ಕಲಾ ನಿರ್ದೇಶಕ ಗಂಗಾಧರ್ ಅವರ ಚೊಚ್ಚಲ ಸಿನಿಮಾ ‘ಮತ್ತೆ ಮಳೆ ಹೊಯ್ಯುತ್ತಿದೆ’ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಅಕ್ಟೋಬರ್ ನಲ್ಲಿ ಚಿತ್ರ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.
ಶ್ರೀ ಗವಿರಂಗನಾಥಸ್ವಾಮಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗಂಗಾಧರ್ ಅವರು ಪತ್ನಿ ಸುಮ ಹೆಸರಿನಲ್ಲಿ ಸಿನಿಮಾಗೆ ಬಂಡವಾಳ ಹೂಡಿದ್ದು, ಶೃತಿ ಅನಿಲ್‌ಕುಮಾರ್ ಸಹ ನಿರ್ಮಾಪಕರು. ಹಲವು ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಪರಮ್‌ಗುಬ್ಬಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರವು ಕನ್ನಡ ಬರಹಗಾರ ಕೆ. ಸದಾಶಿವ ಅವರ ಸಣ್ಣ ಕಥೆಯನ್ನು ಆಧರಿಸಿದೆ. ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಕಬ್ಬಡಿ ನರೇಂದ್ರಬಾಬು, ಸಂಗೀತ ಅತಿಶಯಜೈನ್ ಅವರದಾಗಿದೆ. ಅಮೆರಿಕದಲ್ಲಿ ನೆಲೆಸಿರುವ ದಿವಂಗತ ಲೇಖಕರ ಮಗಳ ಮೂಲಕ ಚಿತ್ರ ತಂಡ ಹಕ್ಕುಗಳನ್ನು ಪಡೆದುಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ದೇಣಿಗೆ ನೀಡುವ ಮೂಲಕ ಸದಾಶಿವ ಅವರಿಗೆ ಗೌರವ ನೀಡಲು ಮುಂದಾಗಿದೆ.
ಚಿತ್ರವು 80ರ ದಶಕ ಹಾಗೂ 2000ನೇ ಇಸವಿಯಲ್ಲಿ ನಡೆಯುವ ಎರಡು ಕಾಲಘಟ್ಟದ ಅಂಶಗಳನ್ನು ಹೊಂದಿದೆ. ಮೊದಲನೇ ಜೋಡಿಯ ಪ್ರೇಮ ಕತೆ ವಿಫಲವಾಗುತ್ತದೆ. ಎರಡನೇ ಜೋಡಿಯ ಪ್ರೇಮ ಕತೆ ಯಶಸ್ಸು ಕಾಣುತ್ತದೆ. ಇವೆರೆಡರ ನಡುವೆ ಸನ್ನಿವೇಶಗಳು ಮನಸ್ಸನ್ನು ಕದಡುತ್ತದೆ. ಸಿನಿಮಾದಲ್ಲಿ ಮಳೆ ಮಹತ್ವದ ಪಾತ್ರವನ್ನು ವಹಿಸಿದೆ. ಅರ್ಥಪೂರ್ಣ ಸಂದೇಶಗಳು ಅಲ್ಲಲ್ಲಿ ಬರಲಿವೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ನಿರ್ಮಾಪಕರ ಮಗ ಜಿ.ಲಿಖಿತ್ ಮತ್ತು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ರಂಗಭೂಮಿಯ ಜಯವರ್ಧನ್ ನಾಯಕರಾಗಿ ನಟಿಸಿದ್ದಾರೆ. ನಾಯಕಿಯರಾಗಿ ಸುಲಕ್ಷಖೈರ, ಭೂಮಿಕಗೌಡ ನಟಿಸಿದ್ದಾರೆ. ಇವರೊಂದಿಗೆ ಚಂದ್ರಶೇಖರ ರೆಡ್ಡಿ.ಎ.ಎಂ, ಪ್ರಕಾಶ್‌ಮೂರ್ತಿ, ಕುಮಾರಿ ಸ್ವರ್ಣ, ಶೃತಿ, ದಿನಮಣಿ, ಕಾವ್ಯ ಕುಮಾರಿ ಅಭಿನಯಿಸಿದ್ದಾರೆ.
ಶೃಂಗೇರಿ, ಹೊರನಾಡು, ಕೊಪ್ಪ, ಹರಿಹರಪುರ, ಆಗುಂಬೆಯ ಸುಂದರ ತಾಣಗಳಲ್ಲಿ 24 ದಿನಗಳಲ್ಲಿ ಚಿತ್ರೀಕರಣ ಮುಗಿಸಿ ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಚಿತ್ರಕ್ಕೆ ಶಾಂತ ರಾವ್ ಎಪ್ಪಲಿ ಛಾಯಾಗ್ರಹಣ , ಧನುಷ್ ವೀರ್ ಸಂಕಲನ, ಬಾಬು ಖಾನ್ ನಿರ್ಮಾಣ ವಿನ್ಯಾಸವನ್ನು ನಿರ್ವಹಿಸಿದ್ದಾರೆ.
——





Be the first to comment