ದಟ್ಟ ಕಾಡನ್ನು ಸೀಳಿಕೊಂಡ ರಸ್ತೆಯಲ್ಲಿ ಸಾಗುತ್ತಿರುವ ಒಂಟಿ ಕಾರನ್ನು ತೋರಿಸುವ ಟೈಟಲ್ ಪೋಸ್ಟರ್ ಮೂಲಕವೇ ಸಿನಿಮಾಸಕ್ತರ ಗಮನ ಸೆಳೆದ ಮನರೂಪ ಸಿನಿಮಾ ಇಂದು ತೆರೆಕಾಣುತ್ತಿದೆ. ಹೊಸ ತಲೆಮಾರಿನ, ಹೊಸ ಬಗೆಯ ಬಿಕ್ಕಟ್ಟಿನ ಕಥೆಯನ್ನು ಮನರೂಪ ಸಿನಿಮಾದಲ್ಲಿ ಹೇಳಲಾಗುತ್ತಿದೆ ಎಂಬ ಮಾಹಿತಿಯನ್ನು ಟೈಟಲ್ ಪೋಸ್ಟರ್ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡ ಹೇಳಿಕೊಂಡಿತ್ತು. ಕರಡಿ ಗುಹೆಯನ್ನು ಹುಡುಕಿಕೊಂಡು ದಟ್ಟ ಕಾಡಿನಲ್ಲಿ ಸಾಗುವ ಸ್ನೇಹಿತರಲ್ಲಿ ತೆರೆದುಕೊಳ್ಳುವ ವೈವಿಧ್ಯಮಯ ರೂಪಗಳೇ ಮನರೂಪ.
ಸಿ.ಎಂ.ಸಿ.ಆರ್. ಮೂವೀಸ್ ನಿರ್ಮಾಣ ಮಾಡಿರುವ ಮನರೂಪ ಸಿನಿಮಾದಲ್ಲಿ ಎಲ್ಲಾ ಕಲಾವಿದರೂ ಹೊಸಬರೇ. ಚಿತ್ರೀಕರಣದ ಪೂರ್ವದಲ್ಲಿ 15 ದಿನಗಳ ಕಾಲ ಅಭಿನಯ ತಾಲೀಮು ನಡೆಸಲಾಗಿದೆ. ಉತ್ತರಕನ್ನಡದ ಶಿರಸಿ, ಸಿದ್ಧಾಪುರ ಭಾಗಗಳಲ್ಲಿ ಮನರೂಪ ಚಿತ್ರೀಕರಣ ಮಾಡಲಾಗಿದೆ. ಮುಖ್ಯ ಭೂಮಿಕೆಯಲ್ಲಿ ದಿಲೀಪ್ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್., ಆರ್ಯನ್, ಶಿವಪ್ರಸಾದ್ ಅಭಿನಯಿಸಿದ್ದಾರೆ. ಅಮೋಘ್ ಸಿದ್ಧಾರ್ಥ್, ಗಜಾ ನೀನಾಸಂ, ಪ್ರಜ್ವಲ್ ಗೌಡ ವಿಭಿನ್ನ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಂಗಭೂಮಿ ಕಲಾವಿದ ರಮಾನಂದ ಐನಕೈ, ಸತೀಶ್ ಗೋಳಿಕೊಪ್ಪ, ಪವನ್ ಕಲ್ಮನೆ, ಯಶೋಧಾ ಹೊಸಕಟ್ಟ, ಭಾಗೀರತಿ ಕನ್ನಡತಿ ಮುಂತಾದವರು ಅಭಿನಯಿಸಿದ್ದಾರೆ.
ಮನರೂಪ ಸಿನಿಮಾ ಹಲವು ಕಾರಣಗಳಿಂದ ಗಮನ ಸೆಳೆಯಲಿದೆ ಎಂಬುದು ನಿರ್ದೇಶಕ ಕಿರಣ್ ಹೆಗಡೆ ವಿಶ್ವಾಸ. ಸಿನಿಮಾ ಡಿವೋರ್ಸ್, ಪ್ರೀತಿ, ಗೆಳೆತನ ಮುಂತಾದ ಮನುಷ್ಯನ ಸ್ವಾಭಾವಿಕ ಗುಣಗಳ ಬಗ್ಗೆ ಮಾತನಾಡುತ್ತಲೇ, ನಾಗರಿಕ ನಿಯಮಗಳ ಉಲ್ಲಂಘನೆಯ ಹೆಜ್ಜೆಗಳನ್ನು ತೋರಿಸುವ ಪ್ರಯತ್ನ ಮಾಡಲಿದೆ. ಇದನ್ನೇ ಮನುಷ್ಯನ ಮನಸಿನ ಕತ್ತಲೆ ಜಗತ್ತು ಎಂದೂ, ಈ ಕತ್ತಲೆ ಜಗತ್ತನ್ನು ಕರಡಿ ಗುಹೆಯ ಕತ್ತಲೆಗೆ ಹೋಲಿಸುವ ಪ್ರಯತ್ನವನ್ನು ಮನರೂಪದಲ್ಲಿ ಮಾಡಲಾಗಿದೆ.
ಪ್ರೇಕ್ಷಕರು 2019ರಲ್ಲಿ ತಪ್ಪದೇ ನೋಡಬೇಕಾದ ಚಿತ್ರ ಮನರೂಪ.
ಪ್ರೇಕ್ಷಕರನ್ನು ದಟ್ಟ ಕಾಡಿನಲ್ಲಿ ತಮ್ಮನ್ನು ತಾವೇ ಪಯಣಿಸಿದಂತೆ ರೂಪಿಸಲಾಗಿದೆ. ಗೋವಿಂದ ರಾಜ್ ಅವರ ಛಾಯಾಗ್ರಹಣ ಪ್ಲಸ್ ಪಾಯಿಂಟ್. ಮುಖವಾಡದ ಭಯ (ಮಾಸ್ಕ್ ಫೋಭಿಯಾ), ಸ್ವಮೋಹ ಮತ್ತು ಸಾಧನೆಯ ಗೀಳು, ಮನಸಿನ ಹಲವು ಶೇಡ್‍ಗಳ ಅನಾವರಣ ಪ್ರೇಕ್ಷಕರನ್ನು ತಟ್ಟಲಿದೆ. ಸರವಣ ಅವರ ಹೊಸತನ ಹೊಂದಿರುವ ಸಂಗೀತ. ಡುಡಕ್, ಡಿಡ್‍ಜಾರೊ, ಕಾಜೊ ಮುಂತಾದ ಸಂಗೀತ ವಾದ್ಯಗಳನ್ನು ಬಳಸಿ ಪ್ರೇಕ್ಷಕರನ್ನು ಕಾಡಲಿದೆ. ನಾಗರಾಜ್ ಹುಲಿವಾನ್ ಸೌಂಡ್ ಎಫೇಕ್ಟ್ ಕೂಡಾ ನೈಜತೆಯನ್ನು ಕಾದುಕೊಳ್ಳುತ್ತದೆ. ಗೋವಿಂದರಾಜ್ ಛಾಯಾಗ್ರಹಣ, ಸೂರಿ-ಲೋಕಿ ಸಂಕಲನ ಮನರೂಪ ಚಿತ್ರಕ್ಕಿದೆ. ಸಾಹಿತಿ ಮಹಾಬಲ ಸೀತಾಳಭಾವಿ ಸಂಬಾಷಣೆ ಬರೆದಿದ್ದಾರೆ.

Be the first to comment