ಚಿತ್ರ ವಿಮರ್ಶೆ : ಹಾಡುಗಳಲ್ಲೇ ಅರಳಿದ ಪ್ರೀತಿ

ಚಿತ್ರ : ಮದುವೇ ಮಾಡ್ರೀ ಸರಿಹೋಗ್ತಾನೆ

ನಿರ್ದೇಶಕ :ಗೋಪಿ ಕೆರೂರ್

ನಿರ್ಮಾಪಕರು :ಶಿವರಾಜ್ ಲಕ್ಷ್ಮರಾವ್ ದೇಸಾಯಿ

ಸಂಗೀತ : ಅವಿನಾಶ್ ಬಾಸುತ್ಕರ್

ಕಲಾವಿದರು : ನಾಯಕ :ಶಿವಚಂದ್ರಕುಮಾರ್ ,ನಾಯಕಿ : ಆರಾಧ್ಯ ,ಚಿತ್ಕಲಾ ಬಿರಾದಾರ್, ಅರುಣಾ ಬಾಲರಾಜ್, ಕೃಷ್ಣಮೂರ್ತಿ ಕವತ್ತಾರ, ಚಕ್ತವರ್ತಿ ದಾವಣಗೆರೆ, ಸದಾನಂದ ಕಾಳಿ, ರಮೇಶ್ ಭಟ್

==================================

ಬಿಸಿನಿಮಾಸ್ ವಿಮರ್ಶೆ :👇

ಎಸ್.ಎಲ್.ಡಿ ಪ್ರೊಡಕ್ಷನ್ ನ ಅಡಿಯಲ್ಲಿ ಶಿವರಾಜ್ ಲಕ್ಷ್ಮಣರಾವ್ ದೇಸಾಯಿ ಅವರ ನಿರ್ಮಾಣದ,ಗೋಪಿ ಕೆರೂರ್ ಈ ಚಿತ್ರವನ್ನು ನಿರ್ದೇಶನದ ಮದುವೇ ಮಾಡ್ರೀ ಸರಿ ಹೋಗ್ತಾನೆ ಚಿತ್ರ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅದರ ಸರಳ ವಿಮರ್ಶೆ ನೀವು ಓದಿ….

ಇಡೀ ಚಿತ್ರ ಉತ್ತರ ಕರ್ನಾಟಕದ ಭಾಷೆಯ ಸೊಗಡು ಘಮಘಮಿಸುತ್ತದೆ. ಪರದೆಯ ತುಂಬೆಲ್ಲ ಹಳ್ಳಿಯ ಸುಂದರ ಚಿತ್ರಣವನ್ನು ಸುರೇಶ್ ಬಾಬು ಪಸರಿಸುತ್ತಾರೆ. ಜೊತೆಗೆ ಅನಲಾಗ್ ಪದ್ಧತಿಯಿಂದ ನೈಜ ಸಂಗೀತ ಸಲಕರಣೆಗಳನ್ನು ಬಳಸಿ ಸೃಷ್ಟಿಸಿರುವ ಅವಿನಾಶ್ ಬಾಸುತ್ಕರ್ ಅವರ ಸಂಗೀತ ಮಾಂತ್ರಿಕತೆಯನ್ನು ಸೃಷ್ಟಿಸುತ್ತದೆ. ಬಾಲಿವುಡ್ ಖ್ಯಾತಿಯ ಸುಖವಿಂದರ್ ಸಿಂಗ್, ಶಾನ್ ಅಲ್ಲದೇ ನಮ್ಮ ಕರ್ನಾಟಕದ ಗಾಯಕರಾದ, ಅನನ್ಯ ಭಟ್, ಮಂಜುಳಾ ಗುರುರಾಜ್, ರಾಮಚಂದ್ರ ಹಡಪದ್, ಅಂಕಿತಾ ಕುಂಡು, ಸಂಜಿತ್ ಹೆಗ್ಡೆ ಅವರ ಗಾಯನ ಕಿವಿಗೆ ತಂಪನೆರೆಯುತ್ತದೆ. ಕೆ.ಕಲ್ಯಾಣ್, ಕವಿರತ್ನ ನಾಗೇಂದ್ರಪ್ರಸಾದ್, ಮತ್ತು ಗೋಪಿ ಕೆರೂರ್ ಅವರು ರಚಿಸಿರುವ ಸುಮಧುರ 11 ಹಾಡುಗಳನ್ನು ಈ ಚಿತ್ರದಲ್ಲಿ ನೀವು ಆನಂದಿಸಬಹುದು. ನಾಯಕನಾಗಿ ಹೊಸ ಪ್ರತಿಭೆ ಶಿವಚಂದ್ರಕುಮಾರ್ ಮತ್ತು ನಾಯಕಿಯಾಗಿ ಆರಾಧ್ಯ ಭರವಸೆ ಮೂಡಿಸುತ್ತಾರೆ. ಅನುಭವಿ ನಟನಟಿಯರಾದ ಚಿತ್ಕಲಾ ಬಿರಾದಾರ್, ಅರುಣಾ ಬಾಲರಾಜ್, ಕೃಷ್ಣಮೂರ್ತಿ ಕವತ್ತಾರ, ಚಕ್ತವರ್ತಿ ದಾವಣಗೆರೆ, ಸದಾನಂದ ಕಾಳಿ, ರಮೇಶ್ ಭಟ್ ರವರು ಕಥೆಯಲ್ಲೇ ಒಂದಾಗಿ ಹೋಗುತ್ತಾರೆ. ಬೇಬಿ ಶ್ರೀಲಕ್ಷ್ಮೀ ಎಂಬ ಚಿನಕುರಳಿಯಂತೂ ತೆರೆಯ ಮೇಲಿದ್ದಷ್ಟೂ ಹೊತ್ತು ನಿಮ್ಮನ್ನು ಅವಳ ಅಭಿನಯ ಚಾತುರ್ಯದಿಂದ ಮನಸೆಳೆಯುತ್ತಾಳೆ. ಹಾಡುಗಳ ಮುಖಾಂತರ ಕಥೆಯನ್ನು ಹೇಳುವ ತಂತ್ರವನ್ನು ನಿರ್ದೇಶಕರು ಇಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಇಲ್ಲಿ ಸಂಗೀತ ನಿರ್ದೇಶಕ ಮತ್ತು ಚಿತ್ರ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ. ಈ ಎಲ್ಲ ಸಾಹಸಗಳಿಗೆ ನಿರ್ಮಾಪಕರು ಬೆನ್ನೆಲುಬಾಗಿ ನಿಂತಿರುವದು ವಿಶೇಷ.

ಒಬ್ಬ ಬಡ ಮತ್ತು ನಿರ್ಲ್ಯಕ್ಷಿತ ಕುಟುಂಬದ ನಮ್ಮ ನಾಯಕನಿಗೆ ತಂದೆಯಿಲ್ಲ. ತಾಯಿಯ ಪ್ರೀತಿ ಮಾತ್ರ ಅವನ ಆಸ್ತಿ. ಊರವರಿಗೆಲ್ಲ ಇವನು ತೊಂದರೆ ಕೊಡೋ ಉಂಡಾಡಿ ಗುಂಡ. ಮನೆಗೆ ಮಾರಿ ಊರಿಗೆ ಉಪಕಾರಿ ಅನ್ನೋ ಹಾಗೆ ಕೂಡ ಅಲ್ಲ. ಒಬ್ಬ ಬೇಜವಾಬ್ದಾರಿ ಹುಡುಗ ಊರಲ್ಲಿ ಎಲ್ಲರಿಗೂ ಕೀಟಲೆ ಮಾಡುತ್ತಾ ಗೆಳೆಯರೊಂದಿಗೆ ತಿರುಗುತ್ತಿರುತ್ತಾನೆ. ಊರ ಜನಗಳಿಗೆ ಕೀಟಲೆ ಕೊಡುತ್ತಾ ಎಲ್ಲರ ಕಣ್ಣು ಕೆಂಪಗಾಗಿಸುತ್ತಾನೆ. ಆಗ ಎಲ್ಲರೂ ಅವನ ತಾಯಿಗೆ ಹೇಳೋ ಮಾತು, ಮದುವೆ ಮಾಡ್ರಿ ಸರಿ ಹೋಗ್ತಾನೆ ಎಂದು. ಆದರೆ ಈ ಬೇಜವಾಬ್ದಾರಿ ಮೂಟೆಗೆ ಹೆಣ್ಣು ಕೊಡೋರ್ಯಾರು? ಹೆಣ್ಣು ಹುಡುಕೋ ತಾಕಲಾಟ ಶುರು.ಇಷ್ಟಕ್ಕೂ ಮದುವೆಯಾದರೆ ಜವಾಬ್ದಾರಿ ಬಂದುಬಿಡುತ್ತದೆಯಾ? ಅವನಿಗೂ ಜೀವನದಲ್ಲಿ ಮುಂದೆ ಬರುವ ಕನಸು ಟಿಸಿಲೊಡೆಯುತ್ತದಾ? ಹೆಣ್ಣೊಂದು ಗಂಡಿನ ಸಾಧನೆಗೆ ನೆಪವಾಗಲೇಬೇಕಾ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿನಿಮಾ ಕೊಡುತ್ತ ಹೋಗುತ್ತದೆ.

ಕನ್ನಡ ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಭಾಷೆ, ಕಲಾತ್ಮಕ ಚಿತ್ರಗಳಿಗೆ ಮತ್ತು ಹಾಸ್ಯ ಸನ್ನಿವೇಶಗಳಿಗೆ ಬಳಕೆಯಾಗಿದ್ದು ಬಿಟ್ಟರೆ, ಕಮರ್ಶಿಯಲ್ ಆಗಿ ಹೆಸರು ಮಾಡಿರಲಿಲ್ಲ. ಅಲ್ಲೊಂದು ಇಲ್ಲೊಂದು ಚಿತ್ರ ಬಿಡುಗಡೆಯಾದರೂ ಚಿತ್ರದ ಗುಣಮಟ್ಟ, ಬಜೆಟ್ಟಿನ ಕೊರತೆ, ಜನರಿಗೆ ಚಿತ್ರ ಮುಟ್ಟಿಸುವ ಪ್ರಚಾರತೆ ಎಲ್ಲವೂ ಈ ಚಿತ್ರ ಮಾಡಿದೆ.

ಇಂಥ ಸಾಂಸಾರಿಕ ಚಿತ್ರವನ್ನು ಯಾವುದೇ ವಿಭಾಗದಲ್ಲೂ ಗುಣಮಟ್ಟದ ಕೊರತೆಯಾಗದಂತೆ ಚಿತ್ರತಂಡ ಪ್ರೀತಿಯಿಂದ ನೋಡಿಕೊಂಡಿದೆ. ಚಿತ್ರೀಕರಣದ 90 ಪ್ರತಿಶತ ಭಾಗ ಉತ್ತರ ಕರ್ನಾಟಕದ ಹಳ್ಳಿಗಳಲ್ಲೇ ನಡೆದಿದೆ ಎಂಬುದು ಅವರ ಶ್ರಮಕ್ಕೆ ಸಾಕ್ಷಿ. ಮನೆ ಮಂದಿಯೆಲ್ಲ ಕೂತು ಚಿತ್ರ ವೀಕ್ಷಿಸುವ ಪರಿಪಾಠ ಕಮ್ಮಿಯಾಗುತ್ತಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಚಿತ್ರ ನಮಗೆ ಆವಶ್ಯವೆನಿಸೀತು.

@ಬಿಸಿನಿಮಾಸ್ ಡಾಟ್ ಇನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!