ನಿರ್ದೇಶನ : ಗೊರವಾಲೆ ಮಹೇಶ್
ನಿರ್ಮಾಣ : ಎಸ್ ಟಿ ಸೋಮಶೇಖರ್
ತಾರಾಗಣ : ಮಾಸ್ಟರ್ ಆನಂದ್, ಭವ್ಯ, ಶೋಭರಾಜ್, ರಾಜೇಶ್ವರಿ, ಶಕೀಲಾ ಇತರರು
ರೇಟಿಂಗ್ : 3.5/5
ನಂಬಿಕೆ, ಮೂಢತೆ, ಮಾನವೀಯ ಮೌಲ್ಯದ ಭಾವನಾತ್ಮಕ ಕಥೆಯಾಗಿ ತೆರೆಯ ಮೇಲೆ ಬಂದಿರುವ ಚಿತ್ರ ನಾ ಕೋಳಿಕ್ಕೆ ರಂಗ.
ಉಂಡಾರಿ ಗುಂಡ ರಂಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾಸ್ಟರ್ ಆನಂದ್ ಉಷಾರಿಲ್ಲದೆ ಹೋದಾಗ ಅವನ ತಾಯಿ ಸಣ್ಣಕ್ಕ(ಭವ್ಯ), ಊರ ದೇವತೆ ಮಾರಮ್ಮನಿಗೆ ಹರಕೆ ಕಟ್ಟಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಮಗ ಸರಿಯಾಗಲು, ರಂಗನ ಜೀವದಂತಿರುವ ಕೋಳಿ (ಸುಕ್ಕುರಾಜನನ್ನು) ಬಲಿ ಕೊಡಬೇಕು ಎಂದು ದೇವಿಯ ಅಪ್ಪಣೆ ಆಗುತ್ತದೆ. ಈ ಬಗ್ಗೆ ಸಣ್ಣಕ್ಕ, ರಂಗನಿಗೆ ವಿಷಯ ತಿಳಿಸಿದಾಗ ಅವನು ಊರನ್ನು ಬಿಟ್ಟು ಬೆಂಗಳೂರು ಸೇರಿಕೊಳ್ಳುತ್ತಾನೆ. ರಂಗನ ನೆನಪಿನಲ್ಲಿ ಸಣ್ಣಕ್ಕ ಹಾಸಿಗೆ ಹಿಡಿಯುತ್ತಾಳೆ. ಈ ವಿಷಯ ಕೇಳಿದ ರಂಗ ಮತ್ತೆ ಊರಿಗೆ ಬರುತ್ತಾನಾ? ಹರಕೆ ತೀರಿಸುತ್ತಾನಾ ಎನ್ನುವುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಮಾನವಿಯತೆಯನ್ನು ಚಿತ್ರದಲ್ಲಿ ತೋರಿಸುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇಲ್ಲಿ ದೈವದ ಮೇಲಿನ ನಂಬಿಕೆ ಕೂಡ ಇದೆ. ಚಿತ್ರ ಮೂಕಪ್ರಾಣಿಯ ಸುತ್ತ ನಡೆಯುವ ಭಾವನಾತ್ಮಕ ಕಥೆಯಾಗಿ ಗಮನ ಸೆಳೆಯುತ್ತದೆ.
ಇಡೀ ಚಿತ್ರದಲ್ಲಿ ಮಾಸ್ಟರ್ ಆನಂದ್ ಹಳ್ಳಿಯ ಮುಗ್ಧ ಹುಡುಗನಾಗಿ, ಮೂಕ ಪ್ರಾಣಿಯ ಗೆಳೆಯನಾಗಿ ಉತ್ತಮ ಅಭಿನಯ ನೀಡಿದ್ದಾರೆ. ತಾಯಿಯ ಪಾತ್ರದಲ್ಲಿ ಭವ್ಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿಯ ಪಾತ್ರದಲ್ಲಿ ನಿರ್ಮಾಪಕರ ಪುತ್ರಿ ರಾಜೇಶ್ವರಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ.
ವಿದ್ಯಾಭ್ಯಾಸ ಎಷ್ಟು ಮುಖ್ಯ ಎನ್ನುವ ಸಂದೇಶವನ್ನು ಶಿಕ್ಷಕಿಯಾಗಿ ಶಕೀಲಾ ತಮ್ಮ ಪಾತ್ರದ ಮೂಲಕ ತಿಳಿಸುವ ಯತ್ನ ಮಾಡಿದ್ದಾರೆ. ಉಳಿದಂತೆ ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಬಿರಾದಾರ್ ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ.
ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ಹಾಡಿರುವ ಹಾಡು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
____
Be the first to comment