ದೇವನೂರು ಮಹಾದೇವ ಅವರ ಕಾದಂಬರಿಯ ಸಾಲಾಗಿರುವ ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವುದನ್ನು ಆಧಾರವಾಗಿ ಇಟ್ಟುಕೊಂಡು ನಿರ್ಮಾಣ ಆಗಿರುವ ಚಿತ್ರ ‘ಡಿಎನ್ಎ’ ಯಲ್ಲಿಮಾಸ್ಟರ್ ಆನಂದ್ ಪುತ್ರ ಕೃಷ್ಣ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಸ್ಟರ್ ಆನಂದ್ ಅವರು, “ನಿರ್ದೇಶಕರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ‘ಡಿಎನ್ಎ’ ಅಂದರೆ ಧ್ರುವ, ನಕ್ಷತ್ರ ಹಾಗೂ ಆಕಾಶ ಎಂದಾಗಿದೆ. ಇದು ತಂದೆ, ತಾಯಿ ಹಾಗೂ ಮಗನ ಹೆಸರು. ಚಿತ್ರದಲ್ಲಿ ಮಗ ನಟನೆ ಮಾಡಿರುವುದು ಸಂತಸ ತಂದಿದೆ” ಎಂದಿದ್ದಾರೆ.
ಚಿತ್ರದ ನಿರ್ಮಾಪಕ ಮೈಲಾರಿ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದು, “ಇದು ನನ್ನ ಮೊದಲ ಚಿತ್ರ. ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಮಾಡುವ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ” ಎಂದಿದ್ದಾರೆ.
ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ಕಳೆದ 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ. ‘ಜನುಮದ ಜೋಡಿ’ ಚಿತ್ರಕ್ಕೆ ನಿರ್ದೇಶಕ ಟಿ.ಎಸ್. ನಾಗಾಭರಣ ಅವರೊಡನೆ ಕೆಲಸ ಮಾಡಿದ್ದರು. ಆ ಸಿನಿಮಾಗೆ ಸಂಭಾಷಣೆಯನ್ನು ಬರೆದಿದ್ದರು. ಈಗ ಬಹಳ ವರ್ಷಗಳ ನಂತರ ಸಿನಿಮಾವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ. ದೇವನೂರು ಮಹದೇವ ಅವರ ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎಂಬ ಸಾಲು ಈ ಚಿತ್ರಕ್ಕೆ ಸ್ಫೂರ್ತಿ’ ಎನ್ನುವುದು ಅವರ ಮಾತು.
ಚಿತ್ರದ ಮುಖ್ಯಭೂಮಿಕೆಯಲ್ಲಿ ಅಚ್ಯುತ್ ಕುಮಾರ್, ಯಮುನಾ, ರೋಜತ್ ನಾರಾಯಣ್, ಎಸ್ತರ್ ನರೋನಾ, ಅನಿತಾ ಭಟ್ ನಟಿಸಿದ್ದಾರೆ. ಚಿತ್ರಕ್ಕೆ ಶಿವರಾಜ್ ಮೇಹು ಸಂಕಲನ, ರವಿಕುಮಾರ್ ಛಾಯಾಗ್ರಹಣ ಇದೆ.
ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರದ ಹಾಡಿಗೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹಾಡು ಬರೆಯುವ ಜೊತೆಗೆ ಧ್ವನಿಯನ್ನೂ ನೀಡಿದ್ದಾರೆ. ಈಗಾಗಲೇ ಚಿತ್ರದ ಆಡಿಯೋ ರಿಲೀಸ್ ಆಗಿದ್ದು ಸದ್ದು ಮಾಡುತ್ತಿದೆ.
Be the first to comment