‘ಮದಕರಿ’ ಕ್ಲೈಮಾಕ್ಸ್ ಏನು ಗೊತ್ತಾ?

ಕನ್ನಡದಲ್ಲಿ ಐತಿಹಾಸಿಕ ಚಿತ್ರಗಳನ ಇರಾ ಮತ್ತೆ ಶುರುವಾದಂತಿದೆ. ದರ್ಶನ್ ಅಭಿನಯದ ‘ಕುರುಕ್ಷೇತ್ರ’ ರಿಲೀಸ್‍ಗೂ ಮುನ್ನವೇ ನಿರ್ಮಾಪಕ ದರ್ಶನ್‍ಗೆಂದೇ ಅಭಿನಯದ ‘ಗಂಡುಗಲಿ ಮದಕರಿ ನಾಯಕ’ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಹೌದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ,  ಸಿನಿಮಾ ಶೂಟಿಂಗ್ ಆರಂಭಿಸಲು ನಿರ್ಧರಿಸಲಾಗಿದೆ,

ಐತಿಹಾಸಿಕ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ.ಬಹಳ ದಿನಗಳ ನಂತರ ಐತಿಹಾಸಿಕ ಸಿನಿಮಾವೊಂದನ್ನು ನಿರ್ದೇಶಿಸುತ್ತಿರುವ ರಾಜೇಂದ್ರಸಿಂಗ್ ಚಿತ್ರದ ಬಗ್ಗೆ ಹೇಳಿದ್ದಿಷ್ಟು..”ಐತಿಹಾಸಿಕ ಸಿನಿಮಾಗಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸದ್ಯ ಗ್ರಾಫಿಕ್ಸ್ ವಿನ್ಯಾಸ ಮಾಡಲಾಗುತ್ತಿದೆ.ಐತಿಹಾಸಿಕ ಸಿನಿಮಾಗಾಗಿ ವಸ್ತ್ರ ವಿನ್ಯಾಸಕ್ಕಾಗಿ ಹೆಚ್ಚಿನ ಸಮಯ ಹಿಡಿಯುತ್ತಿದೆ. ಎಲ್ಲಾ ವಿಭಾಗಗಳಲ್ಲೂ ಕೆಲಸ ನಡೆಯುತ್ತಿದೆ’’.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಈ ಹಿಂದೆ ಸಂದರ್ಶನವೊಂದರಲ್ಲಿ ಗಂಡುಗಲಿ ಮದಕರಿ ನಾಯಕ ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ಲ್ಯಾಂಡ್ ಮಾರ್ಕ್ ಆಗಲಿದೆ ಎಂದು ಹೇಳಿದ್ದರು. ಇಲ್ಲಿ ರಾಕ್‍ಲೈನ್ ಮಾತಾನಾಡಿದ್ದು ನೋಡಿದರೆ ಮದಕರಿ ಸಾಕಷ್ಟು ಭಾಷೆಗಳಲ್ಲಿ ಒಂದೇ ಬಾರಿಗೆ ರಿಲೀಸ್ ಆಗುವ ಸಾಧ್ಯತೆಯಿದೆ. ಆದರೆ, ಪರಫಾಮೆನ್ಸ್ ಸಪ್ಪೆ ಅನ್ನಿಸಿದರೆ ಚಿತ್ರ ಎಷ್ಟೇ ರಿಚ್ ಆಗಿ ಮೂಡಿ ಬಂದರೂ ವೇಸ್ಟ್ ಅಲ್ಲವೇ.ಸಿನಿಮಾಗೆ ಹಂಸಲೇಖಾ ಸಂಗೀತ ನೀಡುತ್ತಿದ್ದಾರೆ. ಐತಿಹಾಸಿಕ ಸಿನಿಮಾವನ್ನು ಚಿತ್ರದುರ್ಗ, ಮುಂಬಯಿ, ಹೈದರಾಬಾದ್ ಹಾಗೂ ರಾಜಸ್ತಾನಗಳಲ್ಲಿ ಶೂಟಿಂಗ್ ನಡೆಯಲಿದೆ.

ಮದಕರಿ ನಾಯಕ ಯಾರು? ಇತಿಹಾಸ ಏನು ಹೇಳತ್ತದೆ? ಇಲ್ಲಿದೆ ಡಿಟೈಲ್ಸ್
“ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು. ಮದಕರಿ ನಾಯಕನೆಂದರೂ ಅಷ್ಟೆ ಇತಿಹಾಸದಲ್ಲಿ ಇದ್ದು ಹೋದ ಒಬ್ಬ ಅರಸನಲ್ಲ, ತಮ್ಮ ಜೀವಂತ ಆಪ್ತನೆಂಟ. ಹಾಗೆಯೇ ಚಿತ್ರದುರ್ಗ – ಮದಕರಿ ನಾಯಕ ಎನ್ನುವುದು ಬೇರೆ ಬೇರೆಯಲ್ಲ, ಒಂದೇ ಎಂಬ ಅವಿನಾಭಾವ; ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ” – ಇದು ತರಾಸು ಅವರು ತಮ್ಮ “ದುರ್ಗಾಸ್ತಮಾನ” ಮಹಾ ಕಾದಂಬರಿಯ ಪ್ರಸ್ತಾವನೆಯಲ್ಲಿ ಹೇಳುವ ಮಾತುಗಳು.

ಕ್ರಿಸ್ತಶಕ 1754ನೇ ಇಸವಿ ಆಷಾಢ ಶುದ್ಧ ದ್ವಾದಶಿಯಂದು ಕಾಮಗೇತಿ ವಂಶದ ಹೊಸ ಮುಖ್ಯಸ್ಥನಾಗಿ ಚಿಕ್ಕ ಮದಕರಿ ನಾಯಕರು ಪಟ್ಟಕ್ಕೇರಿದರು. ತನ್ನ ಎಳವೆಯಲ್ಲೇ ತಲೆ ಮೇಲೆ ಕೂತ ಈ ರಾಜ್ಯಾಧಿಕಾರವೆಂಬ ಮಣಭಾರದ ತೂಕವನ್ನು ರಾಜಮಾತೆಯ ನಿರ್ದೇಶನ, ಸಹಕಾರದಿಂದ ಯಶಸ್ವಿಯಾಗಿ ನಿಭಾಯಿಸುವುದನ್ನೂ ಕಲಿತರು. ಕ್ಷಾತ್ರವೇ ಅವರ ಉಸಿರಾಯಿತು. ದುರ್ಗದ ಒಂದೊಂದು ಕಲ್ಲನ್ನೂ ಮೀಟಿ ಮಾತಾಡಿಸಬಲ್ಲಷ್ಟು ಅವರು ತನ್ನ ಪಾಳೇಪಟ್ಟನ್ನು ಅಂತರ್ಗತವಾಗಿಸಿಕೊಂಡರು. ಊರನ್ನೂ, ಊರ ಜನರನ್ನೂ ಪ್ರೀತಿಸಿದರು. ತನ್ನ ಪೂರ್ವಜರ ಕಾಲದಿಂದಲೂ ಕಟ್ಟುವಿಕೆಯ ವಿವಿಧ ಹಂತಗಳನ್ನು ಹಾದು ಬಂದಿದ್ದ ಏಳು ಸುತ್ತಿನ ದುರ್ಗದ ಕೋಟೆಯನ್ನು ಮತ್ತಷ್ಟು ಬಲಪಡಿಸಿದರು.

ದುರ್ಗ ಸದ್ಯಕ್ಕೆ ಹೆಂಗಸಿನ ಕೈವಶವಾಗಿದೆ ಮತ್ತು ಅಲ್ಲಿ ಮೀಸೆ ಚಿಗುರದ ಎಳೆ ಕುಮಾರನೊಬ್ಬ ರಾಜ್ಯಭಾರ ಹೊತ್ತಿದ್ದಾನೆಂಬ ವಿಷಯ ತಿಳಿದ ಅಕ್ಕಪಕ್ಕದ ಶತ್ರುಗಳು ಚುರುಕಾದರು. ಹರಪನಹಳ್ಳಿ, ಸವಣೂರು, ತರೀಕೆರೆ, ಕನಕಗಿರಿ, ಜರಿಮಲೆ ಮುಂತಾದ ಪಾಳೇಪಟ್ಟಿನ ನಾಯಕರು ಚಿತ್ರದುರ್ಗದ ಮೇಲೆ ಉರಿ ಕಾರತೊಡಗಿದರು. ನವಾಬ ಹೈದರಾಲಿಯ ವಶಕ್ಕೆ ಒಳಪಡದ ಏಕೈಕ ಪಾಳೇಪಟ್ಟು ದುರ್ಗ ಎಂಬುದೇ ಆ ದ್ವೇಷಕ್ಕೆ ಕಾರಣವಾಗಿತ್ತು. ರಾಯದುರ್ಗದ ಕೃಷ್ಣಪ್ಪ ನಾಯಕನೆಂಬ ಪಾಳೇಗಾರ ಸವಣೂರಿನ ನವಾಬ ಹಕೀಂ ಖಾನ್, ಹರಪನಹಳ್ಳಿ ಮತ್ತು ಬಿದನೂರು ಸಂಸ್ಥಾನಗಳ ದೊರೆಗಳ ಕಿವಿ ಕಚ್ಚಿ ಒಟ್ಟಾಗಿ ದುರ್ಗದ ಮೇಲೆ ಆಕ್ರಮಣ ಮಾಡುವಂತೆ ಹುರಿದುಂಬಿಸಿದ. ಆದರೆ ಈ ದಾಳಿಯ ಸುದ್ದಿಯನ್ನು ಮುಂದಾಗಿ ಪಡೆದ ಮದಕರಿ ನಾಯಕರು ತನ್ನ ಸೈನ್ಯವನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿ, ಸಮಯ ಸಂದರ್ಭ ನೋಡಿಕೊಂಡು ಶತ್ರುಗಳ ಮೇಲೆರಗಿ ಅವರನ್ನು ದಿಕ್ಕುಗೆಡಿಸಿ ಓಡಿಸಿದರು.

ಈ ಮೊದಲ ದಿಗ್ವಿಜಯದಿಂದಾಗಿ ಮದಕರಿ ನಾಯಕರಿಗೆ ತನ್ನ ಮೇಲೂ, ದುರ್ಗದ ಜನತೆಗೆ ಮದಕರಿಯವರ ಮೇಲೂ ವಿಶ್ವಾಸ ಇಮ್ಮಡಿಯಾದವು. ಮದಕರಿ ನಾಯಕರು ಬದುಕಿದ್ದು ಕೇವಲ 37 ವರ್ಷಗಳು ಮಾತ್ರ. ಅದರಲ್ಲಿ 25 ವರ್ಷಗಳ ಕಾಲ ಅವರು ದುರ್ಗದ ದೊರೆಯಾಗಿದ್ದರು. ಹದಿನಾರರ ಹರೆಯದಲ್ಲೇ ತನ್ನ ಮೊದಲ ಯುದ್ಧವನ್ನು ರಣರಂಗದಲ್ಲಿ ನೋಡಿದ ಜೀವ ಅದು. ಹಿರೇ ಮದಕರಿ ನಾಯಕರು 1721ರಿಂದ 1748ರವರೆಗೆ ಇಪ್ಪತ್ತೇಳು ವರ್ಷ ಪಾಳೇಪಟ್ಟು ನೋಡಿಕೊಂಡಿದ್ದರೆ ಸರಿಸುಮಾರು ಅಷ್ಟೇ ಅವಧಿಯನ್ನು ಚಿಕ್ಕ ಮದಕರಿ ನಾಯಕರೂ ಆಳಿ ತೋರಿಸಿದರು ಎನ್ನಬಹುದು. ಹೈದರಾಲಿ ಇವರ ಜೊತೆ ಮುಖ್ಯವಾಗಿ ನಾಲ್ಕು ಬಾರಿ (1762, 1774, 1777 ಮತ್ತು 1779) ಯುದ್ಧ ಮಾಡಿದ. ಮೊದಲ ಮೂರು ಕದನಗಳಲ್ಲಿ ಹೀನಾಯವಾಗಿ ಸೋತು ಗಡ್ಡಕ್ಕೆ ಮಣ್ಣು ಮೆತ್ತಿಕೊಂಡ ರೋಷಾಗ್ನಿ ಅವನೊಳಗೆ ಬೇಯುತ್ತಿದ್ದದ್ದು ಸುಳ್ಳಲ್ಲ. ಆ ಎಲ್ಲ ಕೋಪವನ್ನು ಆತ ತನ್ನ ನಾಲ್ಕನೇ ಸಮರದಲ್ಲಿ ಮದಕರಿಯವರ ಮೇಲೆ ತೋರಿಸಿಕೊಂಡ. ಸೆರೆಯಲ್ಲಿದ್ದಾಗಲೂ ಮದಕರಿಯವರು ಹೈದರಾಲಿಗೆ ತಲೆ ಬಾಗದೆ, “ಸಿಂಹ ಎಂದೆಂದೂ ಸಿಂಹವೇ. ಯಾವ ಕಾರಣಕ್ಕೂ ನಾನು ಇತರರನ್ನು ಪ್ರಭುಗಳೆಂದು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳಿ, ಸೊಂಟದಲ್ಲಿ ಅಡಗಿಸಿಟ್ಟುಕೊಂಡಿದ್ದ ಕಠಾರಿಯನ್ನು ತೆಗೆದು ತನ್ನ ಶಿರಚ್ಛೇದ ಮಾಡಿಕೊಂಡರಂತೆ. ಮದಕರಿ ನಾಯಕರು ರಣರಂಗದಲ್ಲಿ ಮಡಿದರೋ ತನ್ನ ಖಡ್ಗವನ್ನು ಗಾಳಿಯಲ್ಲಿ ಹಾರಿಸಿ ಅದಕ್ಕೆದೆಯೊಡ್ಡಿ ತೀರಿಕೊಂಡರೋ ವಿಷಪ್ರಾಶನದಿಂದ ದೇಹಾಂತ್ಯವಾಯಿತೋ ಯಾವುದೂ ಸ್ಪಷ್ಟವಿಲ್ಲ. ಕೆಲವು ಐತಿಹ್ಯಗಳ ಪ್ರಕಾರ ಹೈದರಾಲಿ ಅವರನ್ನು ಅವರ ಇಪ್ಪತ್ತು ಸಾವಿರ ಬೇಡ ಸಮುದಾಯದ ಸೈನಿಕರ ಜೊತೆ ಸೇರಿಸಿ ಬೆಟ್ಟದಿಂದ ನೂಕಿಸಿ ಬಿಟ್ಟನೆಂಬ ಕತೆಯೂ ಇದೆ.

ಇಲ್ಲಿರಾಜೇಂದ್ರಸಿಂಗ್ ಅವರು ಯಾವುದನ್ನು ಚಿತ್ರದ ಕ್ಲೈಮಾಕ್ಸ್ ಆಗಿ ಮಾಡಿಕೊಳ್ಳುತ್ತಾರೆ ಅನ್ನುವುದೇ ಪ್ರಶ್ನೆ.
ದರ್ಶನ್ ಐತಿಹಾಸಿಕ ಪಾತ್ರವನ್ನೂ ಕಮರ್ಶಿಯಲ್ ಚಿತ್ರಗಳಂತೇ ಟ್ರೀಟ್ ಮಾಡಿದ್ದರಿಂದ ಅವರ ಈ ಹಿಂದಿನ ಐತಿಹಾಸಿಕ ಚಿತ್ರ ನಿರೀಕ್ಷೆಯನ್ನು ಸುಳ್ಳು ಮಾಡಿತ್ತು. ‘ಮದಕರಿ’ಯಲ್ಲೂ ಯಾವುದೇ ವಿಷೇಶ ಸಿದ್ಧತೆ ಇಲ್ಲದೇ ಹೋದರೆ ಇದು ‘ಮತ್ತೊಂದು’ ಚಿತ್ರವಷ್ಟೇ ಆಗುವ ಅಪಾಯವಿದೆ. ಒಬ್ಬ ಐತಿಹಾಸಿಕ ಪಾತ್ರವೊಂದರ ಬಯೋಪಿಕ್ ಮಾಡಲು ಹೊರಟಾಗ ನಟನೊಬ್ಬನಿಗೆ ಎದುರಾಗುವ ಚಾಲೆಂಜ್‍ಗಳು ಒಂದೆರಡಲ್ಲ. ನಮ್ಮ ಚಾಲೆಂಜಿಂಗ್ ಸ್ಟಾರ್ ಎಲ್ಲ ಚಾಲೆಂಜ್‍ಗಳನ್ನು ಎದುರಿಸಿ ಯಾವುದೇ ಪಾತ್ರಕ್ಕೂ ತಾನು ಸೈ ಎಂಬುದನ್ನು ಪ್ರೂವ್ ಮಾಡತ್ತಾರಾ ಕಾದು ನೋಡಬೇಕು.

-ಭೀಮರಾಯ

Be the first to comment

Leave a Reply

Your email address will not be published. Required fields are marked *

Translate »
error: Content is protected !!