ಹಿರಿಯ ನಟ ಮೋಹನ್ ಜುನೇಜ ನಿಧನ ಹೊಂದಿದ್ದಾರೆ. ಅವರು ಕೆಲಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಬೆಂಗಳೂರು ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ್ ಜುನೇಜ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಅವರನ್ನು ಕೆಲ ದಿನಗಳ ಹಿಂದೆ ಹೆಸರಘಟ್ಟದ ಸಪ್ತಗಿರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿ ಆಗದೇ ಮೇ 6ರ ರಾತ್ರಿ ನಿಧನರಾಗಿದ್ದಾರೆ.
ಮೋಹನ್ ಜುನೇಜ ಕನ್ನಡದ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ಹಾಸ್ಯ, ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ‘ಕೆಜಿಎಫ್’ ಸಿನಿಮಾದ ಎರಡೂ ಭಾಗಗಳಲ್ಲಿ ಅವರು ನಟಿಸಿದ್ದಾರೆ.
‘ವಠಾರ’ ಧಾರಾವಾಹಿ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲ್ಲಾಟ ಸಿನಿಮಾದಲ್ಲಿ ಅವರು ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ಕೆಜಿಎಫ್ 1′ ಮತ್ತು ‘ಕೆಜಿಎಫ್ 2’ ಸಿನಿಮಾದಲ್ಲಿ ಆನಂದ್ ಇಂಗಳಗಿಗೆ ರಾಕಿ ಭಾಯ್ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಯಾಗಿ ಮೋಹನ್ ಜುನೇಜ ನಟಿಸಿದ್ದರು. ‘ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ಸ್ಟರ್. ಅವನು ಒಬ್ಬನೇ ಬರೋನು.. ಮಾನ್ಸ್ಟರ್’ ಎಂದು ಅವರು ಹೇಳಿದ ಡೈಲಾಗ್ ಫೇಮಸ್ ಆಗಿತ್ತು.
ಮೋಹನ್ ಜುನೇಜ ಅವರ ನಿಧಾನಕ್ಕೆ ಸಿನಿಮಾ ರಂಗದ ಗಣ್ಯರು, ಕಲಾಸಕ್ತರು ಕಂಬನಿ ಮಿಡಿದಿದ್ದಾರೆ.
ಮೋಹನ್ ಜುನೇಜ ಅವರ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಸಾವಿನಲ್ಲೂ ಅವರು ಸಾರ್ಥಕತೆ ಮೆರೆದಿದ್ದಾರೆ.
__
Be the first to comment