ಮರ್ಯಾದೆ ಪ್ರಶ್ನೆ

Maryade Prashne Movie Review: ಕತೆ ವೇಗವೇ ಅಪಘಾತಕ್ಕೆ ಕಾರಣ!

ಚಿತ್ರ: ಮರ್ಯಾದೆ ಪ್ರಶ್ನೆ
ನಿರ್ದೇಶನ: ನಾಗರಾಜ ಸೋಮಯಾಜಿ
ತಾರಾಗಣ: ರಾಕೇಶ್ ಅಡಿಗ, ಪೂಜಾ ಬೆಳವಾಡಿ, ಸುನೀಲ್ ರಾವ್ ಮತ್ತು ಇತರರು

ರೇಟಿಂಗ್: 3.5/5

ಶ್ರೀಮಂತಿಕೆ ಮತ್ತು ಬಡತನ ಎನ್ನುವುದು ಬೆಂಗಳೂರಿನ ಯುವ ಸಮೂಹವನ್ನು ಯಾವ ರೀತಿ ಆವರಿಸಿಕೊಂಡಿದೆ ಎನ್ನುವುದನ್ನು ತೋರಿಸುವಂಥ ಚಿತ್ರ ಮರ್ಯಾದೆ ಪ್ರಶ್ನೆ.

ಸೂರಿ, ಮಂಜ ಮತ್ತು ಸತೀಶ ಉತ್ತಮ ನಾಳೆಯ ಕನಸುಗಳನ್ನು ಹೊಂದಿರುವ ಬಾಲ್ಯದ ಗೆಳೆಯರು. ಇವರಲ್ಲಿ ಕಾರ್ಪೋರೇಟರ್ ಕನಸು ಕಂಡಿರುವ ರಾಕೇಶ್ ಸೂರಿ ಉಳಿದ ಇಬ್ಬರಿಗೂ ನಾಯಕನಂತೆ ಕಾಣಿಸುತ್ತಾರೆ. ಆದರೆ ಕುಡಿದು ಪಾರ್ಟಿ ಮಾಡುವ ಬುದ್ಧಿ ಇವರ ಬದುಕನ್ನೇ ಬದಲಾಯಿಸುತ್ತದೆ. ಮಧ್ಯರಾತ್ರಿ ನಡೆಯುವ ಅಪಘಾತವೊಂದು ದ್ವಿಚಕ್ರ ವಾಹನದಲ್ಲಿದ್ದ ಮೂವರನ್ನು ಅಕ್ಷರಶಃ ಬೀದಿ ಸೇರಿಸುತ್ತದೆ. ಅದರಲ್ಲೂ ಸತೀಶನ ಸಾವಾಗುತ್ತದೆ. ಆದರೆ ಇದೇ ಅಪಘಾತಕ್ಕೆ ಕಾರಣವಾದ ಕಾರಿನಲ್ಲಿದ್ದ ಶ್ರೀಮಂತ ಯುವಕರು ಮತ್ತೊಂದು ಲೋಕವನ್ನೇ ಹೊರಗಿಡುತ್ತಾರೆ.

ಸೂರಿಯಾಗಿ ರಾಕೇಶ್ ಅಡಿಗ, ಮಂಜನಾಗಿ ಪೂರ್ಣಚಂದ್ರ ಮೈಸೂರು ಮತ್ತು ಸತೀಶನಾಗಿ ಸುನೀಲ್ ರಾವ್ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಕೇಶ್ ಅಡಿಗ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಕಾರ್ಪೋರೇಟರ್ ಆಗುವ ಕನಸು ಹೊತ್ತ ಯುವಕ ತನ್ನ ಪ್ರಯತ್ನದಲ್ಲಿ ಸೋಲುತ್ತಿದ್ದ ಹಾಗೆ ಆಗುವ ಅಸಮಾಧಾನದ ಮುಖಭಾವಕ್ಕೆ ರಾಕೇಶ್ ಅಡಿಗ ಕನ್ನಡಿಯಾಗಿದ್ದಾರೆ. ಸತೀಶನಾಗಿ ಸುನೀಲ್ ರಾವ್ ತಾವು ಈಗಲೂ ಫಾರ್ಮ್​​ನಲ್ಲಿರುವುದಾಗಿ ತೋರಿಸಿಕೊಟ್ಟಿದ್ದಾರೆ. ಸತೀಶನ ತಂಗಿಯಾಗಿ ತೇಜು ಬೆಳವಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸತೀಶನ ಮರೆವಿನ ತಂದೆಯಾಗಿ ನಾಗೇಂದ್ರ ಶಾ ಮತ್ತು ಶಾ ಪತ್ನಿಯ ಪಾತ್ರದಲ್ಲಿ ರೇಖಾ ಕೂಡ್ಲಿಗಿ ನೈಜ ಅಭಿನಯ ನೀಡಿದ್ದಾರೆ.

ಶ್ರೀಮಂತ ಯುವಕರ ತಂಡದ ವಿಚಾರಕ್ಕೆ ಬಂದರೆ, ಪ್ರಭು ಮುಂಡ್ಕೂರ್ ಖಳಛಾಯೆಯನ್ನು ತನ್ನ ನಟನೆಯ ಮೂಲಕ ಹೊರ ಹೊಮ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೈನ್ ಶೆಟ್ಟಿಯ ಪಾತ್ರವೇ ಅವರನ್ನು ವಿಭಿನ್ನವಾಗಿ ತೋರಿಸುತ್ತದೆ. ಉಳಿದಂತೆ ಒಂದೆರಡು ಸಲ ಬಂದು ಹೋಗುವ ಪೊಲಿಸ್ ಅಧಿಕಾರಿಯ ಪಾತ್ರಕ್ಕೆ ನಟ ನಂದಗೋಪಾಲ್ ಖಡಕ್ ಲುಕ್ ತಂದುಕೊಟ್ಟಿದ್ದಾರೆ. 2 ಗಂಟೆಯ ಚಿತ್ರದಲ್ಲಿ ಇಷ್ಟು ಹಾಡುಗಳು ಬೇಕಿತ್ತಾ ಅನಿಸಿದ್ರೂ ಅರ್ಜುನ್ ರಾಮು ಸಂಗೀತವನ್ನು ಮೆಚ್ಚದಿರಲು ಸಾಧ್ಯವಿಲ್ಲ. ಸಂದೀಪ್ ವಳ್ಳೂರಿ ಛಾಯಾಗ್ರಹಣಕ್ಕೂ ಪ್ಲಸ್ ಮಾರ್ಕ್ ನೀಡಬಹುದು.

ಕೊನೆಯಲ್ಲಿ ತೋರಿಸುವಂತೆ, ಒಟ್ಟು ಚಿತ್ರದ ಆಶಯ ಕುಡಿತದಿಂದ ಆಗುವ ಅಪಘಾತ ತಪ್ಪಿಸುವುದೇ ಆಗಿದ್ದಲ್ಲಿ ಒಕೆ. ಆದರೆ ಮರ್ಯಾದೆ ಪ್ರಶ್ನೆ ಎನ್ನುವ ಶೀರ್ಷಿಕೆ ವಿಚಾರಕ್ಕೆ ಬಂದರೆ ನಿರ್ದೇಶಕ ಯಾವ ಮಟ್ಟದಲ್ಲಿ ಮರ್ಯಾದೆ ಉಳಿಸಿಕೊಂಡಿದ್ದಾರೆ ಎನ್ನುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಯಾಕೆಂದರೆ ದೃಶ್ಯದಿಂದ ದೃಶ್ಯಗಳ ನಡುವಿನ ಓಡಾಟ ವೇಗವಾಗಿದೆ ಎನ್ನುವುದನ್ನು ಬಿಟ್ಟರೆ, ಮಧ್ಯಂತರದ ತನಕ ಕತೆಯ ಸುಳಿವೇ ಇಲ್ಲ. ಆನಂತರ ಕೂಡ ಒಂದು ಘಟನೆಯ ಅನಾವರಣದೊಂದಿಗೆ ಚಿತ್ರ ಕೊನೆಯಾಗುತ್ತದೆ. ಇದು ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಅಲ್ಲವಾದರೂ ಚೊಚ್ಚಲ ನಿರ್ದೇಶನದ ವಿಚಾರದಲ್ಲಿ ನಾಗರಾಜ ಸೋಮಯಾಜಿಗೆ ಮೆಚ್ಚುಗೆ ನೀಡಲು ಅಡ್ಡಿಯಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!