“ನಾನು ಇದುವರೆಗೆ ನಟಿಸಿದ ಚಿತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವಿನಾಶ್ ಸರ್ ಜತೆಗೆ ನಟಿಸಿದ್ದೇನೆ. ಅವರ ಚಿತ್ರಕ್ಕೆ ಖಂಡಿತವಾಗಿ ಒಳ್ಳೆಯದಾಗಬೇಕು” ಎಂದಿದ್ದಾರೆ ದರ್ಶನ್. ಅವರು ಹಾಗೆ ಹೇಳಿದ್ದು `ಮೌನಂ’ ಚಿತ್ರದ ಆಡಿಯೋ ಸಿ.ಡಿ ಬಿಡುಗಡೆ ಸಮಾರಂಭದಲ್ಲಿ.
ದರ್ಶನ್ ಅವರನ್ನು ಪ್ರಥಮ ಬಾರಿಗೆ ನಾನು ಆಹ್ವಾನಿಸಿದ್ದೆ. ಹಾಗಾಗಿ ಬರುತ್ತಾರಾ ಇಲ್ವಾ ಎನ್ನುವ ಆತಂಕ ಇತ್ತು. ಆದರೆ ಬಂದಿದ್ದು ತುಂಬ ಖುಷಿಯಾಗಿದೆ. ಚಿತ್ರದಲ್ಲಿ ನಾನು ಒಬ್ಬ ತಾಯಿಯಿಲ್ಲದ ಮಗನನ್ನು ಸಾಕುವ ತಂದೆಯ ಪಾತ್ರ ಮಾಡಿದ್ದೇನೆ ಎಂದು ಅವಿನಾಶ್ ಹೇಳಿದರು.
ನಾಯಕ ಬಾಲಾಜಿ “ನನ್ನದು ಒಬ್ಬ ತಲೆಹರಟೆ ಹುಡುಗನ ಪಾತ್ರ. ಚಿತ್ರದಲ್ಲಿ ಆ್ಯಕ್ಷನ್, ಸಾಂಗ್ಸ್ ಚೆನ್ನಾಗಿ ಮೂಡಿ ಬಂದಿದೆ. ಅವಿನಾಶ್ ಅವರು ನನ್ನ ತಂದೆಯ ಪಾತ್ರ ಮಾಡಿದ್ದಾರೆ” ಎಂದರು. ನಾಯಕಿ ಮಯೂರಿ ಮಾತನಾಡಿ, “ಚಿತ್ರದಲ್ಲಿ ನನ್ನದು ಕಾಲೇಜ್ ಹುಡುಗಿಯ ಪಾತ್ರ. ಕಾಲೇಜ್ ಹುಡುಗಿಯ ವಯೋಸಹಜ ಆಸೆಗಳನ್ನು ತೋರಿಸುವಂಥ ಪಾತ್ರ. ನನ್ನ ಮೊದಲ ಸಿನಿಮಾ ‘ಕೃಷ್ಣಲೀಲ’ದಿಂದಲೂ ನನ್ನ ಇದುವರೆಗಿನ ಪ್ರತಿ ಸಿನಿಮಾಗಳಿಗೂ ದರ್ಶನ್ ಅವರು ಆಗಮಿಸಿ ಶುಭ ಕೋರಿದ್ದಾರೆ. ಅವರು ನನ್ನ ಪಾಲಿಗೆ ಅದೃಷ್ಟ ಎಂದೇ ಹೇಳಬಹುದು. ಹಾಗಾಗಿ ಈ ಚಿತ್ರವೂ ಗೆಲ್ಲುವುದು ಖಚಿತ” ಎಂದರು.
ಚಿತ್ರದ ನಿರ್ದೇಶಕ ರಾಜ್ ಪಂಡಿತ್ ಮಾತನಾಡಿ, “ಇದು ಹೊರಗಿನ ನಿಶ್ಶಬ್ದ ಮಾತ್ರವಲ್ಲ ಒಳಗಿನ ಮೌನವೂ ಹೌದು. ಅದರಾಚೆ ಚಿತ್ರದ ಬಗ್ಗೆ ಥಿಯೇಟರಲ್ಲೇ ನೋಡಿ” ಎಂದರು. ನಿರ್ಮಾಪಕ ಶ್ರೀಹರಿ ಮಾತನಾಡಿ, “ನಾನು ಬಾಲ್ಯದಲ್ಲಿ ತಂದೆತಾಯಿಯ ಮಾತು ಕೇಳುತ್ತಿರಲಿಲ್ಲ. ಅದರೆ ಈಗ ಅದು ಎಷ್ಟು ದೊಡ್ಡ ತಪ್ಪು ಎಂದು ಅರಿವಾಗಿದೆ. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ತಂದೆ ಮಗನ ಸೆಂಟಿಮೆಂಟ್ ನನಗೂ ಆಪ್ತವೆನಿಸಿದೆ” ಎಂದರು. ‘ಕಾಮಿಡಿ ಕಿಲಾಡಿ’ ರಿಯಾಲಿಟಿ ಶೋ ಖ್ಯಾತಿಯ ನಯನಾ ಮಾತನಾಡಿ “ನಾಯಕಿಯ ಮನೆಹಾಳಿ ಗೆಳತಿಯ ಪಾತ್ರ ನನ್ನದು” ಎಂದು ನಕ್ಕರು. ಚಿತ್ರಕ್ಕೆ ಹಾಡುಗಳನ್ನು ಬರೆದಿರುವ ಆಟೋ ಚಾಲಕ ಆಕಾಶ್, ಡಿಟಿಎಸ್ ಇಂಜಿನಿಯರ್ ಪಳನಿ ಡಿ ಸೇನಾಪತಿ, ಸಂಗೀತ ನಿರ್ದೇಶಕ ಆರವ್ ರಿಷಿಕ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
Pingback: sex dolls