ಶ್ರೀ ಭರತ ಬಾಹುಬಲಿಯ ಕುರಿತು ಮಂಜು ಮಾಂಡವ್ಯ ಮನದ ಮಾತು

ಬಿಸಿನಿಮಾಸ್ ನಲ್ಲಿ 👉ಶ್ರೀ ಭರತ ಬಾಹುಬಲಿಯ ಕುರಿತು ಮಂಜು ಮಾಂಡವ್ಯ ಮನದ ಮಾತು 

ಮಂಜು ಮಾಂಡವ್ಯ ನಾಯಕರಾಗಿದ್ದಾರೆ. ಈಗಾಗಲೇ ಸಂಭಾಷಣೆ, ಸಾಹಿತ್ಯ, ನಿರ್ದೇಶನದ ಮೂಲಕ ಗುರುತಿಸಿಕೊಂಡು, ಪೋಷಕನಟನಾಗಿಯೂ ಪಾತ್ರ ಮಾಡಿದ್ದ ಮಂಜು ಮಾಂಡವ್ಯ ಶ್ರೀ ಭರತ ಬಾಹುಬಲಿ ಚಿತ್ರಕ್ಕಾಗಿ ಸಂಪೂರ್ಣ ನಾಯಕನ ಅವತಾರವೆತ್ತಿದ್ದಾರೆ. ಪಾತ್ರಕ್ಕೆ ಏನು ಬೇಕೋ ಅಷ್ಟು ಮಾಡಿಕೊಂಡಿದ್ದೇನೆ ಎನ್ನುವ ಮಂಜು ಅವರು ಚಿತ್ರದಲ್ಲಿಇಂದಿನ ಯುವ ಸಮುದಾಯದ ಸ್ವಾರ್ಥ ಯಾವ ಮಟ್ಟಕ್ಕೆ ಇದೆ ಎನ್ನುವುದನ್ನು ತೋರಿಸಿದ್ದಾರಂತೆ. ಪೂರ್ತಿ ಸಿನಿಮಾ ಕರ್ನಾಟಕದಲ್ಲೇ ಅಂದರೆ ರಾಯಚೂರು, ಚಿಕ್ಕಮಗಳೂರು ಮತ್ತು ಶ್ರವಣಬೆಳಗೊಳದಲ್ಲಿ ಶೂಟ್ ಮಾಡಲಾಗಿದೆ. ಪೌರಾಣಿಕವಾಗಿ ಭರತ ಬಾಹುಬಲಿಯನ್ನು ಪ್ರತಿನಿಧಿಸುವ ಶ್ರವಣ ಬೆಳಗೊಳದಲ್ಲಿನ ದೃಶ್ಯಗಳನ್ನು ಕೂಡ ಫ್ಲ್ಯಾಶ್ ಬ್ಯಾಕ್ ನಲ್ಲಿ ತೋರಿಸಲಾಗಿದೆ. ಆ ದೃಶ್ಯಗಳು ಮಧ್ಯಂತರದ ಬಳಿಕ ಚಿತ್ರದಲ್ಲಿ ಬರುತ್ತವೆ. ಅದರಲ್ಲಿ ಬರುವ ಭರತ ಬಾಹುಬಲಿಯ ಪಾತ್ರಗಳನ್ನು ಬೇರೆ ಇನ್ನಿಬ್ಬರು ಕಲಾವಿದರು ಅಭಿನಯಿಸಿದ್ದಾರೆ. ಕತೆ ಮೂರು ಲೇಯರ್ ಗಳಲ್ಲಿರುತ್ತದೆ. ಎರಡು ಗಂಟೆ ಮೂವತ್ತೈದು ನಿಮಿಷಗಳ ಕಾಲಾವಧಿ ಇರುತ್ತದೆ. ಆದರೆ ಎಲ್ಲಿಯೂ ಬೋರ್ ಹೊಡೆಯದಂತೆ ಕತೆ ಮತ್ತು ಸಂಭಾಷಣೆಗಳಿರುತ್ತವೆ ಎಂದು ಭರವಸೆ ನೀಡಬಲ್ಲೆ ಎನ್ನುವ ನಿರ್ದೇಶಕ ಮಂಜು ಮಾಂಡವ್ಯ ಚಿತ್ರದ ಬಗ್ಗೆ ನೀಡಿರುವ ಇನ್ನಷ್ಟು ಮಾಹಿತಿಗಳು ಇಲ್ಲಿವೆ.

ಯುವ ಜನಾಂಗದ ಸ್ವಾರ್ಥದ ಅನಾವರಣ

ಚಿತ್ರದಲ್ಲಿ ನಾನು ನನ್ನದು ಎನ್ನುವುದನ್ನೇ ಮುಖ್ಯವಾಗಿಸಿಕೊಂಡಿರುವ ಇಬ್ಬರು ಸ್ನೇಹಿತರ ನಡುವೆ ತ್ಯಾಗದ ಮನೋಭಾವವೇ ಕಡಿಮೆಯಾಗುತ್ತದೆ. ಪುರಾಣದಲ್ಲಿ ಭರತ ಬಾಹುಬಲಿಯ ಪಾತ್ರಗಳಲ್ಲಿ ತ್ಯಾಗದ ಕತೆಯಿದೆ. ಇಲ್ಲಿ ನನ್ನ ಮತ್ತು ಚಿಕ್ಕಣ್ಣನ ಪಾತ್ರಗಳು ಕೂಡ ಅವುಗಳನ್ನು ಪ್ರತಿನಿಧಿಸುವಂತಿರುತ್ತವೆ. ಆದರೆ ಮುಂದೆ ಯಾಕೆ ಅವರ ನಡುವೆ ಬದಲಾವಣೆ ಮೂಡುತ್ತದೆ ಎಂದು ಚಿತ್ರದಲ್ಲಿ ಹೇಳಿದ್ದೇನೆ.

ಚಿತ್ರ ನೋಡಿದವರಿಗೆ ಪ್ರಶಸ್ತಿ

ಈ ಪ್ರಶಸ್ತಿಯ ಬಗ್ಗೆ ಯಾರಿಗೂ ಸಂದೇಹವೇ ಬೇಕಾಗಿಲ್ಲ. ಯಾಕೆಂದರೆ ಇದು ಖಂಡಿತವಾಗಿ ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಇದರಲ್ಲಿ ಯಾವುದೇ ಮೋಸ ಇಲ್ಲ. ಟಿಕೆಟ್ ಜತೆಗೆ ನೀಡುವ ಬಹುಮಾನದ ಚೀಟಿಗಾಗಿಯೇ ಈಗಾಗಲೇ 20 ಲಕ್ಷ ರೂಪಾಯಿ ಖರ್ಚಾಗಿದೆ.. ಹತ್ತು ಕಾರು ಮತ್ತು ಚಿನ್ನಾಭರಣಗಳನ್ನು ಈಗಲೇ ಕೊಂಡು ತಯಾರಾಗಿ ಇರಿಸಿದ್ದೇವೆ. ನಾವು ಕಾರು ಎಲ್ಲಿಂದ ಪರ್ಚೇಸ್ ಮಾಡಿದ್ದೇವೆ ಅವರಿಂದಲೇ ಬೈಟ್ ತೆಗೆದುಕೊಂಡು ತೋರಿಸಲಿದ್ದೇವೆ. ಮಾಧ್ಯಮಗಳ ಮುಂದೆ ಯಶ್ ಅವರನ್ನು ಕರೆಸಿ ಲೈವ್ ಡ್ರಾ ಮಾಡುತ್ತೇವೆ. ಬಳಿಕ ಗೆದ್ದವರಿಗೆ ವಿತರಿಸುವುದನ್ನು ಕೂಡ ತೋರಿಸುತ್ತೇವೆ. ಜನ ಮೊದಲು ಈ ಬಹುಮಾನಗಳಿಗೆಂದೇ ಚಿತ್ರ ಮಂದಿರಕ್ಕೆ ಬಂದರೆ ಸಾಕು! ಯಾಕೆಂದರೆ ಬಹುಮಾನ ಸಿಕ್ಕರೂ ಸಿಗದಿದ್ದರೂ ನೋಡಿದ ಚಿತ್ರ ಅವರ ಮನಗೆಲ್ಲುವ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ.

ಶೂಟಿಂಗ್ ನಲ್ಲಿ ಮರೆಯಲಾಗದ ಘಟನೆ

ನಿತ್ಯವೂ ಮೆಮೋರೇಬಲ್. ಯಾಕೆಂದರೆ ನಿತ್ಯವೂ ನಿರ್ದೇಶನದ ಜತೆಗೆ ನಟನೆ, ನಿರ್ಮಾಣದ ಬಗ್ಗೆಯೂ ಗಮನ ಕೊಡುತ್ತಿದ್ದ ಕಾರಣ ಪ್ರತಿಯೊಂದು ವಿಚಾರವೂ ಸ್ಮರಣಾರ್ಹವಾಗಿಯೇ ಉಳಿಯಿತು. ಚಿತ್ರದ ಹಾಡೊಂದರಲ್ಲಿ ಜೇನು ಹುಳುಗಳು ದಾಳಿ ನಡೆಸುವ ದೃಶ್ಯವೊಂದನ್ನು ಚಿತ್ರೀಕರಿಸಿದ್ದೇವೆ. ವಿಶೇಷ ಏನೆಂದರೆ ಆ ಶೂಟ್ ಮಾಡಿದ ಮೇಲೆ ಬ್ರಿಜ್ ಮೇಲೆ ಒಂದು ಫೈಟ್ ಸೀನ್ ಒಂದು ತೆಗೆಯುತ್ತಿದ್ದೆವು. ಆಗ ನಿಜಕ್ಕೂ ಜೇನು ಹುಳಗಳು ಓಡಿಸಿ ಬಂದವು. ಫೈಟ್ ಮಾಸ್ಟರ್ ನದಿಗೇ ಹಾರಿಬಿಟ್ಟಿದ್ರು. ನನಗೆ ಆ ಹಾಡಲ್ಲಿ ಹೇಗೆ ಓಮ್ನಿ ಗಾಡಿ ಬಂದು ಕರೆದುಕೊಂಡು ಹೋಗುತ್ತೋ ಅದೇ ರೀತಿ ಅಲ್ಲಿಂದ ಕರೆದುಕೊಂಡು ಹೋಗಿದ್ದು ಮರೆಯಲಾಗದ ಘಟನೆ.
ಸಿನಿಮಾ ಬಗ್ಗೆ ಪುಸ್ತಕ

ಸಿನಿಮಾ ಬಗ್ಗೆ ಅಂದರೆ ಈ ಸಿನಿಮಾ ಮೇಕಿಂಗ್ ಬಗ್ಗೆ ಬರೆಯುತ್ತಿಲ್ಲ. ಅದು ಟೋಟಲಿ ಯಾವುದೇ ಒಬ್ಬ ಸಿನಿಮಾ ಮೇಕರ್ ಗೆ ಉಪಯೋಗವಾಗುವಂಥ ಪುಸ್ತಕ ಬರೆಯೋಣ ಅಂತ ಇದ್ದೀನಿ. ಇದು ಒಬ್ಬ ಹೊಸ ನಿರ್ಮಾಪಕನಿಗೆ ಚಿತ್ರ ಮಾಡಲು ಸುಲಭವಾಗುವಂಥ ಅಂಶಗಳನ್ನು ಹೊಂದಿರುತ್ತವೆ. ಯಾವಾಗ ಖರ್ಚು ಮಾಡಲೇಬೇಕಾಗುತ್ತದೆ ಮತ್ತು ಯಾವುದಕ್ಕೆ ಅತಿಯಾದ ಖರ್ಚು ಮಾಡಬಾರದು ಎನ್ನುವುದನ್ನು ಪುಸ್ತಕದಲ್ಲಿ ಸೂಚಿಸಲಾಗುತ್ತದೆ.
ಸಿನಿಮಾದಲ್ಲಿವೆ ವೈವಿಧ್ಯಮಯ ಗೀತೆಗಳು

ಚಿತ್ರದಲ್ಲಿ ಎಂಟು ಹಾಡುಗಳಿವೆ. ನಾನು ಹಾಡಿರೋ ಗೀತೆಯ ಸ್ಲ್ಯಾಂಗ್ ನನಗೆ ಚೆನ್ನಾಗಿ ಗೊತ್ತಿರುವ ಕಾರಣ ನಾನೇ ಟ್ರ್ಯಾಕ್ ಹಾಡಿದರೆ ಚೆನ್ನಾಗಿರುತ್ತದೆ ಎಂದರು ನಮ್ಮ ಸಂಗೀತ ನಿರ್ದೇಶಕರು. ಹಾಗೆ ಹಾಡಿದೆನೇ ಹೊರತು ಹಾಡಿಗಾಗಿ ಸಂಗೀತ ಕಲಿತಿಲ್ಲ. ಆದರೆ ಟ್ರ್ಯಾಕ್ ಸಿಂಗರ್ ನಂತೆ ಹಾಡಿದ ಗೀತೆಯನ್ನೇ ಇಟ್ಟುಕೊಂಡು ಹಾಡಿನ ಶೂಟಿಂಗ್ ಕೂಡ ಮಾಡಿದೆವು. ಚಿತ್ರತಂಡದವರೆಲ್ಲರೂ ಹಾಡನ್ನು ಮೆಚ್ಚಿದರು. ಆಗ ಮಣಿಕಾಂತ್ ಅವರು ಇದೇ ಹಾಡನ್ನೇ ಚಿತ್ರದಲ್ಲಿಯೂ ಇರಿಸಿಕೊಳ್ಳೋಣ ಎಂದರು. ಒಂದು ರೀತಿಯಲ್ಲಿ ಅದರ ಮುಖ್ಯ ಭಾಗವನ್ನು ಲೇಡಿ ಸಿಂಗರ್ ಹಾಡಿದ್ದಾರೆ. ಮೈತ್ರಿ ಅಯ್ಯರ್ ಅವರ ಕಂಠದಿಂದಾಗಿ ನನ್ನ ದನಿಗೆ ಒಂದು ಮೆರುಗು ದೊರಕಿದೆ ಎನ್ನಬಹುದು.

ಲೇಡೀಸ್ ಬಾರ್ ತರಹ ಇದುವರೆಗೆ ಯಾರೂ ತೋರಿಸಿರಲಿಲ್ಲ. ಮನೆ ಸಮಸ್ಯೆಯಿಂದಾಗಿ ಗಂಡಸರು ಕುಡಿಯಬಹುದಾದರೆ ಹುಡುಗೀರಿಗೂ ಬಾರ್ ಬೇಕು ಎಂದು ತೋರಿಸಿದ್ದೇವೆ. ಅದು ಒಂದು ರೀತಿಯಲ್ಲಿ ವ್ಯಂಗ್ಯವೇ ಹೊರತು ಮಹಿಳೆಯರು ಬಾರ್ ಗೆ ಹೋಗಿ ಕುಡಿಯಬೇಕು ಎನ್ನುವ ಸಮರ್ಥನೆ ಖಂಡಿತಾ ಅಲ್ಲ. ಇದು ಫ್ಯಾಮಿಲಿ ಎಂಟರ್ಟೇನರ್ ಆಗಿದ್ದು ಯುಎ ಸರ್ಟಿಫಿಕೆಟ್ ಪಡೆದಿರುವ ಚಿತ್ರ. ಜಾಹೀರಾತು ಸೇರಿಸಿ ಚಿತ್ರದ ಅವಧಿ ಸುಮಾರು 2 ಗಂಟೆ 45 ನಿಮಿಷ ಆಗಬಹುದು. ಆದರೆ ಎಲ್ಲಿಯೂ ಬೋರ್ ಅನಿಸದ ಮಾದರಿಯಲ್ಲಿ ಚಿತ್ರ ನಿಮ್ಮನ್ನು ಹಿಡಿದಿರಿಸಿಕೊಳ್ಳುವ ಬಗ್ಗೆ ಸಂಪೂರ್ಣ ಭರವಸೆ ನನಗಿದೆ.

-ಭೀಮರಾಯ

Be the first to comment

Leave a Reply

Your email address will not be published. Required fields are marked *

Translate »
error: Content is protected !!