ಗುರುಪ್ರಸಾದ್ ನಿರ್ದೇಶನದ ಮಠ ಚಿತ್ರ ನೋಡಿದವರಿಗೆ ಇದು ಮಠಗಳ ಹುಳುಕು ತೋರಿಸುವ ಚಿತ್ರ ಎಂದು ಅನಿಸಿರಬಹುದು. ಆದರೆ ಈ ಚಿತ್ರ ಮಠಗಳ ಪರಂಪರೆ, ಘನತೆಯನ್ನು ಸಾರುವ ಯತ್ನವನ್ನು ಮಾಡುತ್ತದೆ.
ಮಠವನ್ನು ಉಳಿಸಿಕೊಳ್ಳಲು, ಮಠದಿಂದ ನಕಲಿ ಪೀಠಾಧಿಪತಿಯನ್ನು ಓಡಿಸಲು ನಡೆಸುವ ಹೋರಾಟದ ಕಥೆ ಚಿತ್ರದಲ್ಲಿದೆ. ಈ ಹೋರಾಟದಲ್ಲಿ ಕಥಾನಾಯಕ ಗೆಲ್ಲುತ್ತಾನಾ ಎನ್ನುವುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಚಿತ್ರದಲ್ಲಿ ಮಠಗಳ ವ್ಯವಸ್ಥೆಯಲ್ಲಿ ಕುಂದು ಕೊರತೆ ಇದ್ದರೂ, ಮಠಗಳು ನಾಡಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎನ್ನುವುದನ್ನು ಸಾರುವ ಯತ್ನ ಮಾಡಲಾಗಿದೆ. ಕೆಲವು ಮಠಗಳ ಕೆಟ್ಟ ಕಾರ್ಯಗಳಿಂದ ಜನರಲ್ಲಿ ಮಠ ಪರಂಪರೆಯ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ಮಠಗಳ ಕೊಡುಗೆ ಅಪಾರ ಎಂದು ಹೇಳುವ ಯತ್ನವನ್ನು ಈ ಚಿತ್ರ ಮಾಡಿದೆ.
ಚಿತ್ರ ಡಾಕ್ಯುಡ್ರಾಮಾ ರೀತಿ ಇದೆ. ದಾವಣಗೆರೆಯ ಸಂತೋಷ ಎನ್ನುವವರು 5,000 ಹೆಚ್ಚು ಮಠಗಳಿಗೆ ಭೇಟಿ ನೀಡಿ ಇದನ್ನು ಆಧರಿಸಿ ಮಠ ಮಾರ್ಗದರ್ಶನ ಎನ್ನುವ ಸಂಪುಟ ರಚಿಸಿದ್ದು, ಈ ಪ್ರಯಾಣದಲ್ಲಿ ಆಗಿರುವ ಘಟನೆಗಳನ್ನು ಆಯ್ದುಕೊಂಡು ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಇದೊಂದು ವಿಭಿನ್ನ ಪ್ರಯತ್ನ ಆಗಿ ಕಾಣಿಸುತ್ತದೆ. ಚಿತ್ರದಲ್ಲಿ ಕರ್ನಾಟಕದ ಹಲವು ಪ್ರೇಕ್ಷಣೀಯ ಸ್ಥಳಗಳು, ಮಠಗಳು, ಪುಣ್ಯಕ್ಷೇತ್ರಗಳನ್ನು ನೋಡಲು ಪ್ರೇಕ್ಷಕರಿಗೆ ಅವಕಾಶ ಸಿಗುತ್ತದೆ.
ಸಂತೋಷ್ ಸಾಕಷ್ಟು ಪರಿಶ್ರಮದಿಂದ ನಟಿಸಿದ್ದಾರೆ. ರಮೇಶ್ ಭಟ್ ನಟನೆಯಲ್ಲಿ ಪರ್ಫೆಕ್ಟ್. ಸಾಧು ಕೋಕಿಲ ಅವರ ಅಭಿನಯ ಸ್ವಲ್ಪ ಅತಿ ಎನಿಸುತ್ತದೆ. ಶರತ್ ಲೋಹಿತಾಶ್ವ, ರಾಜು ತಾಳಿಕೋಟೆ ಮೊದಲಾದವರು ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ.
ಯಾವುದೇ ಚಿತ್ರದಲ್ಲೂ ಇಷ್ಟೊಂದು ಮಠ, ದೇವಸ್ಥಾನಗಳನ್ನು ತೋರಿಸಿದ ಉದಾಹರಣೆ ಸಿಗಲಿಕ್ಕಿಲ್ಲ. ಇದಕ್ಕಾಗಿ ಮಠ ಚಿತ್ರ ಪ್ರಶಂಸೆಗೆ ಪಾತ್ರವಾಗುತ್ತದೆ.
_______
Be the first to comment