ವಿಜಯ ರಾಘವೇಂದ್ರ ನಟನೆಯ ಮರೀಚಿ ಚಿತ್ರ ಡಿಸೆಂಬರ್ 8ರಂದು ಬಿಡುಗಡೆ ಆಗಲಿದ್ದು, ಚಿತ್ರದ ಟ್ರೈಲರ್ ನಿರೀಕ್ಷೆ ಮೂಡಿಸಿದೆ.
ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಚಿತ್ರತಂಡ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.
ನಾಯಕ ನಟ ವಿಜಯ್ ರಾಘವೇಂದ್ರ ಅವರು, ಚಿತ್ರಕ್ಕೆ ತಾಂತ್ರಿಕ ಸಿದ್ಧತೆ ಮಾಡಿಕೊಂಡು ಚಿತ್ರೀಕರಣ ಮಾಡಲಾಗಿದೆ. ಸಿನಿಮಾವನ್ನು ತುಂಬಾ ಪ್ರೀತಿಸುವ ನಿರ್ಮಾಪಕರು ಹಾಗೂ ನಿರ್ದೇಶಕರು ಇಲ್ಲಿದ್ದಾರೆ. ಚಿತ್ರದಲ್ಲಿ ಎಲ್ಲರೂ ಉತ್ತಮವಾಗಿ ನಟಿಸಿದ್ದಾರೆ. ಎಲ್ಲರ ಪ್ರೋತ್ಸಾಹ ಚಿತ್ರದ ಮೇಲೆ ಇರಲಿ ಎಂದು ಕೋರಿದ್ದಾರೆ.
ನಿರ್ದೇಶಕ ಹಾಗೂ ನಿರ್ಮಾಪಕ ಸಿದ್ರುವ್ ಅವರು, ಚಿತ್ರದಲ್ಲಿ ಪೊಲೀಸ್ ಆಫೀಸರ್ ಲೈಫ್ ಸ್ಟೈಲ್ ಚೆನ್ನಾಗಿ ಮೂಡಿ ಬಂದಿದೆ. ಎಲ್ಲಾ ಕಲಾವಿದರು, ತಾಂತ್ರಿಕ ವರ್ಗದವರು ನನಗೆ ಉತ್ತಮವಾಗಿ ಬೆಂಬಲ ನೀಡಿದ್ದಾರೆ. ಹುಟ್ಟುತ್ತಲ್ಲೇ ಯಾರೂ ಅಪರಾಧ ಮಾಡಬೇಕು ಎಂದುಕೊಳ್ಳುವುದಿಲ್ಲ. ಆದರೆ ಪರಿಸ್ಥಿತಿಗಳು ಮನುಷ್ಯನನ್ನು ಬದಲಾಯಿಸುತ್ತದೆ. ತಂತ್ರಜ್ಞಾನ ಕೆಟ್ಟ ಮನಸ್ಸಿಗೆ ಸಿಕ್ಕಾಗ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದು ಹೇಳಿದ್ದಾರೆ.
ಕೊಲೆ ರಹಸ್ಯ ಬೇಧಿಸುವ ಪೊಲೀಸ್ ಅಧಿಕಾರಿಯಾಗಿ ವಿಜಯ ರಾಘವೇಂದ್ರ ಅವರು ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯಾಗಿ ಸೋನು ಗೌಡ ಉತ್ತಮವಾಗಿ ನಟಿಸಿದ್ದಾರೆ. ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಮರೀಚಿ ಲವ್ ಸ್ಟೋರಿ ಒಳಗೊಂಡಂತೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ. ಇದು ಸಿದ್ದೃವ್ ಅವರ ನಿರ್ದೇಶನದ ಮೊದಲ ಸಿನಿಮಾ ಆಗಿದೆ. ಚಿತ್ರಕಥೆ, ಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಚಿತ್ರದಲ್ಲಿ ಅಭಿ ದಾಸ್, ಸ್ಪಂದನ ಸೋಮಣ್ಣ, ಗೋಪಾಲ್ ಕೃಷ್ಣ ದೇಶಪಾಂಡೆ, ಶೃತಿ ಪಾಟೀಲ್ ಇತರರು ನಟಿಸಿದ್ದಾರೆ.
ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಹಣ, ಜುಡ್ ಸ್ಯಾಂಡಿ ಸಂಗೀತ ನಿರ್ದೇಶನ ಇದೆ. ಎಸ್ ಎಸ್ ಆರ್ ಕೆ ಬ್ಯಾನರ್ ನಡಿ ಚಿತ್ರವನ್ನು ಸಿದ್ರುವ್ ಹಾಗೂ ಸಂತೋಷ್ ಮಾಯಪ್ಪ ಅವರು ನಿರ್ಮಿಸಿದ್ದಾರೆ.
____
Be the first to comment