ಮೌನಿ ರಾಯ್ ಈಗ ರಾಜ್ಕುಮಾರ್ ರಾವ್ ಜೊತೆ ಮೇಡ್ ಇನ್ ಚೈನಾ!
ಕಿರುತೆರೆಯ ಜನಪ್ರಿಯ ತಾರೆ ಮೌನಿ ರಾಯ್ಗೆ ಬಾಲಿವುಡ್ನಲ್ಲಿ ಅವಕಾಶಗಳ ಬಾಗಿಲು ತೆರೆಯುತ್ತಿದೆ. ಅಕ್ಷಯ್ ಕುಮಾರ್ ಜೊತೆ ಗೋಲ್ಡ್ ಸಿನಿಮಾ ಮೂಲಕ ಬಿ-ಟೌನ್ಗೆ ಎಂಟ್ರಿಯಾಗುತ್ತಿರುವ ಮೌನಿ ರಾಯ್ ಈಗ ರಾಜ್ಕುಮಾರ್ ರಾವ್ ಜೊತೆ ಮೇಡ್ ಇನ್ ಚೈನಾ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿದ್ದಾಳೆ. ಗುಜರಾತಿ ನಿರ್ದೇಶಕ ಮಿಖಿಲ್ ಮುಸಾಲೆ ಈ ಸಿನಿಮಾದ ನಿರ್ದೇಶಕರು. ಸೆಪ್ಟಂಬರ್ನಿಂದ ಮುಂಬೈನಲ್ಲಿ ಶೂಟಿಂಗ್ ಆರಂಭವಾಗಲಿದ್ದು, ನಂತರ ಗುಜರಾತ್ ಹಾಗೂ ಚೀನಾದ ಪ್ರಮುಖ ನಗರಗಳಲ್ಲಿ ಚಿತ್ರೀಕರಣ ಮುಂದುವರಿಯಲಿದೆ.
ಈ ಚಿತ್ರದಲ್ಲಿ ರಾಜ್ಕುಮಾರ್ ರಾವ್ ವಾಣಿಜೋದ್ಯಮಿ ಪಾತ್ರ ನಿರ್ವಹಿಸಿದ್ದಾರೆ. ಮೌನಿ ಮುಂಬೈ ಹುಡುಗಿ. ಆತನನ್ನು ಮದುವೆಯಾಗಿ ಅಹಮದಾಬಾದ್ನಲ್ಲಿ ನೆಲೆಸುವ ಈ ಹೊಸ ದಂಪತಿಗೆ ಚೀನಾಗೆ ಹೋಗುವ ಅವಕಾಶ ಲಭಿಸುತ್ತದೆ. ದುಡುಕು ಸ್ವಭಾವದ ಉದ್ಯಮಿ ಮತ್ತು ಮಧ್ಯಮ ವರ್ಗದ ನವವಿವಾಹಿತೆ ಚೀನಾದಲ್ಲಿ ಏನೆಲ್ಲಾ ಅವಾಂತರಗಳನ್ನು ಮಾಡಿಕೊಳ್ಳುತ್ತಾಳೆ ಎಂಬುದು ಮೇಡ್ ಇನ್ ಚೈನಾದ ತಿರುಳು. ಹಾಸ್ಯ ಸ್ಪರ್ಶದೊಂದಿಗೆ ಜೀವನದ ವಾಸ್ತವ ಸಂಗತಿಯ ಸಂದೇಶ ನೀಡುವುದು ನಿರ್ದೇಶಕರ ಇರಾದೆ.
ಇದು ರಾಜ್ಕುಮಾರ್ ರಾವ್ಗೆ ನಿರ್ಮಾಪಕ ದಿನೇಶ್ ವಿಜಾನ್ ಜೊತೆ ಎರಡನೇ ಸಿನಿಮಾ. ಈ ಹಿಂದೆ ಮಡ್ಡೋಕ್ ಫಿಲಮ್ಸ್ ಲಾಂಛನದಲ್ಲಿ ಸ್ತ್ರೀ ಎಂಬ ಹಾರರ್ ಕಾಮಿಡಿ ಚಿತ್ರದಲ್ಲಿ ಇವರಿಬ್ಬರು ಕೆಲಸ ಮಾಡಿದ್ದರು. ಒಟ್ಟಾರೆ ಮೌನಿ ರಾಯ್ಗೆ ಮೇಡ್ ಇನ್ ಚೈನಾ ಕೂಡ ಒಳ್ಳೆಯ ಬ್ರೇಕ್ ನೀಡುವ ನಿರೀಕ್ಷೆ ಇದೆ.
Be the first to comment