ಡೆವಿಲ್‌ ಬಿಡುಗಡೆ ಮುನ್ನ ದರ್ಶನ್ ಭಾವುಕ ಪತ್ರ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಗೊಳ್ಳುತ್ತಿದ್ದು, ದರ್ಶನ್ ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

ಭಾವನಾತ್ಮಕ ಪತ್ರವನ್ನು ಪತ್ನಿ ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.

“ನನ್ನ ಹೃದಯದಿಂದ ಈ ಸಂದೇಶ ನಿಮಗೆ ಕಳುಹಿಸುತ್ತಿದ್ದೇನೆ. ವಿಜಿ ಇದನ್ನು ನಿಮ್ಮೆಲ್ಲರಿಗೂ ತಲುಪಿಸುತ್ತಾಳೆ. ನಿಮ್ಮ ಪ್ರೀತಿ, ಕಾಳಜಿ, ಮತ್ತು ನನ್ನ ಸಿನಿಮಾಗೆ ಮಾಡುತ್ತಿರುವ ಪ್ರಚಾರ – ಇವೆಲ್ಲವನ್ನೂ ಪ್ರತೀ ಕ್ಷಣವೂ ನನಗೆ ತಿಳಿಸುತ್ತಿದ್ದಾಳೆ. ನಾನು ದೂರ ಇದ್ದರೂ, ನೀವು ನನ್ನ ಬಳಿ ನಿಂತಿರುವಂತೆ ಭಾಸವಾಗುತ್ತಿದೆ” ಎಂದು ದರ್ಶನ್ ಹೇಳಿದ್ದಾರೆ.

”ನೀವು ನನ್ನ ಶಕ್ತಿ, ನನ್ನ ಕುಟುಂಬ. ನಿಮ್ಮ ನಂಬಿಕೆಯೇ ನನ್ನ ಬಲ. ನನ್ನ ಜೀವನದ ಈ ಹಂತದಲ್ಲಿ ನನಗೆ ಇರುವ ದೊಡ್ಡ ಬಲವೇ ನೀವು. ಈ ಸಮಯದಲ್ಲಿ ನಾನು ಬಯಸುವುದೇನು ಎಂದರೆ ನಮ್ಮ ಡೆವಿಲ್ ಕಡೆಗೆ ಗಮನಹರಿಸಿ. ನನಗೆ ತೋರಿಸಿದ ಪ್ರೀತಿಯನ್ನು ಈ ಚಿತ್ರಕ್ಕೂ ತೋರಿಸಿ.  ನೀವು ಪ್ರತಿಯೊಂದು ಪ್ರಶ್ನೆಗೂ, ಅನುಮಾನಕ್ಕೂ, ಧ್ವನಿಗೂ ‘ಪದಗಳಿಂದ ಅಲ್ಲ’, ಆದರೆ ಚಿತ್ರದ ಅದ್ಭುತ ಯಶಸ್ಸಿನಿಂದ ಉತ್ತರಿಸಬೇಕು” ಎಂದು ಮನವಿ ಮಾಡಿದ್ದಾರೆ.

“ನೀವು ಮಾಡ್ತಿರೋ ಪ್ರಚಾರ ಮತ್ತು ಒಗ್ಗಟ್ಟಿನ ಬಗ್ಗೆ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವುಕವಾಗುತ್ತದೆ. ನಿಮ್ಮನ್ನೆಲ್ಲ ಮತ್ತೆ ಭೇಟಿ ಮಾಡುವ ದಿನಕ್ಕಾಗಿ ಕಾಯುತ್ತಿರುವುದೇ ನನಗೆ ಸಂತೋಷವನ್ನು ಕೊಡುತ್ತಿದೆ. ನನ್ನ ಸುತ್ತಲೂ ಗೋಡೆಯಂತೆ ನಿಂತಿದ್ದಕ್ಕಾಗಿ ಧನ್ಯವಾದಗಳು. ನೀವು ನನ್ನನ್ನು ಎಷ್ಟು ನಂಬುತ್ತೀರೋ, ನಾನು ನನ್ನ ಸೆಲೆಬ್ರಿಟಿಗಳನ್ನು ಅಷ್ಟೇ ನಂಬುತ್ತೇನೆ. ಕಾಲವೇ ಸತ್ಯ ಹೇಳುತ್ತದೆ, ಸಮಯವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಅಲ್ಲಿವರೆಗೂ ತಲೆಯನ್ನೆತ್ತಿ, ಹೃದಯ ಬಲವಾಗಿರಲಿ, ಪ್ರೀತಿ ಅಚಲವಾಗಿರಲಿ” ಎಂದು ಸಂದೇಶ ನೀಡಿದ್ದಾರೆ.

ಇತ್ತೀಚೆಗೆ ದರ್ಶನ್ ಜೈಲಿನೊಳಗೆ ಗಲಾಟೆ ಮಾಡಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು “ಯಾರು ಏನು ಹೇಳಿದರೂ ಚಿಂತಿಸಬೇಡಿ. ನೆಗೆಟಿವಿಟಿ ನಿಮ್ಮ ಮನಸ್ಸನ್ನು ಅಲುಗಾಡಿಸದಿರಲಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!