ನಮಿತಾ ರಾವ್ ನಟಿಸಿ, ನಿರ್ಮಿಸಿರುವ ಚಿತ್ರ ‘ಚೌಕಾಬಾರ’ಹಾಡುಗಳು ಬಿಡಿಗಡೆ

ರಂಗಭೂಮಿ, ಕಿರುತೆರೆಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ತಾರಾ ಜೋಡಿ ನಮಿತಾ ರಾವ್ ಹಾಗೂ ವಿಕ್ರಂ ಸೂರಿ. ನಮಿತಾರಾವ್ ನಿರ್ಮಿಸಿ, ವಿಕ್ರಮ್ ಸೂರಿ ನಿರ್ದೇಶನ ಮಾಡಿರುವ ‘ಚೌಕಬಾರ’ ಚಿತ್ರದ ಹಾಡುಗಳನ್ನು ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿ ಶುಭ ಕೋರಿದರು. ಸಾಹಿತಿಗಳಾದ ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ಲಹರಿ ವೇಲು, ರವಿಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ಶಿವಕುಮಾರ್, ನಿರ್ದೇಶಕ ಪಿ.ಶೇಷಾದ್ರಿ, ಶಶಿಧರ್ ಕೋಟೆ ಸೇರಿದಂತೆ ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

”ವಿಕ್ರಮ್ ಸೂರಿ ಕುಟುಂಬದವರು ನನ್ನ ಆತ್ಮೀಯರು. ಅವರ ಸಮಾರಂಭಕ್ಕೆ ನಾನು ಬಂದಿರುವುದು ಖುಷಿಯಾಗಿದೆ. ಚಿತ್ರರಂಗದ ಅಭಿವೃದ್ಧಿಗೆ ಸದಾ ಸಿದ್ದ. ಮೈಸೂರಿನ ನಂಜನಗೂಡು ಬಳಿ ಫಿಲಂ ಸಿಟಿ ನಿರ್ಮಾಣದ ಕಾರ್ಯವನ್ನು ಆದಷ್ಟು ಬೇಗ ಆರಂಭ ಮಾಡುತ್ತೇವೆ” ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು. ಮುಖ್ಯಮಂತ್ರಿಗಳ ಜೊತೆ ಈ ವಿಷಯದ ಬಗ್ಗೆ ‌ಚರ್ಚಿಸುವುದಾಗಿ ಸಹ ಎಸ್‌.ಟಿ.ಸೋಮಶೇಖರ್ ಅವರು ಹೇಳುತ್ತಾ, ‘ಚೌಕಬಾರ’ ಚಿತ್ರತಂಡಕ್ಕೆ ಶುಭ ಹಾರೈಸಿದರು. ತಾವು ಸಹ ಅಂಬರೀಶ್ ಹಾಗೂ ಬಿ.ಸಿ.ಪಾಟೀಲ್ ಅವರ ಚಿತ್ರಗಳಲ್ಲಿ ಅಭಿನಯಿಸದ್ದನ್ನು‌ ಎಸ್.ಟಿ.ಸೋಮಶೇಖರ್ ಅವರು ಈ ಸಂದರ್ಭದಲ್ಲಿ ಮೆಲುಕು ಹಾಕಿದರು.

ಸ್ನೇಹ, ಪ್ರೀತಿ ಹಾಗೂ ಬಾಂಧವ್ಯಗಳ ಸಮ್ಮಿಲನ ಈ ಚಿತ್ರ. ಯುವಜನತೆಗೆ ಹತ್ತಿರವಾಗುವ ಈ ಸಿನಿಮಾವನ್ನು‌ ನಮಿತಾ ರಾವ್ ನಿರ್ಮಿಸಿದ್ದಾರೆ. ಜೊತೆಗೆ ನಟನೆಯನ್ನು ಮಾಡಿದ್ದಾರೆ.‌ ಈ ಚಿತ್ರದಲ್ಲಿ ಅನೇಕ ನೂತನ ಪ್ರತಿಭೆಗಳಿಗೆ ಅಭಿನಯಕ್ಕೆ ಅವಕಾಶ ನೀಡಿರುವುದಾಗಿ‌ ತಿಳಿಸಿದ ನಿರ್ದೇಶಕ ವಿಕ್ರಮ್ ಸೂರಿ, ಹಾಡುಗಳನ್ನು ‌ಬಿಡುಗಡೆ ಮಾಡಿದ, ಸನ್ಮಾನ್ಯ ಸಚಿವರು ಸೇರಿದಂತೆ ‌ಎಲ್ಲಾ ಗಣ್ಯರಿಗೆ ಅಭಿನಂದನೆ ಸಲ್ಲಿಸಿದರು.

”ನಿರ್ಮಾಪಕಿಯಾಗುವುದಕ್ಕಿಂತ ಮುಂಚೆ ನಾನು, ರಂಗಭೂಮಿ ಕಲಾವಿದೆ, ನೃತ್ಯಗಾರ್ತಿ ಹಾಗೂ ಗಾಯಕಿ. ಈ ಚಿತ್ರದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಿದ್ದೀವಿ. ಮುಖ್ಯ ಕಾರಣ ನಾವು ಕೆಲವು ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದಾಗ ನಾವು ಹೊಸಬರು. ಆಗ ನಮಗೂ ಉತ್ತಮ ಬೆಂಬಲ ದೊರಕಿತು. ಹಾಗಾಗಿ ಹೆಚ್ಚು ಪ್ರತಿಭೆಗಳಿಗೆ ಅವಕಾಶ ನೀಡಿದ್ದೇವೆ ಎಂದು ತಿಳಿಸಿದರು ನಮಿತಾ ರಾವ್.

ನಮಿತಾ ರಾವ್, ವಿಹಾನ್ ಪ್ರಭಂಜನ್, ಕಾವ್ಯಾ ರಮೇಶ್, ಸುಜಯ್ ಹೆಗಡೆ, ಸಂಜಯ್ ಸೂರಿ, ಕೀರ್ತಿ ಭಾನು, ಮಧು ಹೆಗಡೆ, ಶಶಿಧರ್ ಕೋಟೆ, ಪ್ರಥಮ ಪ್ರಸಾದ್, ಸೀತಾ ಕೋಟೆ ಮುಂತಾದವರು ‘ಚೌಕಾಬಾರ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ವಿಕ್ರಮ್ ಸೂರಿ ಚಿತ್ರಕಥೆ ಬರೆದು‌ ನಿರ್ದೇಶಿಸಿರುವ ಈ ಚಿತ್ರಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದಾರೆ. ಹೆಚ್.ಎಸ್.ವೆಂಕಟೇಶ್ ಮೂರ್ತಿ, ಬಿ.ಆರ್.ಲಕ್ಷ್ಮಣ್ ರಾವ್, ವಿಕ್ರಮ್ ಸೂರಿ ಹಾಗೂ ಹರೀಶ್ ಭಟ್ ಹಾಡುಗಳನ್ನು ಬರೆದಿದ್ದಾರೆ. ಚೈತ್ರ, ವ್ಯಾಸರಾಜ ಸೋಸಲೆ, ಸಿದ್ಧಾರ್ಥ್ ಬೆಳ್ಮಣ್ಣು, ನಕುಲ್ ಅಭಯಂಕರ್ ಹಾಗೂ ಹರೀಶ್ ಭಟ್ ‘ಚೌಕಬಾರ’ ಸಿನಿಮಾದ ಹಾಡುಗಳಿಗೆ ದನಿಯಾಗಿದ್ದಾರೆ. ರವಿರಾಜ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶಶಿಧರ್ ಅವರ ಸಂಕಲನವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!