ಸೇನಾಪುರ ಚಿತ್ರ ನಿರ್ದೇಶಕ ಗುರು ಸಾವನ್ ಅವರ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮನ್ ರೇ ಟೀಸರ್ ಬಿಡುಗಡೆ ಆಗಿದೆ.
ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು.
ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ತಿಲಕ್ ರಾಜು ಹಾಗೂ ರಾಜಣ್ಣ ಅವರು ಭೂಮಿಕ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಜಯ್ ರಾಜ್, ಐಶ್ವರ್ಯ ರಂಗರಾಜನ್, ಪ್ರಮೋದ್ ಶೆಟ್ಟಿ, ರಜಿನಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಗುರು ಸಾವನ್, ಮನ್ ರೇ ಅಂದರೆ ಮನಸ್ಸಿನ ಎಕ್ಸ್ ರೇ ಆಗಿದೆ. ಭ್ರಮಾಲೋಕದಲ್ಲಿ ಬದುಕುವ ಪ್ರತಿಯೊಬ್ಬ ಮನುಷ್ಯನ ಜಾಗ್ರತ ಹಾಗೂ ಸೂಕ್ತ ಮನಸ್ಸಿನ ನಡುವೆ ನಡೆಯುವ ಯುದ್ಧ ಇದಾಗಿದೆ. ಕಳೆದ ಎಂಟು ವರ್ಷದಿಂದ ಕಥೆಯನ್ನು ಅಭಿವೃದ್ಧಿ ಮಾಡಿಕೊಂಡು ಬಂದಿದ್ದೇನೆ. ಈ ರೀತಿಯ ಮನಸ್ಥಿತಿ ಇರುವ ಜನರಿಂದ ಯಾವ ರೀತಿ ತೊಂದರೆ ಆಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.
ನವೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಾಗುವುದು. ಮೂಡಿಗೆರೆ, ಚಿಕ್ಕ ಮಗಳೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಜನೆ ಇದೆ. ನಂಜುಂಡ ಅವರು ಅರವ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಮೋದ್ ಶೆಟ್ಟಿ ಅವರು ವೈದ್ಯರ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ತಿಲಕ್ ರಾಜು ಮಾತನಾಡಿ, ನಾನು ಹಿಂದೆ ಮ್ಯೂಸಿಕ್ ಆಲ್ಬಮ್ ಮಾಡಿದ್ದೆ. ಕನ್ನಡ ಚಿತ್ರರಂಗ ಬೆಳೆಸಬೇಕು ಎಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದರು.
ನಾಯಕ ನಟ ಅಜಯ್ ರಾಜ್ ಮಾತನಾಡಿ, ನಾನು ಹಾಗೂ ನಿರ್ದೇಶಕರು ಹಲವಾರು ಸೀರಿಯಲ್ ಗಳಲ್ಲಿ ಕೆಲಸ ಮಾಡಿದ್ದೇವೆ. ಚಿತ್ರದ ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ ಎಂದು ಹೇಳಿದರು.
ನಾಯಕಿ ಐಶ್ವರ್ಯ ಅವರು, ನಾನು ಚಿತ್ರದಲ್ಲಿ ರತಿ ಎನ್ನುವ ಹೆಸರಿನ ಡಾಕ್ಟರ್ ಪಾತ್ರ ಮಾಡುತ್ತಿದ್ದೇನೆ. ಈ ಹಿಂದೆ ಸೀತಾರಾಮ್ ಅವರ ಸೀರಿಯಲ್ ನಲ್ಲಿ ಅಭಿನಯಿಸಿದ್ದೇನೆ ಎಂದು ಹೇಳಿದರು.
ಇನ್ನೊಬ್ಬ ನಾಯಕಿ ರಜಿನಿ ಮಾತನಾಡಿ, ಈ ಹಿಂದೆ ನಾನು ಅಂಬುಜ ಚಿತ್ರದಲ್ಲಿ ಅಭಿನಯಿಸಿದ್ದೆ. ಕಲ್ಪನಾ ಲೋಕದಲ್ಲಿರುವ ಕಲ್ಪನಾ ಪಾತ್ರ ನನ್ನದಾಗಿದೆ ಎಂದರು.
ಚಿತ್ರದಲ್ಲಿ ಮೂರು ಹಾಡುಗಳಿದ್ದು ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಆದಿ ಛಾಯಾಗ್ರಹಣ ಚಿತ್ರಕ್ಕಿದೆ.
____


Be the first to comment