ಮಾರ್ಚ್ 3 ಇನ್ನು ಮುಂದೆ ವಿಶ್ವ ಕನ್ನಡ ಸಿನಿಮಾ ದಿನ

ಮಾರ್ಚ್ 3ನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ ಆಗಿ ಆಚರಣೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಿನಿಮಾದಲ್ಲಿ ಮಾರ್ಚ್ 3 ಮಹತ್ವದ ದಿನವಾಗಿದೆ. 88 ವರ್ಷಗಳ ಹಿಂದೆ 1934 ರ ಮಾರ್ಚ್ 3ರಂದು ಕನ್ನಡದ ಮೊದಲ ಸಿನಿಮಾ ‘ಸತಿ ಸುಲೋಚನಾ’ ಬಿಡುಗಡೆ ಆಯಿತು. ಹಾಗಾಗಿ ಈ ದಿನವನ್ನು ವಿಶ್ವ ಕನ್ನಡ ಸಿನಿಮಾ ದಿನವನ್ನಾಗಿ ಆಚರಿಸಲಾಗುವುದು ಎಂದರು.

“ಕನ್ನಡ ಚಿತ್ರರಂಗ ಉಳಿಯಬೇಕಾದರೆ ವಿಶೇಷ ಶ್ರಮವನ್ನು ನಾವು ಹಾಕಬೇಕಾಗುತ್ತದೆ. ‘ಸ್ಪೆಶಲ್ ಎಫೆಕ್ಟ್’ ಜೊತೆಗೆ ‘ಸ್ಪೆಷಲ್ ಎಫರ್ಟ್’ ಬೇಕಿದೆ. ಈಗ ಹಲವು ಚಿತ್ರಮಂದಿರಗಳು ಮುಚ್ಚುತ್ತಿವೆ. ಚಿತ್ರಮಂದಿರಗಳು ಉಳಿಯಲು ಹೊಸ ತಂತ್ರಜ್ಞಾನ ಚಿತ್ರರಂಗಕ್ಕೆ ದೊರೆಯಬೇಕಿದೆ. ಕುಟುಂಬದವರು ಮತ್ತೆ ಒಟ್ಟಾಗಿ ಬಂದು ಸಿನಿಮಾ ನೋಡುವಂತೆ ಸಿನಿಮಾ ಮಾಡಬೇಕಿದೆ. ಇದಕ್ಕೆ ಸರ್ಕಾರ ಎಲ್ಲರೀತಿಯ ಸಹಕಾರ ನೀಡಲಿದೆ. ಕನ್ನಡ ಉಳಿಸಲು ಸಿನಿಮಾಗಳ ಅಗತ್ಯವೂ ಇದೆ ಎಂದು ಸಿಎಂ ಹೇಳಿದರು.

“ಪುನೀತ್ ರಾಜ್‌ ಕುಮಾರ್ ಅವರು ಸಮಾಜ, ಚಿತ್ರ ರಂಗಕ್ಕೆ ಕೊಟ್ಟ ಕೊಡುಗೆ ದೊಡ್ಡದು. ಅವರ ಕೊಡುಗೆ ಶಾಶ್ವತವಾಗಿ ಉಳಿಯಲಿದೆ. ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದ್ದು ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು” ಎಂದರು.

“ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ಸ್ಮಾರಕ ಮಾಡುವ ಬಗ್ಗೆಯೂ ಚರ್ಚಿಸಲಾಗುವುದು” ಎಂದು ಸಿಎಂ ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಭಾರತಿ ವಿಷ್ಣುವರ್ಧನ್, ಮಲಯಾಳಂ ಚಿತ್ರರಂಗದ ನಿರ್ದೇಶಕ ಪ್ರಿಯದರ್ಶನ್, ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಇತರರು ಇದ್ದರು.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!