ಚಿತ್ರ ವಿಮರ್ಶೆ :ವಿರೂಪ ಮನಸುಗಳ ವಿಭಿನ್ನ ಕಥೆ ಅಪರೂಪ ಈ ಮನರೂಪ
ಚಿತ್ರ: ಮನರೂಪ
ತಾರಾಗಣ: ದಿಲೀಪ್ ಗೌಡ, ನಿಶಾ ಬಿ ಆರ್, ಆರ್ಯನ್, ಅನುಷಾ ರಾವ್, ಶಶಾಂಕ್
ನಿರ್ದೇಶನ: ಕಿರಣ್ ಹೆಗ್ಡೆ
ನಿರ್ಮಾಣ: ಕಿರಣ್ ಹೆಗ್ಡೆ
ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳು ಬರತೊಡಗಿದ ಮೇಲೆ ವೈವಿಧ್ಯಮಯ ವಿಷಯಗಳ ಕುರಿತಾಗಿಯೂ ಸಿನಿಮಾಗಳು ಬರತೊಡಗಿವೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಮನರೂಪ ಎನ್ನಬಹುದು.
ಒಂದು ರೀತಿಯಲ್ಲಿ ಇದು ಮತ್ತೆ ಒಂದಾದವರ ಕತೆ. ಅಂದರೆ ಒಂದೇ ಕಾಲೇಜ್ ನಲ್ಲಿ ಸ್ನೇಹಿತರಾಗಿದ್ದ ಐದು ಮಂದಿ ವರ್ಷಗಳ ಬಳಿಕ ಕಾಡೊಂದಕ್ಕೆ ಟ್ರೆಕ್ಕಿಂಗ್ ಹೊರಡುತ್ತಾರೆ. ಅಲ್ಲಿ ಕರಡಿಗುಹೆ ಎನ್ನುವ ಸ್ಥಳದಲ್ಲಿ ರಾತ್ರಿ ತಂಗುವುದು ಅವರ ಯೋಜನೆಯಾಗಿರುತ್ತದೆ. ಆದರೆ ಅವರ ಯೋಜನೆ ತಲೆಕೆಳಗಾಗುವ ರೀತಿಯಲ್ಲಿ ನಡೆಯುವ ಘಟನೆಗಳೇನು? ಮತ್ತು ಅದು ಯಾಕೆ ಹಾಗೆ ಆಗುತ್ತವೆ ಎನ್ನುವುದೇ ಚಿತ್ರದ ಕತೆ.
ಟ್ರೆಕ್ಕಿಂಗ್ ಯೋಜನೆ ಹಾಕಿದ ಗೌರವ್ ಮಲೆನಾಡು, ಸುತ್ತುತ್ತಾನೆ. ಆತನ ಜತೆಗೆ ಪೂರ್ಣ, ಶಶಾಂಕ್, ಶರವಣ ಮತ್ತು ಉಜ್ವಲ ಎನ್ನುವ ಒಡನಾಡಿಗಳೂ ಇರುತ್ತಾರೆ. ಮಲೆನಾಡು, ಯಕ್ಷಗಾನ ಎಲ್ಲವನ್ನು ತೋರಿಸುತ್ತಾನೆ. ಆದರೆ ಕಾಡು ಸೇರಿ ಮಲಗಿದವರು ಬೆಳಿಗ್ಗೆ ಏಳುವಾಗ ಪರಿಸ್ಥಿತಿ ಸಂಪೂರ್ಣ ಬದಲಾಗಿರುತ್ತದೆ. ಅವರಲ್ಲಿ ಪೂರ್ಣ ಮತ್ತು ಶರವಣ ನಾಪತ್ತೆಯಾಗಿರುತ್ತಾರೆ. ಅವರಿಬ್ಬರನ್ನು ಗೌರವ್ ಜತೆಗೆ ಉಜ್ವಲ ಮತ್ತು ಶಶಾಂಕ್ ಕೂಡ ಸೇರಿಕೊಂಡು ಹುಡುಕುತ್ತಾರೆ. ಬಳಿಕ ಮೂವರು ಮೂರು ದಾರಿಗಳನ್ನು ಹಿಡಿಯುತ್ತಾರೆ. ಆದರೆ ಅವರಿಗೆ ಕಾಡಿನಲ್ಲಿ ಭಯಾನಕ ಶಬ್ದಗಳು ಕೇಳಿಸುತ್ತವೆ. ಅವರಲ್ಲೇ ಇದ್ದ ಬಲೂನ್ ಗಳಲ್ಲಿ, ಮರಗಳ ಮೇಲೆ ಅರ್ಥವಾಗದ ಸಂಕೇತಗಳನ್ನು ಹಾಕಲಾಗಿರುತ್ತದೆ. ಕೊನೆಯಲ್ಲಿ ಅಡಗಿ ನಿಂತು ಆಕ್ರಮಣವನ್ನು ಕೂಡ ಮಾಡಲು ಶುರು ಮಾಡುತ್ತಾರೆ. ಅದೃಷ್ಟವಶಾತ್ ಉಜ್ವಲ ಅವರ ಕೈಗೆ ಸಿಕ್ಕಿ ಬೀಳುವುದಿಲ್ಲ. ಆದರೆ ನಾಪತ್ತೆಯಾದ ಪೂರ್ಣ ಮತ್ತು ಶರವಣ ಏನಾದರು? ತಮ್ಮನ್ನು ಕಾಡಿನಲ್ಲಿ ಅಟ್ಟಾಡಿಸಿ ಹೊಡೆಯುತ್ತಿರುವ ಮೂವರು ಸೈಕೋಪಾತ್ ಕಿಲ್ಲರ್ ಗಳ ವಿರುದ್ಧ ಶಶಾಂಕ್ ಮತ್ತು ಗೌರವ್ ಹೇಗೆ ಹೋರಾಡುತ್ತಾರೆ ಎನ್ನುವುದನ್ನು ತಿಳಿಯಬೇಕಾದರೆ ನೀವು ಮನರೂಪ ಚಿತ್ರ ನೋಡಬೇಕು.
ಸೈಕೋಪಾತ್ ಕಿಲ್ಲರ್ ಗಳ ಬಗ್ಗೆ ಕನ್ನಡದಲ್ಲಿ ಸಿನಿಮಾಗಳು ಬಂದಿರುವುದು ವಿರಳ. ಅದರಲ್ಲಿ ಕೂಡ ಅಪರಾಧವನ್ನು ಆನ್ಲೈನ್ ಸರಕಾಗಿಸಿ ಚಿತ್ರಿಸಿರುವ ಸಿನಿಮಾಗಳು ವಿರಳಾತಿವಿರಳ. ಆದರೆ ಅಂಥದೊಂದು ಭಯಾನಕ ಲೋಕದ ದರ್ಶನವನ್ನು ಕನ್ನಡಿಗರಿಗೆ ಮಾಡಿಸುವಲ್ಲಿ ನಿರ್ದೇಶಕ ಕಿರಣ್ ಹೆಗ್ಡೆ ಗೆದ್ದಿದ್ದಾರೆ ಎನ್ನಬಹುದು. ಹೊಸಮುಖಗಳೇ ಚಿತ್ರದಲ್ಲಿದ್ದರೂ ಪಾತ್ರಗಳಿಗೆ ಹೊಂದಿಕೊಂಡು ತಮ್ಮ ಛಾಪು ಮೂಡಿಸುವಲ್ಲಿ ಗೆದ್ದಿದ್ದಾರೆ. ಅದರಲ್ಲಿಯೂ ಕೊಡೆಯೊಂದಿಗೆ ತಿರುಗಾಡುವ ಶಶಾಂಕ್ ಪಾತ್ರಧಾರಿ ಆರ್ಯನ್ ತಮ್ಮ ಪಾತ್ರದ ವಿಶಿಷ್ಟತೆಯಿಂದಲೇ ಗಮನ ಸೆಳೆಯುತ್ತಾರೆ. ಯಕ್ಷಗಾನದ ವೇಷಧಾರಿಯಾಗಿ ಸೈಕೋ ಅಭಿನಯ ನೀಡಿದ ಯುವನಟನ ಬಗ್ಗೆಯೂ ಇದೇ ಮಾತು ಹೇಳಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಛಾಯಾಗ್ರಹಣದ ಬಗ್ಗೆ ಪ್ರಶಂಸಿಸಲೇಬೇಕು. ಚಿತ್ರದ ತೊಂಬತ್ತೊಂಬತ್ತು ಭಾಗ ಕಾಡು ಮತ್ತು ಕಾಡು ದಾರಿಯಲ್ಲೇ ಚಿತ್ರೀಕರಿಸಲ್ಪಟ್ಟಿದ್ದರೂ ಅದನ್ನು ಆಕರ್ಷಕವಾಗಿಸುವಲ್ಲಿ ಗೋವಿಂದ ರಾಜ್ ಅವರ ಛಾಯಾಗ್ರಹಣದ ಪಾತ್ರ ದೊಡ್ಡದು. ಭಯಾನಕ ಸಂದರ್ಭಕ್ಕೆ ಅನುಸಾರವಾಗಿ ಸರವಣ ಅವರ ಸಂಗೀತ ಕೂಡ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಂತಿದೆ. ಅದರಲ್ಲಿ ನಾಗರಾಜ್ ಹುಲಿವಾನ ಅವರು ಸೌಂಡ್ ಡಿಸೈನ್ ಕೈವಾಡವೂ ಇದೆ.
ಚಿತ್ರ ನೋಡಿದ ಸಾಮಾನ್ಯ ಪ್ರೇಕ್ಷಕರಿಗೆ ನಾವು ನಮ್ಮ ಮಕ್ಕಳ ಬೆಳವಣಿಗೆ ಸಮಯದಲ್ಲಿ ಸರಿಯಾದ ಸಮಯವನ್ನು ಅವರಿಗೆ ನೀಡದೇ ಹೋದರೆ ಅವರು ಎಂಥ ಅಪಾಯಕ್ಕೆ ಬಲಿಯಾಗಬಹುದು ಎನ್ನುವ ಸೂಚನೆಯನ್ನು ನೀಡುತ್ತದೆ. ತಂತ್ರಜ್ಞಾನಗಳು ಇಂದು ಮನುಷ್ಯನನ್ನು ಮನೆಯಲ್ಲಿದ್ದುಕೊಂಡೇ ಮಾನಸಿಕರೋಗಿಯನ್ನಾಗಿ ಮಾಡಬಲ್ಲವು. ಅಂಥ ಪರಿಸ್ಥಿತಿ ಬರದೇ ಇರಲಿಕ್ಕಾಗಿ ಕೌಟುಂಬಿಕ ಪ್ರೇಮ, ಜವಾಬ್ದಾರಿ ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಮನದಟ್ಟು ಮಾಡುವಂಥ ಚಿತ್ರ ಇದು.
@ಭಿಸಿನಿಮಾಸ್
Be the first to comment