ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ಸಂಸ್ಕಾರ ಇಂದು ಪೂರ್ಣಗೊಂಡಿದ್ದು, ಮೂರು ದಿನಗಳ ಕಾಲ ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ವಿಧಿಸಲಾಗಿದೆ.
ಹಾಲು-ತುಪ್ಪ ಕಾರ್ಯಕ್ರಮ ಮೂರು ದಿನಗಳ ನಂತರ ಅಂದರೆ ಮಂಗಳವಾರ ನಡೆಯಲಿದೆ. ಈ ಕಾರಣದಿಂದ ಮಂಗಳವಾರದವರೆಗೆ ಸಾರ್ವಜನಿಕರಿಗೆ ಕಂಠೀರವ ಸ್ಟುಡಿಯೋಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮಂಜುನಾಥ್, ”ಕಂಠೀರವ ಸ್ಟುಡಿಯೋ ಸುತ್ತ 144 ಸೆಕ್ಷನ್ ವಿಧಿಸಲಾಗಿದೆ. ಹಾಲು-ತುಪ್ಪ ಕಾರ್ಯ ಮುಗಿದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು” ಎಂದಿದ್ದಾರೆ.
“ಮೂರು ದಿನಗಳ ಬಳಿಕ ಹಾಲು-ತುಪ್ಪ ಕಾರ್ಯ ನೆರವೇರಿಸಲಾಗುತ್ತದೆ. ಅಲ್ಲಿಯವರೆಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಅಭಿಮಾನಿಗಳು ತಾವೇ ಮೊದಲು ಹಾಲು ತುಪ್ಪ ಬಿಡಬೇಕು ಎಂದು ಬರುತ್ತಾರೆ. ಕುಟುಂಬವೇ ಮೊದಲು ಹಾಲು-ತುಪ್ಪ ಅರ್ಪಿಸಬೇಕು. ಅಪ್ಪಾಜಿಯವರದ್ದು ಹಾಗೆಯೇ ಆಗಿತ್ತು. ಹಲವು ಅಭಿಮಾನಿಗಳು ಹಾಲು-ತುಪ್ಪ ನೀಡಿದ್ದರು. ಕೆಲವರು ಮಣ್ಣು ತೋಡುವ ಕೆಲಸವನ್ನೂ ಮಾಡಿದ್ದರು” ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.
“ಸಮಾಧಿ ಬಳಿ ಒಂದಷ್ಟು ಕೆಲಸಗಳನ್ನು ಮಾಡಬೇಕಿದೆ. ಜನರಿಗೆ ಓಡಾಡಲು, ದರ್ಶನ ಮಾಡಲು ಸುಲಭವಾಗುವ ವ್ಯವಸ್ಥೆ ಮಾಡಬೇಕಿದೆ. ಮಳೆ ಬಂದರೆ ಕೆಸರಾಗುತ್ತಿದ್ದು, ಅದನ್ನೆಲ್ಲ ಸರಿ ಮಾಡಿಸಬೇಕು. ಅದಾದ ಬಳಿಕ ಸಾರ್ವಜನಿಕರಿಗೆ ನೋಡಲು ಬಿಟ್ಟರೆ ಅನುಕೂಲ ಆಗಲಿದೆ. ಮೊದಲು ಅಪ್ಪಾಜಿ-ಅಮ್ಮನಿಗೆ ಕೈ ಮುಗಿಯುತ್ತಿದ್ದೆವು, ಇನ್ನು ಮೇಲೆ ತಮ್ಮನಿಗೂ ಕೈ ಮುಗಿದು ಹೋಗಬೇಕಿದೆ” ಎಂದು ದುಃಖದಿಂದ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
______________

Be the first to comment