ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಒಂದಷ್ಟು ನೈಜ ಘಟನೆಗಳು ಸಿನಿಮಾವಾಗಿ ತೆರೆಮೇಲೆ ಬಂದಿರುವುದನ್ನು ನೀವು ನೋಡಿರುತ್ತೀರಿ. ಈಗ ಅಂಥದ್ದೇ ಮತ್ತೊಂದು ನೈಜ ಘಟನೆ ಸಿನಿಮಾ ರೂಪದಲ್ಲಿ ತೆರೆಮೇಲೆ ಬರಲು ತಯಾರಾಗುತ್ತಿದೆ. ಅಂದಹಾಗೆ, ಆ ಸಿನಿಮಾದ ಹೆಸರು ‘ಮಾರ್ಚ್ 23’.
2021ರ ‘ಮಾರ್ಚ್ 23’ರ ಸಂಜೆ 6.30 ರ ಬಳಿಕ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ, ಈ ಚಿತ್ರ ತೆರೆಮೇಲೆ ಬರುತ್ತಿದೆ. ಹಾಗಾಗಿ, ಈ ಚಿತ್ರಕ್ಕೆ ‘ಮಾರ್ಚ್ 23’ ಎಂದು ಹೆಸರಿಡಲಾಗಿದೆ. ರೈಲು ನಿಲ್ದಾಣದ ಆವರಣದಲ್ಲಿಯೇ ಅಮಾಯಕ ರೈಲ್ವೇ ನೌಕರನೊಬ್ಬನ ಮೇಲೆ ನಡೆಯುವ ಅನ್ಯಾಯವನ್ನು ಪ್ರತಿಭಟಿಸುವ ವ್ಯಕ್ತಿ ಹೇಗೆಲ್ಲ ದೌರ್ಜನ್ಯಕ್ಕೆ ಒಳಗಾಗುತ್ತಾನೆ. ಅಂತಿಮವಾಗಿ ಜನಸಾಮಾನ್ಯನೊಬ್ಬ ಶೋಷಣೆಯ ವಿರುದ್ದ ಹೇಗೆಲ್ಲ ಹೋರಾಡುತ್ತಾನೆ? ಎಂಬ ವಿಷಯದ ಸುತ್ತ ‘ಮಾರ್ಚ್ 23’ ಚಿತ್ರದ ಕಥಾಹಂದರ ಸಾಗುತ್ತದೆ.
ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಸಕ್ರಿಯರಾಗಿರುವ, ಹತ್ತಾರು ವಿಭಿನ್ನ ಪಾತ್ರಗಳಲ್ಲಿ ಸಹನಟನಾಗಿ ಕಾಣಿಸಿಕೊಂಡಿರುವ ಮಧು ಮಂದಗೆರೆ, ‘ಮಾರ್ಚ್ 23’ ಚಿತ್ರದಲ್ಲಿ ನಾಯಕ ನಟನಾಗಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಿರ್ದೇಶಕನಾಗಿ ಮತ್ತು ಸಂಕಲನಕಾರನಾಗಿ ಗುರುತಿಸಿಕೊಂಡಿರುವ ವೇದ್, ‘ಮಾರ್ಚ್ 23’ ಚಿತ್ರಕ್ಕೆ ಸಂಕಲನ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಜಿ. ರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ‘ಮಾರ್ಚ್ 23’ ಚಿತ್ರದ ಬಹುತೇಕ ಸ್ಕ್ರಿಪ್ಟ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ‘ಮಾರ್ಚ್ 23’ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ‘ಮಾರ್ಚ್ 23’ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಅನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಮಾರ್ಚ್ 23’ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೇದ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ ಆರ್ಯನ್ ಸಂಗೀತ ಸಂಯೋಜಿಸುತ್ತಿದ್ದು, ಕೆ. ಕಲ್ಯಾಣ್, ನಾಗೇಶ್ ಪ್ರಸನ್ನ ಹಾಡುಗಳಿಗೆ ಸಾಹಿತ್ಯ ರಚಿಸುತ್ತಿದ್ದಾರೆ. ಉಳಿದಂತೆ ‘ಮಾರ್ಚ್ 23’ ಚಿತ್ರಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದೆ.
ಸದ್ಯ ‘ಮಾರ್ಚ್ 23’ ಚಿತ್ರದ ಶೀರ್ಷಿಕೆ ಮತ್ತು ಟೈಟಲ್ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಇದೇ ಏಪ್ರಿಲ್ ಅಂತ್ಯದೊಳಗೆ ಚಿತ್ರದ ಮುಹೂರ್ತವನ್ನು ನೆರವೇರಿಸಿಕೊಂಡು ಚಿತ್ರೀಕರಣಕ್ಕೆ ಹೊರಡುವ ಯೋಜನೆ ಹಾಕಿಕೊಂಡಿದೆ. ಬೆಂಗಳೂರು ಸುತ್ತಮುತ್ತ ‘ಮಾರ್ಚ್ 23’ ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ.





Be the first to comment