ಚಿತ್ರ : ಮನದ ಕಡಲು
ನಿರ್ದೇಶನ : ಯೋಗರಾಜ್ ಭಟ್
ನಿರ್ಮಾಣ : ಇ ಕೃಷ್ಣಪ್ಪ
ಕಲಾವಿದರು : ಸುಮುಖ, ರಾಶಿಕಾ ಶೆಟ್ಟಿ, ಅಂಜಲಿ ಅನೀಶ್
ರೇಟಿಂಗ್ : 4/5
ಯೋಗರಾಜ್ ಭಟ್ಟರ ಸಿನಿಮಾ ಅಂದಮೇಲೆ ಏನೆಲ್ಲ ನಿರೀಕ್ಷೆಗಳು ಮೂಡುವುದೋ ಅವೆಲ್ಲದರ ಜೊತೆಗೆ ಮೂಡಿ ಬಂದಿರುವ ಚಿತ್ರ ಮನದ ಕಡಲು. ಹೀಗಾಗಿ ಭಟ್ಟರ ಅಭಿಮಾನಿಗಳು ಹಾಜರಾಗಬೇಕಾದ ಚಿತ್ರ.
ಚಿತ್ರದ ಕತೆಯ ವಿಚಾರಕ್ಕೆ ಬಂದರೆ ಇಲ್ಲಿ ನಿರ್ದೇಶಕರು ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿ ಒಂದು ಹೊಸ ವಿಚಾರವನ್ನು ತಂದಿದ್ದಾರೆ. ಅದುವೇ ರಾಜರ ಕಾಲದಲ್ಲಿ ನಡೆದ ಘಟನೆ. ಆ ಘಟನೆ ಏನು? ಅದಕ್ಕೂ ಚಿತ್ರಕ್ಕೂ ಏನು ಸಂಬಂಧ ಎನ್ನುವುದು ತಿಳಿಯಬೇಕಾದರೆ ನೀವು ಸಿನಿಮಾ ನೋಡಲೇಬೇಕು. ಉಳಿದಂತೆ ಇಲ್ಲಿ ಒಂದು ತ್ರಿಕೋನ ಪ್ರೇಮಕತೆ ಇದೆ. ನಾಯಕನ ಪ್ರೇಮ ನಿವೇದನೆಗೆ ಉತ್ತರಿಸಲು 5 ತಿಂಗಳ ಕಾಲಾವಧಿ ತೆಗೆದುಕೊಳ್ಳುವ ನಾಯಕಿ ಆ ಬಳಿಕ ಏನು ಮಾಡುತ್ತಾಳೆ ಎನ್ನುವುದು ಕೂಡ ಕತೆಯ ಒಂದು ಪ್ರಮುಖ ತಿರುವು.
ನಾಯಕನಾಗಿ ಸುಮುಖ ನಿಜಕ್ಕೂ ಸುಮುಖ ಸುಂದರ. ಉಡಾಫೆಯ ನಾಯಕನಾಗಿ ಯೋಗರಾಜ್ ಭಟ್ಟರ ಈ ಹಿಂದಿನ ಸಿನಿಮಾಗಳ ನಾಯಕನನ್ನು ನೆನಪಿಸುತ್ತಾರೆ. ಇಬ್ಬರು ನಾಯಕಿಯರಿಗೂ ಉತ್ತಮ ಸ್ಕ್ರೀನ್ ಸ್ಪೇಸ್ ಸಿಕ್ಕಿದೆ.
ಅರ್ಥವಾಗದ ಭಾಷೆಯಲ್ಲಿ ಹಾಡುಗಳನ್ನು ಮಾತ್ರ ಬರೆಯುತ್ತಿದ್ದ ಭಟ್ಟರು, ಈ ಬಾರಿ ಸಂಭಾಷಣೆಯನ್ನೂ ಬರೆದಿದ್ದಾರೆ. ರಂಗಾಯಣ ರಘು ಮಾತುಗಳು ಅಂಥದೊಂದು ವಿಶೇಷ ಭಾಷೆಯಲ್ಲಿವೆ. ಹಿರಿಯ ಕಲಾವಿದ ದತ್ತಣ್ಣನಿಂದ ಅರ್ಥಪೂರ್ಣ ಮಾತುಗಳನ್ನಾಡಿಸಲಾಗಿದೆ.
ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಪ್ರಕೃತಿ ರಮಣೀಯತೆಗೆ ಕನ್ನಡಿ ಹಿಡಿದಿದೆ. ವಿ ಹರಿಕೃಷ್ಣ ಸಂಗೀತದ ಹಾಡುಗಳು ತಾಳಹಾಕುವಂತಿವೆ. ಮೊದಲೇ ಹೇಳಿದಂತೆ ಇದು ಯೋಗರಾಜ್ ಭಟ್ಟರ ಅಭಿಮಾನಿಗಳು ನೋಡಲೇಬೇಕಾದ ಸಿನಿಮಾ.

Be the first to comment