ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕೆ ಮೀಸಲಿಟ್ಟಿದ್ದ ಹಣವನ್ನು ಕಾರ್ಮಿಕರಿಗೆ ವಿತರಿಸಿ ಎಂದು ನಿರ್ದೇಶಕ ಮಂಸೋರೆ ಮನವಿ ಮಾಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಚಲನ ಚಿತ್ರ ಕಾರ್ಮಿಕರ ಸಂಕಷ್ಟದ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಕೋವಿಡ್‌ನಿಂದಾಗಿ ಇಡೀ ರಾಜ್ಯ ದೇಶ ತತ್ತರಿಸಿದೆ. ಪ್ರತಿಯೊಬ್ಬ ಪ್ರಜೆಯೂ ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೋವಿಡ್ ತಡೆಯಲು ಲಾಕ್‌ಡೌನ್ ಹೇರಿದೆ. ಇದೇ ಸಂದರ್ಭದಲ್ಲಿ ಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೆ ಆರ್ಥಿಕ ಭದ್ರತೆ ಇಲ್ಲದೆ ನರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷರು ಸರ್ಕಾರಕ್ಕೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಸರ್ಕಾರ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಈ ಸಂದರ್ಭದಲ್ಲಿ ಸರ್ಕಾರದ ವಿಶೇಷ ಪ್ಯಾಕೇಜ್‌ಗಾಗಿ ಕಾಯದೇ, ಈ ಬಾರಿಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಕಾರ್ಮಿಕರಿಗೆ ವಿತರಿಸುವುದು ಹೆಚ್ಚು ಅರ್ಥಪೂರ್ಣ ಎನ್ನುವುದು ನನ್ನ ಭಾವನೆ ಎಂದು ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದ ಈಗಾಗಲೇ ಸಾಕಷ್ಟು ಜನ ತೀರಿಕೊಂಡಿದ್ದಾರೆ. ಮುಂದೆ ಜೀವನ ಹೇಗೋ ಎಂದು ನೂರಾರು ಕುಟುಂಬಗಳು ಕಂಗಾಲಾಗಿವೆ. ಇಂತಹ ಸಂದರ್ಭಗದಲ್ಲಿ ಚಿತ್ರೋತ್ಸವಕ್ಕಿಂತ ಜೀವಗಳನ್ನು ಕಾಪಾಡಿಕೊಳ್ಳುವುದು ಆದ್ಯತೆಯಾಗಲಿ ಎಂಬುದು ನನ್ನ ಕೋರಿಕೆ. ಈ ಬಾರಿಯ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಆಕ್ಟ್-1978 ಸಿನೆಮಾವನ್ನು ಕೂಡ ಸ್ಪರ್ಧೆಗೆ ಕಳುಹಿಸಲಾಗಿದೆ. ಹಾಗಿದ್ದರೂ ಕೂಡ ನನಗೆ ಚಿತ್ರೋತ್ಸವ ರದ್ದಾಗುವುದರ ಬಗ್ಗೆ ಯಾವ ಬೇಸರವೂ ಇಲ್ಲಾ. ಈಗ ಎಲ್ಲದಕ್ಕಿಂತ ಜೀವ-ಜೀವನ ಮುಖ್ಯ ಎಂದು ಮನವಿ ಸಲ್ಲಿಸಿದ್ದಾರೆ.
2021ನೇ ಸಾಲಿನ ಬೆಂಗಳೂರು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಪೂರ್ಣವಾಗಿ ರದ್ದುಗೊಳಿಸಿ, ಅದಕ್ಕಾಗಿ ಮೀಸಲಿಟ್ಟಿದ್ದ ಅನುದಾನವನ್ನು ದಯವಿಟ್ಟು ಕನ್ನಡ ಚಿತ್ರರಂಗದ ಸಂಘಟಿತ-ಅಸಂಘಟಿತ ಎಲ್ಲಾ ವಿಭಾಗದ ಕಾರ್ಮಿಕರಿಗೆ ನೀಡುವುದರ ಮೂಲಕ ದಯವಿಟ್ಟು ಕಾಪಾಡಿ. @CMofKarnataka @BIFFESBLR @SuneelPuranik @prajavani @tv9kannada
— mansore (@mansore25) May 19, 2021
Be the first to comment