ರೈತರ ‘ಮಂಥನ್‌’ ಚಿತ್ರ ಬಿಡುಗಡೆ

ರೈತರೇ ಹಣ ಹಾಕಿದ ‘ಮಂಥನ್‌’ ಸಿನಿಮಾ, ಚಿತ್ರ ಮಂದಿರಗಳಲ್ಲಿ ಜೂನ್ 1 ಮತ್ತು 2 ರಂದು ಬಿಡುಗಡೆಯಾಗುತ್ತಿದೆ.

ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಮಂಥನ್ ಚಲನಚಿತ್ರ ಹೊಸ ರೂಪ ಪಡೆದು  50 ನಗರಗಳ 100 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ರಾಜ್ಯದ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಹಾಗೂ ಮೈಸೂರಿನ ಚಿತ್ರಮಂದಿರಗಳಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

1976 ರಲ್ಲಿ ಶ್ಯಾಮ್ ಬೆನಗಲ್ ನಿರ್ದೇಶಿಸಿದ ಈ ಸಿನಿಮಾಕ್ಕೆ ನಿರ್ಮಾಪಕರಾದವರು ಗುಜರಾತಿನ 5 ಲಕ್ಷ ಮಂದಿ ರೈತರು. ಅವರು ತಲಾ ಎರಡು ರೂ. ಗಳನ್ನು ನೀಡಿ ಈ ಚಿತ್ರವನ್ನು ನಿರ್ಮಿಸಿದ್ದರು. ರೈತರಿಂದ ಹತ್ತು ಲಕ್ಷ ರೂ. ಗಳನ್ನು ಸಂಗ್ರಹಿಸಿ ಸಿನಿಮಾ ನಿರ್ಮಿಸಿದ ಕಾರಣ ‘ಮಂಥನ್‌’ ಭಾರತದ ಮೊದಲ ಕ್ರೌಡ್ ಫಂಡಿಂಗ್‌ ಸಿನಿಮಾ ಎಂಬ ಖ್ಯಾತಿ ಪಡೆದಿತ್ತು. ಎತ್ತಿನಗಾಡಿಗಳಲ್ಲಿ ತಂಡೋಪತಂಡವಾಗಿ ಬಂದ  ರೈತರು ಸಿನಿಮಾ ವೀಕ್ಷಿಸಿ ಯಶಸ್ಸುಗೊಳಿಸಿದ್ದರು.

48 ವರ್ಷಗಳ ಬಳಿಕ ಈ ಸಿನಿಮಾವನ್ನು ಫಿಲ್ಮ್ ಹೆರಿಟೇಜ್ ಫೌಂಡೇಷನ್ (ಎಫ್ ಎಚ್ ಎಫ್) ಅವರು ಸಿನಿಮಾ ಪುನರ್ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಫ್ರಾನ್ಸ್ ನ ಕಾನ್ಸ್ ನಲ್ಲಿ ಮುಗಿದ 77ನೇ ಚಲನಚಿತ್ರೋತ್ಸವದಲ್ಲೂ ಈ ಸಿನಿಮಾ ರೆಸ್ಟೋರ್ ಕ್ಲಾಸಿಕ್ ವಿಭಾಗದಲ್ಲಿ ಪ್ರದರ್ಶಿತವಾಗಿತ್ತು.

 ಗುಜರಾತಿನ ಖೇಡ ಜಿಲ್ಲೆಯ ಆನಂದ್ ಗ್ರಾಮದಲ್ಲಿ ರೈತರು ಸೇರಿ ನಿರ್ಮಿಸಿದ ಹಾಲಿನ ಸೊಸೈಟಿಯ ಮೂಲಕ ಉಂಟಾದ ಕ್ಷೀರ ಕ್ರಾಂತಿಯೇ ಸಿನಿಮಾದ ಕಥಾವಸ್ತು. ಈ ಸಿನಿಮಾ  ಸಹಕಾರ ಸಂಘಟನೆಯ ಶಕ್ತಿ ಹಾಗೂ ಸಾಧ್ಯತೆಯನ್ನು ಮುಖ್ಯ ನೆಲೆಯಲ್ಲಿ ಹೇಳಿದೆ.  ಅಂದಿನ ಸಾಮಾಜಿಕ ಸ್ಥಿತಿ ಗತಿಗಳನ್ನೂ ದಾಖಲಿಸುವ ಪ್ರಯತ್ನ ಮಾಡಿದೆ.

ಖ್ಯಾತ ನಟ ಹಾಗೂ ನಿರ್ದೇಶಕ ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಷಾ, ಸ್ಮಿತಾ ಪಾಟೀಲ್, ಮೋಹನ್ ಅಗಾಸೆ, ಅನಂತನಾಗ್, ಅಮರೀಶ್ ಪುರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು .1976 ರಲ್ಲಿ ಈ ಚಿತ್ರಕ್ಕೆ ಹಾಗೂ ಚಿತ್ರಕಥೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.  ವನರಾಜ್ ಭಾಟಿಯಾ ಸಂಗೀತ ನಿರ್ದೇಶಿಸಿದ್ದ ಈ ಚಿತ್ರದ ಶೀರ್ಷಿಕೆ ಗೀತೆ ಹಾಡಿದ್ದಕ್ಕೆ ಪ್ರೀತಿ ಸಾಗರ್ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿತ್ತು.

‘ಮಂಥನ್‌’ ಬೆಂಗಳೂರಿನಲ್ಲಿ ಪಿವಿಆರ್ ಮೆಗಾಸಿಟಿ, ಮಾರ್ಕೆಟ್‌ ಸಿಟಿ, ಡಿಸಿ ರೆಕ್ಸ್, ಓರಿಯಾನ್, ಐನಾಕ್ಸ್ ,ಮಾಲ್ ಆಫ್ ಏಷ್ಯಾ, ಸಿನೆಪೊಲಿಸ್ ನ ಆರ್ ಎಂಎಂ, ಶಾಂತಿನಿಕೇತನ್, ಸಿ. ಸೋಭಾ ಗ್ಲೋಬಲ್, ಮಂಗಳೂರಿನ ಪಿವಿಆರ್ ಫೋರಂ, ಮೈಸೂರಿನ ಪಿವಿಆರ್ ಫೋರಂ, ಐನಾಕ್ಸ್ ಮಾಲ್ ಐಎಫ್, ಹುಬ್ಬಳ್ಳಿಯ ಪಿವಿಆರ್ ಹುಬ್ಬಳ್ಳಿ ಹಾಗೂ ಧಾರವಾಡದ ಐನಾಕ್ಸ್ ಸ್ಮಾರ್ಟ್ ಸಿಟಿ ಥಿಯೇಟರುಗಳಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!