ನಿರ್ದೇಶನ: ಪ್ರವೀಣ್ ಸಿ ಪಿ
ತಾರಾಗಣ: ರೋಬೋ ಗಣೇಶನ್, ಆಕರ್ಷ್ ಆದಿತ್ಯ, ರಚಿತಾ, ಮಾನಸ ಜೋಶಿ
ರೇಟಿಂಗ್: 3.5
ಇಬ್ಬರು ಪ್ರಾಣ ಸ್ನೇಹಿತರ ನಡುವೆ ಯುವತಿ ಒಬ್ಬಳು ಎಂಟ್ರಿ ಕೊಟ್ಟಾಗ ಯಾವ ರೀತಿಯ ಘಟನೆಗಳು ಉಂಟಾಗಬಹುದು ಎನ್ನುವ ತ್ರಿಕೋನ ಪ್ರೇಮಕಥೆಯ ನಡುವಣ ದ್ವೇಷದ ಕಥಾ ಹಂದರ ಹೊಂದಿದ ಚಿತ್ರವಾಗಿ ಎವಿಡೆನ್ಸ್ ಪ್ರೇಕ್ಷಕರ ಮುಂದೆ ಬಂದಿವೆ.
ಸಿನಿಮಾ ಕೆವಿನ್ ಹಾಗೂ ಅನಾಥ ಹುಡುಗ ಸ್ವರೂಪ್ ನಡುವಣ ಗೆಳೆತನದ ಜೊತೆಗೆ ಪ್ರೀತಿಯ ಕಥೆಯನ್ನು ಹೊಂದಿದೆ. ಕೆವಿನ್ ಡಾಕ್ಟರ್ ಆಗಿದ್ದು, ಬಹಳ ಸಮಯದ ನಂತರ ತನ್ನ ಸ್ನೇಹಿತ ಸ್ವರೂಪನನ್ನು ಭೇಟಿಯಾಗುತ್ತಾನೆ. ಆಗ ಸ್ವರೂಪ ತಾನು ಸಾನ್ವಿಯನ್ನು ಪ್ರೀತಿಸುವ ವಿಚಾರವನ್ನು ತಿಳಿಸುತ್ತಾನೆ. ಕೆವಿನ್ ಮುಂದೆ ಇವರಿಬ್ಬರಿಗೂ ಮದುವೆ ಮಾಡಿಸುತ್ತಾನೆ. ಜೋಡಿಯ ಮೇಲೆ ಕೊಲೆಯ ಅಟ್ಯಾಕ್ ಆಗುತ್ತದೆ. ಮುಂದೆ ಒಂದಷ್ಟು ಸಮಸ್ಯೆ ಉಂಟಾಗುತ್ತದೆ. ಈ ಜೋಡಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಿನಿಮಾ ಹೊಸ ತಿರುವನ್ನು ಪಡೆಯುತ್ತದೆ. ಆದರೆ ಪೊಲೀಸ್ ತಂಡ ಈ ಜೋಡಿಯದ್ದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ತನಿಖೆಯನ್ನು ಕೈಗೊಳ್ಳುವ ಮೂಲಕ ಚಿತ್ರ ಹೊಸ ಮಗ್ಗುಲಿಗೆ ಹೊರಳುತ್ತದೆ.
ಚಿತ್ರದಲ್ಲಿ ಸ್ಪೆಷಲ್ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಮಾನಸ ಜೋಶಿ ಕಾಣಿಸಿಕೊಂಡಿದ್ದಾರೆ. ಅವರು ಆತ್ಮಹತ್ಯೆ ಎಂದು ಕ್ಲೋಸ್ ಆಗಿರುವ ದಂಪತಿಗಳ ಕೇಸ್ ನ್ನು ರೀ ಓಪನ್ ಮಾಡಿಸಿ ಡಾಕ್ಟರ್ ಕೆವಿನ್ ಬಾಯಿಯಲ್ಲಿ ಕಥೆಯನ್ನು ಹೇಳಿಸುತ್ತಾರೆ. ಇಲ್ಲಿಂದ ಕಥೆ ಪ್ರೇಕ್ಷಕರ ಮುಂದೆ ಕುತೂಹಲದೊಂದಿಗೆ ಸಾಗುತ್ತದೆ.
ಚಿತ್ರದ ಕ್ಲೈಮ್ಯಾಕ್ಸ್ ವರೆಗೆ ಕೊಲೆಯನ್ನು ಮಾಡಿದವರು ಯಾರು ಎನ್ನುವ ಕುತೂಹಲ ಕಾಪಾಡಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಪ್ರೀತಿ, ಗೆಳೆತನದಲ್ಲಿ ದ್ವೇಷದ ಕಿಚ್ಚು ಹಬ್ಬಿದರೆ ಏನಾಗುತ್ತದೆ ಎನ್ನುವುದು ಚಿತ್ರದ ಹೈಲೈಟ್ಸ್.
ನಾಯಕ ರೋಬೋ ಗಣೇಶನ್ ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಾನಸ ಜೋಶಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದಂಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆಕರ್ಷ ಆದಿತ್ಯ, ರಚಿತಾ ಪಾತ್ರಕ್ಕೆ ಜೀವ ತುಂಬುವ ಯತ್ನ ಮಾಡಿದ್ದಾರೆ.
ರವಿ ಸುವರ್ಣ ಅವರ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದ ಹಿನ್ನೆಲೆ ಸಂಗೀತ ಓಕೆ ಅನಿಸುತ್ತದೆ.
____
Be the first to comment