ಟಾಕ್ಸಿಕ್ ಚಿತ್ರದ ತಯಾರಿ ಬ್ಯುಸಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಇದೇ 28ರಂದು ತೆರೆ ಕಾಣುತ್ತಿರುವ ‘ಮನದ ಕಡಲು’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೊದಲ ಚಿತ್ರದ ನಿರ್ಮಾಪಕ, ನಿರ್ದೇಶಕರಿಗೆ ಧನ್ಯವಾದ ಹೇಳಿದರು.
‘ನಾನಿಂದು ಈ ಸ್ಥಾನದಲ್ಲಿದ್ದೇನೆ ಎಂದರೆ ಅದಕ್ಕೆ ಮುಖ್ಯ ಕಾರಣ ನಿರ್ಮಾಪಕರಾದ ಈ.ಕೃಷ್ಣಪ್ಪ, ಗಂಗಾಧರ್ ಮತ್ತು ನಿರ್ದೇಶಕ ಶಶಾಂಕ್. ನಾನು ಆ ದಿನಗಳನ್ನು ಎಂದಿಗೂ ಮರೆಯುವುದಿಲ್ಲ. ಅವರಿಗೆ ಋಣಿಯಾಗಿರುತ್ತೇನೆ. ಇಂದು ಕಾರ್ಯಕ್ರಮಕ್ಕೂ ಅದೇ ಕೃತಜ್ಞತೆಯನ್ನಿಟ್ಟುಕೊಂಡು ಬಂದಿದ್ದೇನೆ’ ಎಂದರು.
‘ಮೊಗ್ಗಿನ ಮನಸು’ ಸಿನಿಮಾದಲ್ಲಿ ರಾಧಿಕಾ ಪಂಡಿತ್ ನಟಿಸುತ್ತಿದ್ದಳು. ರಾಧಿಕಾ ಸಿನಿಮಾ ಮಾಡುತ್ತಿದ್ದೇನೆ ಎಂದಾಗ ಆಲ್ ದಿ ಬೆಸ್ಟ್ ಎಂದೆ. ಇನ್ನೊಂದು ವಾರ ಮಾತ್ರ ಶೂಟ್ ಬಾಕಿ ಇದೆ’ ಎಂದಳು. ಹಾಗಿದ್ದಾಗ ನಿರ್ಮಾಣ ಸಂಸ್ಥೆ ಕಡೆಯಿಂದ ನನಗೆ ಕರೆ ಬಂತು. ನೀವು ಹೀರೋ ಆಗಿ ನಟಿಸಬೇಕು ಎಂದು ತಂಡ ಕೇಳಿಕೊಂಡಿತ್ತು. ರಾಧಿಕಾ ಒಂದು ವಾರ ಶೂಟ್ ಮಾತ್ರ ಇದೆ ಎಂದಿದ್ದರು. ಯಾರೋ ಸುಮ್ಮನೆ ಆಟ ಆಡಿಸುತ್ತಿದ್ದಾರೆ ಎಂದು ಸುಮ್ಮನಾದೆ. ಆ ಬಳಿಕ ಮತ್ತೆ ಕರೆ ಬಂತು. ನಾನು ಹೋದೆ. ಹೀರೋಗೆ ಕಾಲು ಪೆಟ್ಟಾಗಿದ್ದರಿಂದ ಆ ಆಫರ್ ಸಿಕ್ಕಿತು. ನಿರ್ದೇಶಕ ಶಶಾಂಕ್ ಕಥೆ ಹೇಳಿದರು, ಹಾಡುಗಳನ್ನು ಕೇಳಿಸಿದರು. ನಿರ್ಮಾಪಕ ಕೃಷ್ಣಪ್ಪ ನೀವು ಧಾರಾವಾಹಿಗಳಲ್ಲಿ ನಟಿಸೋ ಹುಡುಗ ಅಲ್ವ? ಒಳ್ಳೆದಾಗಲಿ ಎಂದು ಹಾರೈಸಿದರು. ಇಂದಿಗೂ ಅವರ ಮೇಲೆ ಆ ಗೌರವ ಇದೆ. ನನಗೆ ಮೊದಲು ಅವಕಾಶ ಕೊಟ್ಟು ಬೆಳೆಸಿದ್ದಕ್ಕೆ ಇಂದು ನಾನಿಲ್ಲಿದ್ದೇನೆ’ ಎಂದರು.
‘ನನಗೆ ಸಿನಿಮಾ ಮಾಡುವ ಆಸೆ ಇತ್ತು. ಎಲ್ಲರೂ ಆಫರ್ ನೀಡುತ್ತಿದ್ದರು. ಆದರೆ ಕಥೆ ಕೇಳಿದರೆ ‘ಅವಕಾಶ ಕೊಡುತ್ತಿರುವುದೇ ಹೆಚ್ಚು. ಕಥೆ ಬೇರೆ ಹೇಳಬೇಕಂತೆ. ಎಷ್ಟು ಧಿಮಾಕು’ ಎಂದು ಹೇಳುತ್ತಿದ್ದರು. ‘ನಾನು ಏನು ಮಾಡುತ್ತಿದ್ದೇನೆ ಎಂಬುದು ಗೊತ್ತಿಲ್ಲದೆ ನನ್ನಿಂದ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದು ನಂಬುವವನು ನಾನು. ಕಥೆ ಕೇಳೇ ಕೇಳುತ್ತೇನೆ ಎಂದು ಹೇಳುತ್ತಿದ್ದೆ’ ಎಂದರು.
ವ್ಯಕ್ತಿ ತಾನಾಗಿಯೇ ಬೆಳೆಯಲು ಸಾಧ್ಯವಿಲ್ಲ, ದೊಡ್ಡ ಗುರಿ ಇಟ್ಟುಕೊಂಡು ಸಾಗಬೇಕು. ಜವಾಬ್ದಾರಿ ಬೆಳೆಸಿಕೊಂಡು ಮುನ್ನಡೆಯಬೇಕು, ಚಿತ್ರರಂಗಕ್ಕೆ ಯುವ ನಟರು ಬರಬೇಕು ಎಂದರು.
ಅಭಿಮಾನಿಗಳು ‘ಟಾಕ್ಸಿಕ್ ಬಗ್ಗೆ ಅಪ್ಡೇಟ್ ಕೊಡಿ’ ಎಂದು ಕೂಗುತ್ತಿದ್ದರು. ಆಗ ಯಶ್ ‘ಇವತ್ತು ಮನದ ಕಡಲು ಚಿತ್ರದ ಬಗ್ಗೆ ಮಾತನಾಡೋಣ. ಈ ಚಿತ್ರದ ನಾಯಕ, ನಾಯಕಿಯರು ಹೊಸಬರು. ಅವರಿಗೆ ಅವಕಾಶ ಕೊಡಿ ಬೆಳೆಯಲಿ’ ಎಂದು ಕೇಳಿಕೊಂಡರು.

Be the first to comment