ನಿರ್ದೇಶನ : ಕೆ ರಾಘವ
ನಿರ್ಮಾಣ : ಬನಾನ ಶಿವರಾಂ
ತಾರಾಗಣ : ಪ್ರಮೋದ್ ಬೋಪಣ್ಣ, ಮೇಘನಾ ಗೌಡ, ರಮೇಶ್ ಭಟ್ ಇತರರು
ರೇಟಿಂಗ್ : 3.5/5
ಪ್ರೀತಿ ಮಾಡಿದರೆ ಸಾಲದು, ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುವ ಚಿತ್ರ ಮರೆಯದೆ ಕ್ಷಮಿಸು.
ಗಾರೆ ಕೆಲಸ ಮಾಡುವ ಹುಡುಗ, ಶ್ರೀಮಂತ ಹುಡುಗಿಯ ಪ್ರೀತಿಗೆ ಸಿಲುಕಿ ತನ್ನ ಜವಾಬ್ದಾರಿಯಿಂದ ವಿಮುಖನಾಗಿ ಯಾವ ರೀತಿ ಪಶ್ಚಾತಾಪ ಪಡುವ ಸಂದರ್ಭ ಬರುತ್ತದೆ ಎನ್ನುವ ಕಥಾವಸ್ತುವನ್ನು ಮರೆಯದೆ ಕ್ಷಮಿಸು ಚಿತ್ರ ಹೊಂದಿದೆ.
ಚಿತ್ರದ ನಾಯಕ ಮಂಜ ( ಪ್ರಮೋದ್ ಬೋಪಣ್ಣ) ಶ್ರೀಮಂತ ಕಂಟ್ರಾಕ್ಟರ್ (ರಮೇಶ್ ಭಟ್) ಮಗಳಾದ ನಂದಿನಿ(ಮೇಘನಾ ಶೆಟ್ಟಿ)ಯ ಸ್ನೇಹ ಸಂಪಾದಿಸಿ ಪ್ರೀತಿಸ ತೊಡಗುತ್ತಾನೆ. ನಂದಿನಿ ಮಂಜನಲ್ಲಿ ಸ್ನೇಹವನ್ನು ಮಾತ್ರ ಕಾಣುತ್ತಾಳೆ. ಆದರೆ ಆ ಅರಿವು ಇಲ್ಲದ ಮಂಜ ನಂದಿನಿಯ ಗಾಢ ಪ್ರೀತಿಯಲ್ಲಿ ಬಿದ್ದು ತನ್ನ ಎಲ್ಲ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಾನೆ.
ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದ ಮಂಜನ ತಾಯಿ, ಮಂಜ ಶ್ರೀಮಂತ ಹುಡುಗಿಯನ್ನು ಪ್ರೀತಿಸುವ ವಿಷಯ ತಿಳಿದು ಖುಷಿ ಪಡುತ್ತಾಳೆ. ಮಂಜನ ತಾಯಿ ಅನಾರೋಗ್ಯಕ್ಕೆ ಒಳಗಾದಾಗ ನಂದಿನಿ ಕರೆದಳೆಂದು ಹೊರಟು ಹೋಗುವ ಮಂಜ ಮತ್ತೆ ಮನೆಗೆ ಬರುವ ಹೊತ್ತಿಗೆ ಆಘಾತ ಕಾದಿರುತ್ತದೆ. ಮತ್ತೆ ಗಳಿಸಲಾರದ ವಸ್ತುವನ್ನು ತನ್ನ ನಿರ್ಲಕ್ಷದಿಂದ ಮಂಜ ಕಳೆದುಕೊಂಡಿರುತ್ತಾನೆ. ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿರುವ ಈ ಚಿತ್ರದಲ್ಲಿ ಮಂಜ ಮಾಡಿದ ತಪ್ಪಿಗೆ ತೆರುವ ದಂಡವನ್ನು ತಿಳಿದುಕೊಳ್ಳಲು ಸಿನಿಮಾ ಪ್ರಿಯರು ಥಿಯೇಟರಿಗೆ ಭೇಟಿ ನೀಡಬೇಕು.
ಪ್ರಮೋದ್ ಮಂಜನ ಪಾತ್ರದಲ್ಲಿ ಉತ್ತಮ ನಟನೆ ನೀಡಿದ್ದಾರೆ. ಮೇಘನಗೌಡ ಶ್ರೀಮಂತ ಹುಡುಗಿಯಾಗಿ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ಪ್ರೀತಿಗೆ ಸಿಲುಕುವ ಯುವ ಜನಾಂಗ ಜವಾಬ್ದಾರಿ ಮರೆಯಬಾರದು ಎನ್ನುವ ಸಂದೇಶವನ್ನು ನಿರ್ದೇಶಕ ಕೆ ರಾಘವ ನೀಡುವ ಯತ್ನ ಮಾಡಿದ್ದಾರೆ.
_______
Be the first to comment