ಕಮಲ್ ಹಾಸನ್​

ಕಮಲ್ ಹಾಸನ್​ಗೆ ಕೊಲೆ ಬೆದರಿಕೆ

ಹಿಂದೂ ಧರ್ಮದ ಬಗ್ಗೆ ನಟ ಕಮಲ್ ಹಾಸನ್ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು,  ಅವರಿಗೆ ಕೊಲೆ ಬೆದರಿಕೆ ಎದುರಾಗಿದೆ.

ಕೆಲ ದಿನಗಳ ಹಿಂದೆ ನಟ ಸೂರ್ಯ ಅವರ ಅಗರಂ ಫೌಂಡೇಶನ್​ನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ  ಕಮಲ್ ಹಾಸನ್,  ಶಿಕ್ಷಣದ ಶಕ್ತಿ ಬಗ್ಗೆ ಮಾತನಾಡುತ್ತಾ, ‘ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಕೇವಲ ಶಿಕ್ಷಣದಿಂದ ಮಾತ್ರವೇ ಗೆಲ್ಲಲು ಸಾಧ್ಯ. ಸರಪಳಿಗಳನ್ನು ಒಡೆಯುವ ಆಯುಧ ಶಿಕ್ಷಣವೊಂದೇ. ಸರ್ವಾಧಿಕಾರಿ ಹಾಗೂ ಸನಾತನವನ್ನು ಸೋಲಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ’ ಎಂದಿದ್ದರು.

ಕಮಲ್ ಹಾಸನ್ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು, ತಮಿಳುನಾಡು ಬಿಜೆಪಿ ನಾಯಕರು ಕಮಲ್ ಹಾಸನ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡಿನಲ್ಲಿ ಕಮಲ್ ಹಾಸನ್ ಸಿನಿಮಾಗಳ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದ್ದರು.

ತಮಿಳು  ನಟ ರವಿಚಂದ್ರನ್ ಎಂಬುವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ, ಕಮಲ್ ಹಾಸನ್, ಸನಾತನ ಧರ್ಮದ ಬಗ್ಗೆ ಆಡಿರುವ ಮಾತನ್ನು ಪ್ರಸ್ತಾಪಿಸಿ, ‘ಕಮಲ್ ಹಾಸನ್ ಕತ್ತು ಕತ್ತರಿಸುತ್ತೇವೆ’ ಎಂದಿದ್ದರು. ರವಿಚಂದ್ರನ್ ಹೇಳಿಕೆ ವಿರುದ್ಧ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಯಂ ಪಕ್ಷದ ಕಾರ್ಯಕರ್ತರು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು.

ಕಮಲ್ ಹಾಸನ್​   ಹಲವು ದಶಕಗಳಿಂದ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಬಂದಿದ್ದಾರೆ.  ಕೆಲ ತಿಂಗಳುಗಳ ಹಿಂದಷ್ಟೆ ಕನ್ನಡ ಭಾಷೆ ಬಗ್ಗೆ ಕಮಲ್  ನೀಡಿದ್ದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!