ಬಹುನಿರೀಕ್ಷಿತ ‘ಕೆಜಿಫ್ 2’ ಸಿನಿಮಾದ ಪ್ರಚಾರಕ್ಕೆ ಮೆಟಾವರ್ಸ್ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಭಾರತೀಯ ಸಿನಿಮಾ ಜಗತ್ತಿನಲ್ಲಿ ವಿಭಿನ್ನ ಪ್ರಯತ್ನ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಏ.14ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗಲಿದೆ. ರಾಕಿ ಭಾಯ್ ಜಗತ್ತು ಹೇಗಿರಲಿದೆ ಎನ್ನುವುದು ಏ.14ರಂದು ತಿಳಿಯಲಿದೆ. ಈ ಮುನ್ನ ಮೆಟಾವರ್ಸ್ ಮೂಲಕ ಈ ಪ್ರಪಂಚ ಅನಾವರಣ ಆಗಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ‘ಕೆಜಿಎಫ್’ ಲೋಕವನ್ನು ತೋರಿಸಲು ಪ್ಲ್ಯಾನ್ ಮಾಡಲಾಗಿದೆ.
ಏ. 7ರಿಂದ ‘ಕೆಜಿಎಫ್: ಚಾಪ್ಟರ್ 2’ ರಾಕಿ ಭಾಯ್ ಮೆಟಾವರ್ಸ್ ಸೇಲ್ಸ್ ಆರಂಭ ಆಗಲಿದೆ. ಇದಕ್ಕೆ ಸಂಬಂಧಿಸಿದ ವೆಬ್ಸೈಟ್ ಕೂಡ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಚಿತ್ರತಂಡ ಹಂಚಿಕೊಂಡಿದೆ. Non-fungible token ಮೂಲಕ ಕೆಜಿಎಫ್ ಮೆಟಾವರ್ಸ್ಗೆ ಪ್ರವೇಶ ಪಡೆಯಬಹುದು. ಅಲ್ಲಿ ಗೇಮ್ ಡೆವೆಲಪ್ ಮಾಡಬಹುದು. ವಸ್ತುಗಳನ್ನು ಹಾಗೂ ಸ್ಥಳಗಳನ್ನು ವರ್ಚುವಲ್ ಆಗಿ ಖರೀದಿಸಬಹುದು. ಒಟ್ಟಿನಲ್ಲಿ ಜನರಿಗೆ ಹೊಸದೊಂದು ಅನುಭೂತಿ ನೀಡಲು ‘ಕೆಜಿಎಫ್ ಮೆಟಾವರ್ಸ್’ ಸಿದ್ಧವಾಗುತ್ತಿದೆ.
ಮೆಟಾವರ್ಸ್ ಇಂಟರ್ನೆಟ್ ಲೋಕದ ಹೊಸ ಆವಿಷ್ಕಾರ ಆಗಿದೆ. ಸೋಶಿಯಲ್ ಮೀಡಿಯಾಗಳ ಸ್ವರೂಪವನ್ನೇ ಇದು ಸಂಪೂರ್ಣವಾಗಿ ಬದಲಾಯಿಸಲಿದೆ ಎನ್ನಲಾಗುತ್ತಿದೆ. ಸಿನಿಮಾ ನೋಡುವ, ಶಾಪಿಂಗ್ ಮಾಡುವ, ಜನರ ಜೊತೆ ಸ್ನೇಹ ಬೆಳೆಸುವ, ಚರ್ಚೆ ನಡೆಸುವ ಎಲ್ಲ ಕ್ರಿಯೆಗಳೂ ಇಲ್ಲಿ ಹೊಸ ರೂಪ ಪಡೆದುಕೊಳ್ಳಲಿವೆ. ಈಗ ಇದು ‘ಕೆಜಿಎಫ್ 2’ ಸಿನಿಮಾದ ಪ್ರಚಾರಕ್ಕೆ ಬಳಕೆ ಆಗುತ್ತಿದೆ. ಚಿತ್ರತಂಡದ ಭಿನ್ನ ಪ್ರಯತ್ನ ಇದಾಗಿದೆ.
ಕನ್ನಡ, ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಜಯ್ ದತ್, ರವೀನಾ ಟಂಡನ್ ಮುಂತಾದವರು ಅಭಿನಯಿಸಿರುವುದರಿಂದ ಉತ್ತರ ಭಾರತದಲ್ಲೂ ಚಿತ್ರದ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ರಾಕಿಂಗ್ ಸ್ಟಾರ್ ಯಶ್ಗೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಚಿತ್ರದ ಟ್ರೈಲರ್ ಈಗಾಗಲೇ ಸೂಪರ್ ಹಿಟ್ ಆಗಿದೆ.
___
Be the first to comment