Film192021 : ಮಂಸೋರೆ ನಿರ್ದೇಶನದ ‘19.20.21’ ಚಿತ್ರ ಮಾ.3ಕ್ಕೆ ಬಿಡುಗಡೆ

ನಿರ್ದೇಶಕ ಮಂಸೋರೆ ‘19.20.21’ ಸಿನಿಮಾ ಮೂಲಕ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದ್ದಾರೆ. ಟೀಸರ್ ಮೂಲಕ ಬಹಳ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಕುತೂಹಲ ಭರಿತ ಟ್ರೇಲರ್ ಬಿಡುಗಡೆ ಮಾಡಿದೆ. ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹಾಗೂ ನಾದಬ್ರಹ್ಮ ಹಂಸಲೇಖ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ಮಂಸೋರೆ ಮಾತನಾಡಿ ನೈಜ ಘಟನೆ ಆಧರಿಸಿದ ಸಿನಿಮಾವಿದು. ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾ ಮಾಡಲು ಸ್ಪೂರ್ತಿ. ಈ ಘಟನೆಗೆ ಸಂಬಂಧಿಸಿದಂತೆ ಕಳೆದ ಒಂಭತ್ತು ವರ್ಷದಿಂದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದ್ದೇನೆ. 2021ರಲ್ಲಿ ಘಟನೆಗೆ ಸಂಬಂಧಿಸಿದ ತೀರ್ಪು ಬಂದ ಮೇಲೆ ಸಿನಿಮಾ ಮಾಡಲು ನಿರ್ಧರಿಸಿದ್ವಿ. ನಾನು, ವೀರೇಂದ್ರ ಮಲ್ಲಣ್ಣ ಮತ್ತು ಸಂತೋಷ್ ಮೂರು ಜನ ಈ ಘಟನೆಗೆ ಸಂಬಂಧಿಸಿದ ಮಾಹಿತ ಕಲೆ ಹಾಕಿ ಸ್ಕ್ರಿಪ್ಟ್ ಮಾಡಿದ್ದೇವೆ. ಸಮುದಾಯದ ಒಬ್ಬ ಹುಡುಗನ ಹೋರಾಟದ ಕಥೆ ಇದು. ನಿರ್ಮಾಪಕರಾದ ದೇವರಾಜ್ ಹಾಗೂ ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಕಥೆ ಕೇಳಿ ಸಿನಿಮಾ ನಿರ್ಮಾಣಕ್ಕೆ ಒಪ್ಪಿಕೊಂಡ್ರು. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಸಹ ನಿರ್ಮಾಪಕರಾದ ಸತ್ಯ ಹೆಗ್ಡೆ ಮಾತನಾಡಿ ಚಿತ್ರದ ಸ್ಕ್ರಿಪ್ಟ್ ತುಂಬಾ ಇಷ್ಟ ಆಯ್ತು. ರೆಗ್ಯೂಲರ್ ಸಿನಿಮಾ ಬಿಟ್ಟು ನೈಜ ಘಟನೆ ಆಧಾರಿತ ಹಾಗೂ ಪ್ರಯೋಗಾತ್ಮಕ ಸಿನಿಮಾ ಮಾಡೋಣ ಎಂದು ನಿರ್ಧರಿಸಿದ್ವಿ. ಒಂದೊಳ್ಳೆ ಕಥೆಗೆ, ಚಿತ್ರತಂಡಕ್ಕೆ ಸಪೋರ್ಟ್ ಆಗಿ ಇದ್ದೇನೆ ಎಂದು ತಿಳಿಸಿದ್ರು.

ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ ಈ ಚಿತ್ರದ ಟ್ರೇಲರ್ ನೋಡಿದ ಮೇಲೆ ಸಮಾಜಕ್ಕೆ, ಸರ್ಕಾರಕ್ಕೆ, ವ್ಯವಸ್ಥೆಗೆ ಬೇಕಾಗಿರುವ ಸಿನಿಮಾವನ್ನು ಮಂಸೋರೆ ಹಾಗೂ ಅವರ ತಂಡ ನೀಡಿದೆ ಎನ್ನಿಸುತ್ತೆ. ಮಂಸೋರೆ ಅವರ ಬರವಣಿಗೆ, ಮಾಡುವ ಸಿನಿಮಾಗಳು ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿವೆ. ಯುವ ಸಮೂಹಕ್ಕೆ, ಪ್ರಜ್ಞಾವಂತರಿಗೆ ಹಾಗೂ ಸಮಾಜದಲ್ಲಿ ಘಾತುಕ ಶಕ್ತಿಗಳಾಗಿ ಕೆಲಸ ಮಾಡಲು ಹೊರಡುತ್ತಿರುವವರು ಈ ಸಿನಿಮಾ ನೋಡಿದ ಮೇಲೆ ವಾಪಾಸ್ಸು ಸಾಮಾಜಿಕ ನ್ಯಾಯದ ಪರವಾಗಿ ಬರುದ ಸಾಧ್ಯತೆ ತುಂಬಾ ಇದೆ. ಎಲ್ಲರೂ ಸಿನಿಮಾ ನೋಡಿ ಚಿತ್ರತಂಡಕ್ಕೆ ಬೆಂಬಲ ನೀಡಿ ಎಂದು ತಿಳಿಸಿದ್ರು.

ನಾದಬ್ರಹ್ಮ ಹಂಸಲೇಖ ಮಾತನಾಡಿ ಸಂವಿಧಾನದ ಹಿನ್ನೆಲೆ ಇಟ್ಟುಕೊಂಡು ಟೈಟಲ್ ಇಟ್ಟಿರೋದು ಭಾರತೀಯ ಚಿತ್ರರಂಗದಲ್ಲಿ ಇದೆ ಮೊದಲು. ಇತ್ತೀಚೆಗೆ ಸಂವಿಧಾನವನ್ನು ರಕ್ಷಿಸಲು ಎಲ್ಲರೂ ಮುಂದೆ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ಸಿನಿಮಾ ಎಂಬ ಪ್ರಚಂಡ ಮಾಧ್ಯಮದ ಮೂಲಕ ಮಂಸೋರೆ ‘19.20.21’ ಚಿತ್ರದ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿದ್ದಾರೆ. ಇದೇ ರೀತಿಯ ಇನ್ನಷ್ಟು ಉತ್ತಮ ಸಿನಿಮಾಗಳನ್ನು ಮಂಸೋರೆ ಮಾಡಲಿ ಎಂದು ನಿರ್ದೇಶಕರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.

ಚಿತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ. ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ ‘19.20.21’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!