ಮಳೆಬಿಲ್ಲು ಜುಲೈ ಕೊನೆಯವಾರ ಬಿಡುಗಡೆ

ಪ್ರೀತಿಯನ್ನು ಪ್ರಕೃತಿಯ ಹಲವಾರು ವಿಸ್ಮಯಗಳಿಗೆ ಹೋಲಿಸುತ್ತಾರೆ. ಅದರಲ್ಲಿ ಮಳೆಬಿಲ್ಲು ಕೂಡ ಒಂದು. ಇದೇ ಶೀರ್ಷಿಕೆಯಡಿ ನಿರ್ಮಾಣವಾಗಿರುವ ಚಿತ್ರವೊಂದು ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಬಿಸಿಲಲ್ಲಿ ಮಳೆಬಂದಾಗ ಮೂಡುವ ಏಳು ಬಣ್ಣಗಳ ಕಾಮನಬಿಲ್ಲನ್ನು ಮಳೆಬಿಲ್ಲು ಅಂತಲೂ ಕರೆಯುತ್ತಾರೆ. ಈ ಮಳೆಬಿಲ್ಲನ್ನು ಮನುಷ್ಯನ ಜೀವನದ ಕಲರ್‍ಫುಲ್ ಲೈಫ್‍ಗೆ ಹೋಲಿಸಿ ನಾಗರಾಜ್ ಹಿರಿಯೂರು ಅವರು ಕಥೆಯೊಂದನ್ನು ರೆಡಿ ಮಾಡಿಕೊಂಡು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಚಿತ್ರದುರ್ಗದ ಮುರುಘಾಮಠದಲ್ಲಿ ನೆರವೇರಿದೆ. ಈ ಚಿತ್ರದಲ್ಲಿ ಶರತ್ ನಾಯಕನಾಗಿ ಕಾಣಿಸಿಕೊಂಡಿದ್ದು, ಸಂಜನಾ ಹಾಗೂ ನಯನ ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಒಂಭತ್ತು ಹಾಡುಗಳಿದ್ದು, ಗಣೇಶ್ ನಾರಾಯಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕರ ಸಹೋದರ ನಿಂಗಪ್ಪ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಿಸಿದ್ದಾರೆ.

ನಿರ್ದೇಶಕ ನಾಗರಾಜ್ ಮಾತನಾಡಿ ಹೈಸ್ಕೂಲ್‍ನಲ್ಲಿ ನಡೆದಂಥ ಒಂದು ಘಟನೆ ಇಟ್ಟುಕೊಂಡು ಮಾಡಿರುವ ಕಥೆಯಿದು. ಈ ಕಥೆಗೆ ಮಳೆಬಿಲ್ಲು ಎನ್ನುವ ಶೀರ್ಷಿಕೆಯೇ ಸೂಕ್ತ ಎನಿಸಿತು. ಚಿತ್ರಕ್ಕೆ ಈ ಟೈಟಲ್ ಇಟ್ಟಮೇಲೆ ಸಾಕಷ್ಟು ಬದಲಾವಣೆ ಆಯಿತು. ಈ ಚಿತ್ರದಲ್ಲಿ ಕಥೆಯೇ ಹೀರೋ.ನಮ್ಮ ಜೀವನದಲ್ಲಿ ಹೆಣ್ಣು ಎನ್ನುವುದು ಇಲ್ಲ ಎಂದರೆ ಅದು ಶೂನ್ಯ ಎನಿಸುತ್ತದೆ. 80ರಲ್ಲಿ ಬಂದಿದ್ದ ಪ್ರೇಮಲೋಕದಂಥ ಅದ್ಭುತ ಟ್ಯೂನ್‍ಗಳನ್ನು ಈ ಚಿತ್ರಕ್ಕಾಗಿ ಮಾಡಿದ್ದೇವೆ. ಹುಡುಗರ ಜೀವನ ಬಿಳಿಹಾಳೆ ಇದ್ದ ಹಾಗೆ. ಅವರ ಲೈಫ್‍ನಲ್ಲಿ ಹುಡುಗಿಯೊಬ್ಬಳು ಬಂದಾಗ ಏನೇನಾಗುತ್ತದೆ ಎಂದು ಹೇಳಿದ್ದೇವೆ, ಜುಲೈ ಕೊನೆವಾರ ಚಿತ್ರವನ್ನು ರಿಲೀಸ್ ಮಡುವ ಯೋಜನೆ ಇದೆ ಎಂದು ಹೇಳಿದರು. ಸಂಗೀತ ನಿರ್ದೇಶಕ ಗಣೇಶ್ ನಾರಾಯಣ್ ಮಾತನಾಡಿ ಇದೊಂದು ಮ್ಯೂಜಿಕಲ್ ಲವ್‍ಸ್ಟೋರಿ. ಈ ಚಿತ್ರದಲ್ಲಿರುವ ಎಲ್ಲಾ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ಹೇಳಿದರು.ನಾಯಕ ಶರತ್ ಮಾತನಾಡಿ ಹಿಂದೆ ಕ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಚಿತ್ರದಲ್ಲಿ ಹೈಸ್ಕೂಲ್ ಹುಡುಗ ಹಾಗೂ ಕಾಲೇಜ್ ವಿದ್ಯಾರ್ಥಿಯಾಗಿ ಎರಡು ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ನಾಯಕಿ ನಯನ ಮಾತನಾಡಿ ಇದು ನನ್ನ 3ನೇ ಚಿತ್ರ. ಈಗಿನ ಯೂಥ್‍ಗೆ ಇಷ್ಟವಾಗುವ ಕಥೆ ಚಿತ್ರದಲ್ಲಿದ್ದು, ಲವ್‍ಸ್ಟೋರಿ ಜೊತೆಗೆ ಒಂದು ಟ್ವಿಸ್ಟ್ ಈ ಚಿತ್ರದಲ್ಲಿದೆ. ಅದು ಈ ಚಿತ್ರಕ್ಕೆ ಹೊಸ ರೂಪ ನೀಡುತ್ತದೆ ಎಂದು ಹೇಳಿದರು.

This Article Has 1 Comment

Leave a Reply

Your email address will not be published. Required fields are marked *

Translate »
error: Content is protected !!