‘ಲವ್ ಮಾಕ್ಟೆಲ್ 2’ ಸಿನಿಮಾದ ಯಶಸ್ಸಿನ ಬಳಿಕ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ‘ಲವ್ ಬರ್ಡ್ಸ್’ ಸಿನಿಮಾದಲ್ಲಿ ನಟಿಸಲಿದ್ದಾರೆ.
ಮದುವೆ ಆದ ಬಳಿಕದ ಪ್ರೇಮಕತೆಯನ್ನು ‘ಲವ್ ಬರ್ಡ್ಸ್’ ಒಳಗೊಂಡಿದೆ. ಇತ್ತೀಚೆಗಷ್ಟೆ ಮದುವೆಯಾಗಿರುವ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಈ ಸಿನಿಮಾಕ್ಕೆ ಸೂಕ್ತವಾದ ಆಯ್ಕೆ ಎಂದು ಸಿನಿಮಾಕ್ಕೆ ಆಯ್ದುಕೊಳ್ಳಲಾಗಿದೆ.
‘ಲವ್ ಬರ್ಡ್ಸ್’ ಸಿನಿಮಾವನ್ನು ಪಿಸಿ ಶೇಖರ್ ನಿರ್ದೇಶನ, ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ಅರ್ಜುನ್ ಜನ್ಯ ನೀಡುತ್ತಿದ್ದಾರೆ. ಸಿನಿಮಾದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್, ಅವಿನಾಶ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.
“ಕಳೆದ ಒಂದೆರಡು ದಶಕಗಳಲ್ಲಿ ಮದುವೆಯ ಬಗ್ಗೆ ದೃಷ್ಟಿಕೋನ ಬದಲಾಗಿದೆ. ಈಗ ಮಹಿಳೆ ಸ್ವಾವಲಂಬಿ ಆಗಿದ್ದಾಳೆ. ದುಡಿಯುವ ಮಹಿಳೆ ಸ್ವಾತಂತ್ರ್ಯ ಕೇಳುತ್ತಾಳೆ. ಹೊಸದಾಗಿ ಮದುವೆಯಾದ ಆಧುನಿಕ ಕಾಲಘಟ್ಟದ ದಂಪತಿಯ ಕತೆಯನ್ನು ‘ಲವ್ ಬರ್ಡ್ಸ್’ ಸಿನಿಮಾ ಒಳಗೊಂಡಿದೆ” ಎಂದು ನಿರ್ದೇಶಕ ಪಿಸಿ ಶೇಖರ್ ಹೇಳಿದ್ದಾರೆ.
“ನಾನು ಹಾಗೂ ಕೃಷ್ಣ ಮತ್ತೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಎಂದುಕೊಂಡಿದ್ದೆವು. ಕೃಷ್ಣ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ಒಳ್ಳೆಯ ಸ್ಕ್ರಿಪ್ಟ್ ನಮ್ಮಿಬ್ಬರನ್ನು ಹುಡುಕಿಕೊಂಡು ಬಂತು. ಚಿತ್ರಕತೆ ಕನೆಕ್ಟ್ ಆದ ಕಾರಣ ನಟಿಸಲು ಒಪ್ಪಿಕೊಂಡೆವು” ಎಂದು ಮಿಲನಾ ನಾಗರಾಜ್ ತಿಳಿಸಿದ್ದಾರೆ.
ಮಿಲನಾ ನಾಗರಾಜ್ ನಟಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಕೃಷ್ಣ ನಟನೆಯ ‘ಲಕ್ಕಿ ಮ್ಯಾನ್’, ‘ಶುಗರ್ ಫ್ಯಾಕ್ಟರಿ’ ‘ದಿಲ್‌ಪಸಂದ್’, ‘ಲವ್ ಮಿ ಆರ್ ಹೇಟ್ ಮೀ’ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ.
___
Be the first to comment