ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ, ವಿಜಯ್ ಕಾರ್ತಿಕೇಯ ನಿರ್ದೇಶನದ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಮ್ಯಾಕ್ಸ್” ಚಿತ್ರ ಇದೇ ಡಿಸೆಂಬರ್ 25 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಸುದೀಪ್, ನಿರ್ದೇಶಕ ವಿಜಯ್ ಕಾರ್ತಿಕೇಯ, ನಿರ್ಮಾಪಕ ಕಲೈಪುಲಿ ಎಸ್.ಧಾನು, ಸುಧಾ ಬೆಳವಾಡಿ, ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್ ಚೆಂಡೂರು, ನಾಗರಾಜ್, ಅನಿರುದ್ದ್, ಪ್ರವೀಣ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಶೇಖರ್ ಚಂದ್ರ, ಸಾಹಸ ನಿರ್ದೇಶಕ ಚೇತನ್ ಡಿ’ಸೋಜ, ಕಲಾ ನಿರ್ದೇಶಕ ಶಿವಕುಮಾರ್, ಸಂಕಲನಕಾರ ಗಣೇಶ್ ಬಾಬು, ಕಾರ್ಯಕಾರಿ ನಿರ್ಮಾಪಕ ಶ್ರೀರಾಮ್ ಮುಂತಾದವರು ಹಾಜರಿದ್ದರು.
ನಾನು ಈ ಚಿತ್ರ ಒಪ್ಪುವುದಕ್ಕೆ ಮೂಲ ಕಾರಣ ನಿರ್ದೇಶಕ ವಿಜಯ್ ಕಾರ್ತಿಕೇಯ ಎಂದು ಮಾತು ಆರಂಭಿಸಿದ ಸುದೀಪ್, ವಿಜಯ್ ಅವರು ಬಂದು ಹೇಳಿದ ಕಥೆ ಚೆನ್ನಾಗಿರಲಿಲ್ಲ ಎಂದರೆ ಯಾವುದೂ ಇಲ್ಲಿಯವರೆಗೂ ಬರುತ್ತಿರಲಿಲ್ಲ. ಧಾನು ಅವರು ಹಿರಿಯ ನಿರ್ಮಾಪಕರು. ಅವರು ಕಳಿಸಿಕೊಟ್ಟರು. ಕಥೆ ಚೆನ್ನಾಗಿರಲಿಲ್ಲ ಎಂದರೆ, ಬೇರೆ ಕಥೆ ಹುಡುಕುತ್ತಿದ್ದವೇನೋ. ಆದರೆ, ವಿಜಯ್ ಹೇಳಿದ ಕಥೆ ಬಹಳ ಇಷ್ಟವಾಯಿತು. ಚೆನ್ನೈನಿಂದ ಬಂದ ಅವರನ್ನು ಇಲ್ಲೇ ಉಳಿಸಿಕೊಂಡು, ಅವರ ಜೊತೆಗೆ ಕೂತು ಸಾಕಷ್ಟು ಚರ್ಚೆ ಮಾಡಿ, ಈ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿ ರೂಪಿಸಲಾಯಿತು.
2004ರಲ್ಲಿ ಚೆನ್ನೈನಲ್ಲಿ ‘ನಲ್ಲ’ ಚಿತ್ರಕ್ಕೆ ಚಿತ್ರೀಕರಣ ಮಾಡುತ್ತಿದ್ದೆ. ‘ಕಾಕ್ಕಾ ಕಾಕ್ಕಾ’ ಎಂಬ ಚಿತ್ರ ಬಹಳ ಚೆನ್ನಾಗಿ ಓಡುತ್ತಿತ್ತು. ಆ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುವ ಯೋಚನೆಯಿಂದ ಧಾನು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಹೋಗಿ ಭೇಟಿಯಾದೆ. ಮೊದಲ ದಿನ ಬಹಳ ಟೆನ್ಶನ್‍ನಲ್ಲಿದ್ದರು. ‘ಕಾಕ್ಕಾ ಕಾಕ್ಕಾ’ ಚಿತ್ರದ ಹಕ್ಕುಗಳನ್ನು ಕೊಡೋಕೆ ಸಾಧ್ಯವಾ ಎಂದೆ. ಆಸೆಪಟ್ಟು ಬಂದಿದ್ದೀರಾ. ನನಗೇನು ಬೇಡ ಎಂದು ತಕ್ಷಣವೇ ಉಚಿತವಾಗಿ ಹಕ್ಕುಗಳನ್ನು ಬರೆದುಕೊಟ್ಟರು. ಅಂತಹ ಸಹೃದಯಿ ಹಿರಿಯ ನಿರ್ಮಾಪಕರ ಜತೆಗೆ ಸಿನಿಮಾ ಮಾಡಿರುವುದು ಖುಷಿಯಾಗಿದೆ. ಈ ಚಿತ್ರವನ್ನು ನೋಡಬೇಕು ಎಂದು ನಮ್ಮ ತಾಯಿ ಹೇಳಿದ್ದರು. ಆ ಆಸೆ ಈಡೇರಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲಿರುತ್ತದೆ. ಆಗಾಗ ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಇನ್ನು, ಚಿತ್ರತಂಡದ ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ. ಎಲ್ಲರಿಗೂ ಪ್ರಮುಖ ಪಾತ್ರಗಳಿವೆ. ಎಲ್ಲರೂ ಬಹಳ ಚೆನ್ನಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದು ಒಂದು ರಾತ್ರಿಯ ಕಥೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬಹಳ ಕಷ್ಟ ಪಟ್ಟಿದ್ದೇವೆ. ನಾನೊಬ್ಬನೇ ಅಲ್ಲ, ಎಲ್ಲರಿಗೂ ಕಷ್ಟವಾಗಿದೆ. ಬೆಂಕಿ, ಧೂಳೀನಲ್ಲಿ ನೈಟ್ ಎಫೆಕ್ಟ್ ಚಿತ್ರೀಕರಣ. . ನನಗೆ ಚಿತ್ರದ ವೇಗ ಇಷ್ಟವಾಯಿತು. ಯಾವುದನ್ನೂ ಅನಗತ್ಯವಾಗಿ ತುರುಕಿಲ್ಲ. ಅಜನೀಶ್ ಸಹ ಚಿತ್ರ ನೋಡಿ ಚಿತ್ರ ವೇಗವಾಗಿದೆ ಎಂದರು. ಈ ಚಿತ್ರದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಅರ್ಜುನ್ ಮಹಾಕ್ಷಯ್ ನನ್ನ ಪಾತ್ರದ ಹೆಸರು. ಎಲ್ಲರೂ ಮ್ಯಾಕ್ಸ್ ಅಂತ ಕರೆಯುತ್ತಿರುತ್ತಾರೆ ಎಂದರು.
ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ರಜನಿಕಾಂತ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಕನ್ನಡದಲ್ಲಿ “ಮ್ಯಾಕ್ಸ್” ನನ್ನ ನಿರ್ಮಾಣದ ಮೊದಲ ಚಿತ್ರ. ಈ ಚಿತ್ರದ ಕುರಿತು ಸುದೀಪ್ ಅವರಿಗೆ ಫೊನ್ ಮಾಡಿ, ಒಂದೊಳ್ಳೆಯ ಕಥೆ ಇದೆ. ಅದನ್ನು ನೀವು ಕೇಳಿ. ನಿಮಗೆ ಇಷ್ಟವಾದರೆ ಸಿನಿಮಾ ಮಾಡೋಣ ಎಂದು ಹೇಳಿದೆ. ಅವರಿಗೆ ಕಥೆ ಇಷ್ಟವಾಯಿತು. ಚಿತ್ರ ಆರಂಭವಾಯಿತು. ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ. ಇದೇ ಡಿಸೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಕಲೈಪುಲಿ ಎಸ್ ಧಾನು.
ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ಧಾನು ಅವರಿಗೆ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ. ಇದೊಂದು ಒಂದೇ ರಾತ್ರಿಯಲ್ಲಿ ನಡೆಯುವ ಎಮೋಷನಲ್ ಆಕ್ಷನ ಕಥಾಹಂದರ ಹೊಂದಿರುವ ಚಿತ್ರ. ಚಿತ್ರತಂಡದ ಸಹಕಾರದಿಂದ “ಮ್ಯಾಕ್ಸ್” ಚೆನ್ನಾಗಿ ಬಂದಿದೆ ಎಂದು ನಿರ್ದೇಶಕ ವಿಜಯ್ ಕಾರ್ತಿಕೇಯ ತಿಳಿಸಿದರು.
Be the first to comment