ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೇವರಾಗಿ ಕಾಣಿಸಿಕೊಂಡಿರುವ ಲಕ್ಕಿ ಮ್ಯಾನ್ ಚಿತ್ರ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ.
ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಆಗಸ್ಟ್ 23ರಂದು ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಿರ್ದೇಶಕ ನಾಗೇಂದ್ರ ಪ್ರಸಾದ್, ನಾನು ಮಾತೃಭಾಷೆಯಲ್ಲಿ ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರ ಇದಾಗಿದೆ. ಚಿತ್ರದ ಕಥೆಯೇ ಸಿನಿಮಾ ಮಾಡಲು ಕಾರಣ. ಇದು ತಮಿಳಿನ ಓ ಮೈ ಕಡವುಳೆ ಚಿತ್ರದ ರೀಮೇಕ್ ಆಗಿದೆ. ಈ ಚಿತ್ರದಲ್ಲಿ ಸೆಂಟಿಮೆಂಟ್ , ಲವ್, ಸಾಂಗ್, ಮನರಂಜನೆ ಇದೆ. ಈ ಚಿತ್ರಕ್ಕೆ ಭಗವಂತ, ಭಾಗ್ಯವಂತ ಹಾಗೂ ಲಕ್ಕಿ ಮ್ಯಾನ್ ಎಂಬ ಶೀರ್ಷಿಕೆ ಆಯ್ಕೆ ಮಾಡಿದ್ದು, ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಬೇಕು ಎಂಬ ಉದ್ದೇಶದಿಂದ ಅವರನ್ನು ಭೇಟಿ ಮಾಡಿದಾಗ ಅವರು ಕಥೆ ಕೇಳಿ ತುಂಬ ಇಷ್ಟಪಟ್ಟರು. ಲಕ್ಕಿ ಮ್ಯಾನ್ ಟೈಟಲ್ ತುಂಬಾ ಸೂಕ್ತ ಎಂದು ಸಜೆಸ್ಟ್ ಮಾಡಿದ್ದು ಪುನೀತ್ ರಾಜ್ ಕುಮಾರ್ ಎಂದರು.
ಅಪ್ಪು ಅವರ ಜೊತೆ ಕೆಲಸ ಮಾಡಿದ್ದು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅಪ್ಪು ಅವರು ತುಂಬಾ ಅರ್ಥಗರ್ಭಿತವಾದ ಪಾತ್ರವನ್ನು ಮಾಡಿದ್ದು, ಚಿತ್ರದಲ್ಲಿ 45 ನಿಮಿಷಕ್ಕೂ ಹೆಚ್ಚು ಇರಲಿದ್ದಾರೆ. ವರನಟ ಡಾ.ರಾಜ್ಕುಮಾರ್ ಅವರ ಮೇಲೆ ರಚಿಸಲಾಗಿರುವ ಹಾಡೊಂದರಲ್ಲಿ ಪುನೀತ್ ಜೊತೆ ಪ್ರಭುದೇವ ಕೂಡ ಹೆಜ್ಜೆ ಹಾಕಿದ್ದಾರೆ. ಫ್ಯಾಂಟಸಿ ಡ್ರಾಮಾವನ್ನು ಲಕ್ಕಿಮ್ಯಾನ್ ಚಿತ್ರದಲ್ಲಿ ತರುತ್ತಿದ್ದೇವೆ ಎಂದರು.
ಆಡಿಯೋ ರಿಲೀಸ್ ಕಾರ್ಯಕ್ರಮ ಆಗಸ್ಟ್ 23ರಂದು ನಡೆಯಲಿದ್ದು ಕಾರ್ಯಕ್ರಮದಲ್ಲಿ ನಮ್ಮ ಶಿವರಾಜ್ಕುಮಾರ್, ರಾಘಣ್ಣ, ಅಣ್ಣಾವ್ರ ಕುಟುಂಬ, ಸುದೀಪ್, ರವಿಚಂದ್ರನ್, ಪ್ರಭುದೇವ ಮುಂತಾದವರು ಭಾಗವಹಿಸಲಿದ್ದಾರೆ. ಲಕ್ಕಿ ಮ್ಯಾನ್ ಚಿತ್ರವನ್ನ ಎಲ್ಲರೂ ನೋಡಿ ಬೆಂಬಲಿಸಬೇಕು. ಈ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಗೆ ಅರ್ಪಿಸುತ್ತಿದ್ದೇವೆ ಎಂದು ಹೇಳಿದರು.
ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನೀ ಪ್ರಕಾಶ್, ರಂಗಾಯಣ ರಘ, ಸಾಧುಕೋಕಿಲ ಮುಂತಾದವರು ಅಭಿನಯಿಸಿದ್ದಾರೆ. ಧನಂಜಯ ಅವರು ಅಪ್ಪು, ಪ್ರಭುದೇವಾ ಅಭಿನಯದ ಬಾರೋ ರಾಜಾ ಹಾಡೋಣ ಬಾರೋ ಎನ್ನುವ ಹಾಡು ಸೇರಿದಂತೆ 6 ಹಾಡು ರಚಿಸಿದ್ದಾರೆ.
ಜೀವಾಶಂಕರ್ ಛಾಯಾಗ್ರಹಣ ಇದೆ. ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ಪಿ.ಆರ್. ಮೀನಾಕ್ಷಿ ಸುಂದರಮ್ ಹಾಗೂ ಸುಂದರ ಕಾಮರಾಜ್ ನಿರ್ಮಾಣ ಮಾಡಿರುವ ಈ ಚಿತ್ರದ ಹಾಡುಗಳಿಗೆ ವಿ2 ವಿಜಯ್ ಮತ್ತು ವಿಕ್ಕಿ ಸಂಗೀತ ಸಂಯೋಜನೆ ಮಾಡಿದ್ದಾರೆ.
“ಲಕ್ಕಿ ಮ್ಯಾನ್” ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.
Be the first to comment