Mathe Maduve : ಜೂ.9ಕ್ಕೆ ‘ಮತ್ತೆ ಮದುವೆ’ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿದ್ದ “ಮತ್ತೆ ಮದುವೆ” ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ಜೂನ್ 9ಕ್ಕೆ ರಾಜ್ಯಾದ್ಯಂತ ಚಿತ್ರ ರಿಲೀಸ್ ಆಗಲಿದೆ. ಮೇ‌ 26ರಂದು ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಟೈಟಲ್ ನಡಿ ತೆರೆಕಂಡ ಈ ಸಿನಿಮಾಗೆ ಅದ್ಭುತ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಕನ್ನಡದಲ್ಲಿ ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಪವಿತ್ರಾ ಹಾಗೂ ನರೇಶ್ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿನ್ನೆ‌ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಜೋಡಿ ಮತ್ತೆ ಮದುವೆ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡರು.

ನಟ ನರೇಶ್ ಮಾತನಾಡಿ, ಈಗಾಗಲೇ ತೆಲುಗಿನಲ್ಲಿ ಮಳ್ಳಿ ಪೆಳ್ಳಿ ಸಿನಿಮಾ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರನ್ನು ರಂಜಿಸಿದೆ. ಮತ್ತೆ‌ ಮದುವೆ ಒಳ್ಳೆಯ ಕಂಟೆಂಟ್ ಇರುವ, ಸದ್ಯ ಸಮಾಜದಲ್ಲಿ ಗಂಡ, ಹೆಂಡತಿ ಸಂಬಂಧಗಳ ಕುರಿತ ಕಥಾಹಂದರವನ್ನು ಹೊಂದಿದೆ. ಈ ಸಿನಿಮಾ ನೋಡಿದವರೆಲ್ಲ ಚೆನ್ನಾಗಿದೆ ಎಂದು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಷ್ಟೇ ಸಾಕು ಎಂದು ಹೇಳಿದರು ಈಗ ಕನ್ನಡದಲ್ಲಿ ಜೂನ್ 9ರಂದು ಮತ್ತೆ ಮದುವೆ ಸಿನಿಮಾ ಬಿಡುಗಡೆ ಆಗುತ್ತಿದೆ. ರಂಗಸ್ಥಳಂ ಹಾಗೂ RRR, ಪುಷ್ಪ ಅಂತಹ ಪರಭಾಷೆಯ ಸಿನಿಮಾಗಳಿಗೆ ಕನ್ನಡದಲ್ಲಿ ಡಬ್ಬಿಂಗ್ ಜೊತೆಗೆ ಹಾಡುಗಳನ್ನ ಬರೆದಿರುವ ವರದರಾಜ್ ಚಿಕ್ಕಬಳ್ಳಾಪುರ ಮತ್ತೆ ಮದುವೆ ಸಿನಿಮಾಗೆ ಬಹಳ ಅಚ್ಚುಕಟ್ಟಾಗಿ ಡಬ್ಬಿಂಗ್ ಜೊತೆಗೆ ಅದ್ಭುತ ಹಾಡುಗಳನ್ನ ಕನ್ನಡದಲ್ಲಿ ಬರೆದಿದ್ದಾರೆ. ಇವರ ಸಹಾಯದಿಂದ ಮತ್ತೆ ಮದುವೆ ಚಿತ್ರದ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೇನೆ ಎಂದರು.

ಪವಿತ್ರಾ‌ ಲೋಕೇಶ್ ಮಾತನಾಡಿ, ವಿಜಯ್ ಕೃಷ್ಣ ಮೂವೀಸ್ ಮತ್ತೆ ಲಾಂಚ್ ಮಾಡಿ ಒಳ್ಳೆ ಸಿನಿಮಾ ಮಾಡಬೇಕು. ಈ ಬ್ಯಾನರ್ ನಲ್ಲಿ ಹಿಂದೆ ಬಂದ ಸಿನಿಮಾಗಳು ಮೆಸೇಜ್ ಓರಿಯೆಂಟೆಡ್ ಆಗಿತ್ತು. ಸಮಾಜಕ್ಕೆ ಒಳ್ಳೆ ವಿಷಯ ತಲುಪಿಸುವ ಕೆಲಸ ಮಾಡಿದ್ದರು. ವಿಜಯ್ ಕೃಷ್ಣ ಮೂವೀಸ್ ನಡಿ ಮತ್ತೊಂದು ಮೆಸೇಜ್ ಕೊಡುವಂತಹ ಸ್ಟ್ರಾಂಗ್ ಸಿನಿಮಾ ಮಾಡಬೇಕು ಎಂಬುವುದು ನರೇಶ್ ಅವರ ಉದ್ದೇಶವಾಗಿತ್ತು. ಮತ್ತೆ ಮದುವೆ ಕಥೆಯನ್ನು ಎಂ ಎಸ್ ರಾಜು ಅವರು ತಂದಾಗ ಕನ್ನಡದಲ್ಲಿಯೂ ಮಾಡಬೇಕು ಎಂದು ತೀರ್ಮಾನ ಮಾಡಿದೆವು. ತೆಲುಗು ಕನ್ನಡ ಎರಡು ಭಾಷೆಯಲ್ಲಿಯೂ ಒಟ್ಟಿಗೆ ಪ್ರಚಾರ ಮಾಡಲು ಕಷ್ಟವಾಗುತ್ತದೆ ಎಂದು ಮೊದಲ ತೆಲುಗಿನಲ್ಲಿ ಸಿನಿಮಾ ರಿಲೀಸ್ ಮಾಡಿದೆವು. ಜೂನ್ 9ಕ್ಕೆ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗ್ತಿದೆ. ಒಳ್ಳೊಳ್ಳೆ ಸಾಂಗ್ಸ್ ಇದೆ. ಒಳ್ಳೆ ಮೆಸೇಜ್ ಎಂದರು.

ಮತ್ತೆ ಮದುವೆ ಸಿನಿಮಾವನ್ನು ನರೇಶ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಇದೀಗ ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.‌ ಜೂನ್ 9ರಂದು ಮತ್ತೆ ಮದುವೆ ಥಿಯೇಟರ್ ಗೆ ಎಂಟ್ರಿ ಕೊಡಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!