Love You Abhi Review : ಪಕ್ಕಾ ಫ್ಯಾಮಿಲಿ ವೆಬ್​ ಸೀರೀಸ್ ‘ಲವ್​ ಯೂ ಅಭಿ’

ವೆಬ್​ ಸಿರೀಸ್​: ‘ಲವ್​ ಯೂ ಅಭಿ’

ನಿರ್ಮಾಣ: ಜಿಯೋ ಸಿನಿಮಾಸ್​

ನಿರ್ದೇಶನ: ಕಾಳಿ ವೇಲಾಯುಧಂ

ಪಾತ್ರವರ್ಗ: ವಿಕ್ರಮ್​ ರವಿಚಂದ್ರನ್​, ಅದಿತಿ ಪ್ರಭುದೇವ, ಪಿ. ರವಿಶಂಕರ್​, ವಿನಯಾ ಪ್ರಸಾದ್​, ಕೆಂಪೇಗೌಡ, ಸುಂದರ್​ ರಾಜ್​, ಅಂಬಿಕಾ, ಶ್ರೀನಾಥ್​ ಇತರರು

ರೇಟಿಂಗ್: 3.5/5

‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಬಿಡುಗಡೆ ಆಗಿರುವ ಹೊಸ ವೆಬ್​ ಸಿರೀಸ್​ ‘ಲವ್​ ಯೂ ಅಭಿ’ ಫ್ಯಾಮಿಲಿ ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ತಯಾರಿ ಆಗಿದೆ. ವೆಬ್​ ಸರಣಿಯಲ್ಲಿ ಸೆಕ್ಸ್ ಮತ್ತು ಕ್ರೈಮ್​ ಸಂಬಂಧಿತ ಕಥೆಗಳೇ ರಾರಾಜಿಸುವ ವೇಳೆ ಕೌಟುಂಬಿಕ ವಸ್ತುವಿನ ಈ ವೆಬ್ ಸೀರೀಸ್ ಭಿನ್ನ ಎನಿಸಿದೆ.

ಈ ವೆಬ್ ಸೀರೀಸ್ ನಲ್ಲಿ ಅದಿತಿ ಪ್ರಭುದೇವ ಮತ್ತು ವಿಕ್ರಮ್​ ರವಿಚಂದ್ರನ್ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಪ್ರೇಕ್ಷಕರು ಇದನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

‘ಲವ್​ ಯೂ ಅಭಿ’ ಯಲ್ಲಿ ಯಾವ ಪಾತ್ರವೂ ಅಶ್ಲೀಲವಾಗಿ ವರ್ತಿಸಿಲ್ಲ. ಇಲ್ಲಿ ಸ್ವಲ್ಪ ಬೋಲ್ಡ್​ ಎನಿಸುವ ದೃಶ್ಯಗಳು ಇದ್ದರೂ ಅದನ್ನು ಫ್ಯಾಮಿಲಿ ಪ್ರೇಕ್ಷಕರಿಗೆ ಮುಜುಗರ ಆಗದ ರೀತಿಯಲ್ಲಿ ಕಟ್ಟಿ ಕೊಡಲಾಗಿದೆ.

ವಿಕ್ರಮ್​ ರವಿಚಂದ್ರನ್​ ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಈಗ ವೆಬ್​ ಸರಣಿಗೆ ಎಂಟ್ರಿ ನೀಡಿದ್ದಾರೆ. ‘ಲವ್​ ಯೂ ಅಭಿ’ ವೆಬ್​ ಸಿರೀಸ್​ನಲ್ಲಿ ಶಿವ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ನೆಗೆಟಿವ್​ ಶೇಡ್​ ಕೂಡ ಇದೆ. ಶಿವ ಕೆಟ್ಟವನೋ ಒಳ್ಳೆಯವನೋ ಎನ್ನುವ ಪ್ರಶ್ನೆಗೆ ಪೂರ್ತಿ ಎಪಿಸೋಡ್​ ನೋಡಬೇಕಿದೆ.

ಗಂಡನನ್ನು ಕಳೆದುಕೊಂಡ ಅಭಿ ಹೆಸರಿನ ಯುವತಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಶಿವನ ಜೊತೆ ಅಭಿಯ ಮರು ಮದುವೆ ಆಗುತ್ತದೆ. ಆದರೆ ಅಭಿಯ ಮೊದಲ ಗಂಡ ಸತ್ತಿದ್ದು ಹೇಗೆ ಎಂಬ ಪ್ರಶ್ನೆ ಮೂಲಕ ವೆಬ್ ಸೀರೀಸ್ ನ ಅಸಲಿ ಕಥೆ ಶುರು ಆಗುತ್ತದೆ. ಅದಿತಿ ಪ್ರಭುದೇವ ನಟನೆಯ ಮೂಲಕ ಗಮನ ಸೆಳೆಯುತ್ತಾರೆ.

ಇಲ್ಲಿ ಪೊಲೀಸ್​ ಅಧಿಕಾರಿಯಾಗಿ ಪಿ. ರವಿಶಂಕರ್​ ಕಾಣಿಸಿಕೊಂಡಿದ್ದಾರೆ. ವಿನಯಾ ಪ್ರಸಾದ್​, ಸುಂದರ್​ ರಾಜ್​, ಅಂಬಿಕಾ, ಶ್ರೀನಾಥ್​, ಕೆಂಪೇಗೌಡ, ರಚಿತಾ ಮಹಾಲಕ್ಷ್ಮಿ, ಶ್ರೀನಿವಾಸ ಮೂರ್ತಿ ಮುಂತಾದವರು ನಟಿಸಿದ್ದಾರೆ.

ಇದು ಶ್ರೀಮಂತ ಕುಟುಂಬದ ಕಥೆ. ಈ ಕಾರಣದಿಂದ ಐಷಾರಾಮಿ ಬಂಗಲೆ, ಕಾರು ತೋರಿಸುವುದರತ್ತ ಹೆಚ್ಚು ಗಮನ ಹರಿಸಲಾಗಿದೆ. ಮೇಕಿಂಗ್​ ವಿಚಾರದಲ್ಲಿ ಎಲ್ಲಿಯೂ ರಾಜಿ ಕಂಡು ಬಂದಿಲ್ಲ. ಸ್ಕ್ರಿಪ್ಟ್​ನಲ್ಲಿ ಒಂದಷ್ಟು ಹೊಸತನವನ್ನು ತಂದಿದ್ದರೆ ‘ಲವ್​ ಯೂ ಅಭಿ’ ಇನ್ನಷ್ಟು ಇಷ್ಟ ಆಗುವ ಸಾಧ್ಯತೆ ಇತ್ತು.
______

Be the first to comment

Leave a Reply

Your email address will not be published. Required fields are marked *

Translate »
error: Content is protected !!