ಕನ್ನಡದ ಸೂಪರ್ ಹಿಟ್ ಚಿತ್ರ ‘ಕೆಜಿಎಫ್’ನಲ್ಲಿ ನಟ ಯಶ್ ಜೊತೆ ಸೊಂಟ ಬಳುಕಿಸಿದ್ದ ನಟಿ ಮೌನಿ ರಾಯ್ ವೈವಾಹಿಕ ಬದುಕಿನ ಕಡೆಗೆ ಹೆಜ್ಜೆ ಹಾಕಿದ್ದಾರೆ.
ಮೌನಿ ರಾಯ್ ತಮ್ಮ ಬಾಯ್ ಫ್ರೆಂಡ್ ಸೂರಜ್ ಅವರನ್ನು ಜನವರಿ 27 ರಂದು ಗೋವಾದ ವಾಗೋಟರ್ ಬೀಚ್ ಬಳಿಯ ಐಷಾರಾಮಿ ಹೋಟೆಲ್ ಒಂದರಲ್ಲಿ ಮದುವೆ ಆಗಲಿದ್ದಾರೆ. ಇದಕ್ಕಾಗಿ ಎರಡೂ ಕುಟುಂಬಗಳ ಸಿದ್ಧತೆ ನಡೆಸಿವೆ.
ಈ ಮೊದಲು ಮೌನಿ ರಾಯ್ ವಿದೇಶದಲ್ಲಿ ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಯೋಜನೆ ಬದಲಾಗಿದೆ. ಗೋವಾದಲ್ಲಿ ಕಡಲ ತಡಿಯಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಲಿದೆ.
ಮೌನಿ ರಾಯ್ ಅವರ ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್ ದುಬೈಯಲ್ಲಿ ವಾಸವಿದ್ದಾರೆ. ಮೌನಿ ರಾಯ್ ಅವರು ಸೂರಜ್ ನ್ನು ಭೇಟಿಯಾಗಲು ದುಬೈಗೆ ಹಾರುತ್ತಿದ್ದರು. ಕೆಲವು ತಿಂಗಳ ಹಿಂದೆಯಷ್ಟೆ ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಭೇಟಿಯಾಗಿ ಮದುವೆಗೆ ಸಮ್ಮತಿ ಸೂಚಿಸಿದ್ದಾರೆ.
ಮೌನಿ ರಾಯ್ ವಿವಾಹದ ಬಗ್ಗೆ ಈ ಮೊದಲು ಗಾಳಿ ಸುದ್ದಿ ಹರಿದಾಡಿತ್ತು. ಈಗ ವಿವಾಹದ ಮೂಲಕ ಇದಕ್ಕೆ ತೆರೆ ಬಿದ್ದಿದೆ. ಬೀಚ್‌ನಲ್ಲಿ ಮದುವೆ ಶಾಸ್ತ್ರಗಳ ಜೊತೆಗೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಮದುವೆಗೆ ಆಗಮಿಸಲಿರುವ ಅತಿಥಿಗಳ ಪಟ್ಟಿ ಅಂತಿಮ ಆಗಿದೆ ಎನ್ನಲಾಗಿದ್ದು, ಕಲಾವಿದರು ಮದುವೆಯಲ್ಲಿ ಭಾಗಿಯಾಗಲಿದ್ದಾರೆ.
ಮೌನಿ ರಾಯ್ ಧಾರಾವಾಹಿಗಳಲ್ಲಿ ನಟಿಸಿ ಬಳಿಕ ಸಿನಿಮಾದ ಕಡೆ ಹೆಜ್ಜೆ ಹಾಕಿದರು. ಹಲವು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿಯೂ ಮೌನಿ ರಾಯ್ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ ಸಿನಿಮಾದಲ್ಲಿ ‘ಗಲಿ ಗಲಿ’ ಹಾಡಿನಲ್ಲಿ ಮೌನಿ ರಾಯ್ ನರ್ತಿಸಿದ್ದು ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.
___

Be the first to comment