ್ರಾ? ಇನ್ನು, ನಿರ್ಮಾಪಕ ಗುರುರಾಜ್.ಎಸ್ ಒಂದಷ್ಟು ಸ್ನೇಹಿತರನ್ನು ಗುಡ್ಡೆಹಾಕಿ, ವಿನಯ್ ಬಾಲಾಜಿಯಂತಹ ಪ್ರತಿಭೆಯನ್ನು ಚಿತ್ರ ನಿರ್ಮಿಸುವುದರ ಮೂಲಕ ಕನ್ನಡಕ್ಕೆ ಪರಿಚಿಯಿಸಿದ್ದು ಎಲ್ಲಕ್ಕಿಂತ ಗ್ರೇಟ್ ಕೆಲ್ಸ ಅಲ್ವಾ?
ಅಂದಹಾಗೆ, ಇದು ನಮ್ಮ ಪ್ರಕಾರ’ ಚಿತ್ರದ ವಿಮರ್ಶೆ. ಚಿತ್ರ ನೋಡಿ ಇಷ್ಟವಾದರೆ ‘ನಿಮ್ಮ ಪ್ರಕಾರ’ ಚಿತ್ರ ಹೇಗಿದೆ ಎಂಬುದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಿ. ಪ್ರಮಾಣಿಕ ಪ್ರಯತ್ನವೊಂದು ಗೆಲ್ಲಲಿ ಅನ್ನುವುದಷ್ಟೇ ಕಾಳಜಿ.
Rating ****
ವಿಮರ್ಶೆ : ಭೀಮರಾಯ
Pingback: 호두코믹스