ಕನ್ನಡದಲ್ಲಿ 36 ವರ್ಷಗಳ ಹಿಂದೆ ಪುಷ್ಪಕ ವಿಮಾನ ಎಂಬ ಮಾತುಗಳೇ ಇಲ್ಲದ ಮೂಕಿ ಚಿತ್ರ ತೆರೆಗೆ ಬಂದಿತ್ತು. ಆನಂತರ ಈಗ ಸ್ಯಾಂಡಲ್ ವುಡ್ನಲ್ಲಿ ಮತ್ತೊಂದು ಮೂಕಿ ಚಿತ್ರ ನಿರ್ಮಾಣವಾಗುತ್ತಿದೆ. ಆ ಚಿತ್ರವೇ ಮಹಾಗುರು. ಇದೊಂದು ಫ್ಯಾಂಟಸಿ ಕಥಾಹಂದರ ಇರುವ ಚಲನಚಿತ್ರವಾಗಿದ್ದು, ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಮಂಗಳವಾರ ನೆರವೇರಿತು. ಮೈಸೂರು ರಮಾನಂದ್, ಮಹಿಮಾಗುಪ್ತಾ, ಬ್ಯಾಂಕ್ ಜನಾರ್ಧನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕಸ್ತೂರಿ ಜಗನ್ನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಎಸಿ ಮಹೇಂದ್ರನ್ ಕ್ಯಾಮೆರಾ ವರ್ಕ್ ನಿಭಾಯಿಸಲಿದ್ದಾರೆ. ಕಾಡಿನಮಧ್ಯೆ ಇರುವ ಗುಪ್ತನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿ ಹಾಗೂ ಅದನ್ನು ಕಾಯುತ್ತಿರುವ ಯಕ್ಷಕನ್ಯೆಯ ನಡುವೆ ನಡೆಯುವ ಕಥಾಹಂದರ ಈ ಚಿತ್ರದಲ್ಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯನಟ ಮೈಸೂರು ರಮಾನಂದ್ ನಾನು ಈವರೆಗೆ 350ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ ಬಂದಿದ್ದೇನೆ. ಈ ಹಿಂದೆ ಸ್ಟಂಟ್ ಮಾಸ್ಟರ್ ಎಂಬ ಚಿತ್ರದಲ್ಲಿ ದ್ವಿಪಾತ್ರ ನಿರ್ವಹಿಸಿದ್ದೆ. ಅದಾದ ಬಳಿಕೆ ಮತ್ತೆ ಈ ಚಿತ್ರದಲ್ಲಿ ಎರಡು ಪಾತ್ರಗಳನ್ನು ಮಾಡುತ್ತಿದ್ದೇನೆ. ಒಬ್ಬ ಕುಳ್ಳನಾದರೆ, ಮತ್ತೊಬ್ಬ ನಾರ್ಮಲ್ ಮನುಷ್ಯ. ಕ್ಯಾರೆಕ್ಟರ್ ನಿರ್ವಹಿಸಲು ನಾನೂ ಸ್ವಲ್ಪ ಎಫರ್ಟ್ ಹಾಕಬೇಕಾಗಿದೆ. ನಿಧಿಯನ್ನು ಹುಡುಕಿಕೊಂಡು ಹೋಗುವ ಮಂತ್ರವಾದಿಯಾಗಿ ನಾನು ಕಾಣಿಸಿಕೊಂಡಿದ್ದೇನೆ. ಆವನಿಗೆ ನಿಧಿ ಸಿಗುತ್ತೋ ಇಲ್ವೋ ಅನ್ನೇದೇ ಕಥೆ. ಮಾತುಗಳೇ ಇಲ್ಲದೆ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರ. ಎರಡೂ ಪಾತ್ರಗಳು ತುಂಬಾ ಚೆನ್ನಾಗಿವೆ. ಇದರಲ್ಲಿ ಉತ್ತಮ ಚಿತ್ರಕಥೆ ಹಾಗೂ ದೃಶ್ಯಸಂಯೋಜನೆಯಿದೆ ಎಂದು ಹೇಳಿದರು.
ನಿರ್ದೇಶಕ ಕಸ್ತೂರಿ ಜಗನ್ನಾಥ್ ಮಾತನಾಡುತ್ತ ಒಂದು ವಿಶೇಷ ಪ್ರಯೋಗ ಅಂತ ಈ ಸಿನಿಮಾ ಪ್ಲಾನ್ ಮಾಡಿದೆವು. ತುಂಬಾ ವರ್ಷಗಳ ನಂತರ ಬರುತ್ತಿರುವ ಮೂಕಿ ಚಿತ್ರ. ಸೌಂಡ್ ಎಫೆಕ್ಟ್ ನಲ್ಲೇ ಕಥೆ ಹೇಳುತ್ತೇವೆ. ಈ ಚಿತ್ರವನ್ನು ಕೇರಳಮೂಲದ ಎಡಕ್ಕಾವಿಲ್ ಫಿರೋಸ್, ಜಸ್ಸಿನಾ, ಅಶೋಕ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕರು ನನಗೆ ಹಳೇ ಪರಿಚಯ. ಸಿಜಿ ವರ್ಕ್ ನಾನೇ ಮಾಡುತ್ತಿದ್ದು 6 ತಿಂಗಳ ಕಾಲ ಕೆಲಸ ಮಾಡಿದ್ದೇನೆ. ನನ್ನ ನಿರ್ದೇಶನದ ಮೂರನೇ ಚಿತ್ರವಿದು. ಬೆಂಗಳೂರು ಮೂವೀಸ್ ಸ್ಟುಡಿಯೋದಲ್ಲಿ 8 ದಿನ ಸೆಟ್ ಹಾಕಿ ಅಲ್ಲದೆ ಸಕಲೇಶಪುರ ಕಾಡಿನಲ್ಲಿ ಹೆಚ್ಚಿನ ಭಾಗವನ್ನು ಶೂಟ್‌ಮಾಡುತ್ತಿದ್ದೇವೆ. ಎಂದರು.
ಮುಂಬೈ ಮೂಲದ ನಾಯಕಿ ಮಹಿಮಾ ಗುಪ್ತ ಮಾತನಾಡುತ್ತ ನಾನು ಮೂಲತಃ ಮಾಡೆಲ್, ಕೆಲ ಹಿಂದಿ, ಪಂಜಾಬಿ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಇದು ಮೊದಲ ಕನ್ನಡ ಚಿತ್ರವಾಗಿದ್ದು, ನಿಧಿ ಕಾಯುವ ಏಂಜಲ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು. ಹಿರಿಯ ಛಾಯಾಗ್ರಾಹಕ ಎಸಿ ಮಹೇಂದ್ರನ್ ಮಾತನಾಡಿ ನಾನು ಈವರೆಗೆ 55 ಸಿನಿಮಾಗಳಿಗೆ ಕ್ಯಾಮೆರಾ ವರ್ಕ್ ಮಾಡಿದ್ದೇನೆ. ಈಚಿತ್ರದ ಸಬ್ಜೆಕ್ಟ್ ಚೆನ್ನಾಗಿದೆ. ಚಿತ್ರಕ್ಕೆ 75 ಭಾಗ ಕಾಡಿನಲ್ಲೇ ಶೂಟ್ ಮಾಡಬೇಕಾಗಿದ್ದು, 25 ಪರ್ಸೆಂಟ್ ಮನೆಯೊಂದರಲ್ಲಿ ಚಿತ್ರೀಕರಿಸಲಿದ್ದೇವೆ ಎಂದರು.
Be the first to comment