ಲೀಕ್ ಮೈಂಡೆಡ್ ಪೀಪಲ್ ಅನಧಿಕೃತ ಬಿಡುಗಡೆ ಕಂಡ ಕೆಜಿಎಫ್ ಟೀಸರ್

ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಪ್ರೀ ಮೆಚ್ಯೂರ್ ಡೆಲಿವರಿ ಕಂಡಿದೆ. ಆದರೆ ಟೀಸರ್ ಮಾತ್ರ ಮೆಚ್ಯೂರ್ಡ್ ಆಗಿಯೇ ಇದೆ. ನಿರೀಕ್ಷೆಯಂತೆ ಚಿತ್ರದ ಟೀಸರ್ ಪವರ್ ಫುಲ್ ಆಗಿದೆ. ಈ ಹಿಂದೆ ಕೆಜಿಎಫ್ ಮೊದಲ ಭಾಗದಲ್ಲಿ ಪವರ್ ಫುಲ್ ಪೀಪಲ್ ಬಗ್ಗೆ ಪವರ್ ಫುಲ್ ಡೈಲಾಗ್ ಬರೆದಿದ್ದ ಪ್ರಶಾಂತ್ ನೀಲ್ ಈಗ ಚಾಪ್ಟರ್ 2ರಲ್ಲಿ ಅದನ್ನು ರೀ ಡಿಫೈನ್ ಮಾಡಿ ಪವರ್ ಫುಲ್ ಪೀಪಲ್ ಬಗ್ಗೆ ಹೊಸ ಭಾಷ್ಯ ಬರೆದಿದ್ದಾರೆ. ಪವರ್ ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ ಫುಲ್ ಎಂದಿರುವ ಅವರು ಎಂದಿನಂತೆ ಮೇಕಿಂಗ್ ಮತ್ತು ಡೈಲಾಗ್ ಗಳಲ್ಲೇ ಮಿಂಚಿದ್ದಾರೆ. ಅದ್ದೂರಿತನದ ಪರಮಾವಧಿ ಎನ್ನುವಂತಿರುವ ಈ ಚಿತ್ರದ ತಾರಾಗಣ ಕೂಡ ಅದ್ದೂರಿಯಾಗಿಯೇ ಇರೋದು ಇನ್ನೊಂದು ಪ್ಲಸ್ ಪಾಯಿಂಟ್. ಮೊದಲ ಚಾಪ್ಟರ್ ಗಿಂತ ಭಿನ್ನವಾಗಿ ಇಲ್ಲಿ ಯಶ್ ಜೊತೆ ಬಾಲಿವುಡ್ ಸ್ಟಾರ್ ಗಳಾದ ಸಂಜಯ್ ದತ್ ಮತ್ತು ರವೀನಾ ಟಂಡನ್ ಇದ್ದಾರೆ. ಹಾಗಾಗಿ ಇಲ್ಲಿ ಪವರ್ ಫುಲ್ ಮೆನ್ ಅಷ್ಟೇ ಅಲ್ಲ ಪವರ್ ಪುಲ್ ವುಮನ್ ಆಗಿ ರವೀನಾ ಟಂಡನ್ ಕೂಡಾ ಗಮನ ಸೆಳೆಯುತ್ತಾರೆ.

ಆದರೆ ಕೆಜಿಎಫ್ ಚಿತ್ರದ ಎರಡನೇ ಭಾಗದ ಇನ್ನೊಂದು ಆಕರ್ಷಣೆ ಎಂದರೆ ಅದು ಪ್ರಕಾಶ್ ರೈ. ಈ ಎರಡನೇ ಚಾಪ್ಟರ್ ನ ಟೀಸರ್ ನಲ್ಲಿ ಪ್ರಕಾಶ್ ರೈ ಅವರದ್ದೇ ಬ್ಯಾಕ್ ಗ್ರೌಂಡ್ ವಾಯ್ಸ್ ಇದೆ. ಮತ್ತದು ಎಂದಿನಂತೆ ಖಡಕ್ ಆಗಿದೆ. ಆದರೆ ಇಲ್ಲೊಂದು ಸ್ಪೆಷಾಲಿಟಿ ಕೂಡ ಇದೆ.

ಈ ಚಿತ್ರದಲ್ಲಿ ಪ್ರಕಾಶ್ ರೈ ಅಭಿನಯಿಸುತ್ತಿದ್ದಾರೆ ಎಂದು ಹೇಳಿದ ಕ್ಷಣದಿಂದ, ಪ್ರಕಾಶ್ ರೈ ಈ ಚಿತ್ರ ಬಿಟ್ಟು ಬೇರೆ ಯಾವ ಚಿತ್ರದಲ್ಲೂ ಅಭಿನಯಿಸಿಯೇ ಇಲ್ಲ ಎನ್ನುವಂತೆ ಆಡುತ್ತಿದ್ದ ಬಿಜೆಪಿ ಭಕ್ತರು, ಪ್ರಕಾಶ್ ರೈ ಇರೋ ಸಿನಿಮಾ ನಾವು ನೋಡಲ್ಲ ಎಂದೆಲ್ಲಾ ರಾಗ ಹಾಡುತ್ತಿದ್ದರು. ಆದರೆ ಈಗ ಅವರೆಲ್ಲರನ್ನು ಇನ್ನಷ್ಟು ಉರಿಸುವಂತೆ ಚಿತ್ರದ ಟೀಸರ್ ನಲ್ಲಿಯೇ ಪ್ರಕಾಶ್ ರೈ ವಿಜೃಂಭಿಸಿದ್ದಾರೆ. ಇದನ್ನು ಎಷ್ಟು ಜನ ಭಕ್ತರು ನೋಡಿದರೋ ಇಲ್ಲವೋ ಗೊತ್ತಿಲ್ಲ ಆದರೆ ಶತ್ರುಗಳ ಕೋಟೆ ದಾಟಿ ಅವರನ್ನು ಹೊಡೆದು ಕೆಡವುವ ನಾಯಕನ ಈ ಚಿತ್ರದ ಟೀಸರ್ ವೀಕ್ಷಣೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೋಟಿ ದಾಟಿ ಹೋಗಿತ್ತು.

ಪ್ರಕಾಶ್ ರೈ ಇದ್ದರೆ ನಾವು ಸಿನಿಮಾ ನೋಡಲ್ಲ ಅಂತಿದ್ದವರಿಗೆಲ್ಲಾ ಈಗ ಟೀಸರ್ ನಲ್ಲೇ ಪ್ರಕಾಶ್ ರೈ ಅವರ ಬ್ಯಾಕ್ ಗ್ರೌಂಡ್ ವಾಯ್ಸ್ ಕೇಳಿ ಬ್ಯಾಕ್ ಬರ್ನಿಂಗ್ ಶುರುವಾಗಿದೆ ಅಂದ್ರೆ ತಪ್ಪೇನಿಲ್ಲ. ಸಿನಿಮಾ ವಿಷಯದಲ್ಲೂ ಅನಗತ್ಯ ರಾಜಕೀಯ ಮಾಡುವವರಿಗೆ ಈ ಟೀಸರ್ ಮೂಲಕ ತಕ್ಕ ಉತ್ತರ ಕೊಟ್ಟಿದೆ ಕೆಜಿಎಫ್ ತಂಡ.

ಇನ್ನು ನಿನ್ನೆ ಬಿಡುಗಡೆಯಾದ ಈ ಟೀಸರ್ ತನ್ನ ಕಂಟೆಂಟ್ ಗಿಂತ ಜಾಸ್ತಿ ಆನ್ ಲೈನ್ ನಲ್ಲಿ ಸುದ್ದಿ ಮಾಡಿದ್ದು ಬೇರೆ ವಿಷಯಕ್ಕೆ. ಆಕ್ಚುವಲಿ, ಇಂದು ನಟ ಯಶ್ ಅವರ ಜನ್ಮದಿನದ ಸಂದರ್ಭದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆ ಆಗಬೇಕಿತ್ತು. ಆದರೆ ಚಿತ್ರದ ಟೀಸರ್ ಕಿಡಿಗೇಡಿಗಳ ಕೈವಾಡದಿಂದ ಒಂದು ದಿನ ಮುನ್ನವೇ ಆನ್ ಲೈನ್ ನಲ್ಲಿ ಜನ್ಮ ತಾಳಿತ್ತು.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಗೆ ನಿನ್ನೆಯೇ ಶಾಕ್ ಕೊಟ್ಟು ಆನ್ ಲೈನ್ ನಲ್ಲಿ ಲೀಕ್ ಆಗಿತ್ತು ಕೆಜಿಎಫ್ ಟೀಸರ್. ಈ ಲೀಕ್ ಮೈಂಡೆಡ್ ಪೀಪಲ್ ಮಾಡಿದ ಅವಸರದಿಂದಾಗಿ ಸಿನಿ ಅಭಿಮಾನಿಗಳಿಗೆ ಟೀಸರ್ ದರ್ಶನ ನಿಗದಿತ ಸಮಯಕ್ಕೆ ಮುನ್ನವೇ ಆಗಿತ್ತು. ಇದರ ಬಗ್ಗೆ ಈಗಾಗಲೇ ಆನ್ ಲೈನ್ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅಭಿಮಾನಿಗಳಂತೂ ತೀರಾ ಇಡೀ ಚಿತ್ರವೇ ಲೀಕ್ ಆಗಿದೆಯೇನೋ ಎನ್ನುವಷ್ಟರ ಮಟ್ಟಿಗೆ ತಮ್ಮ ಸಿಟ್ಟು ಪ್ರದರ್ಶನ ಮಾಡುತ್ತಿದ್ದರು. ಯಶ್ ಕೂಡ ಲೀಕ್ ಮಾಡಿದವರಿಗೆ ಅದೇನು ಸಂತೋಷ ಸಿಗುತ್ತೋ ಗೊತ್ತಿಲ್ಲ, ಅವರಿಗೆ ಒಳ್ಳೆಯದಾಗಲಿ ಅಂತ ಕಾಮ್ ಆಗಿಯೇ ತಮ್ಮ ಅಸಮಾಧಾನ ತೋಡಿಕೊಂಡಿದ್ದರು. ಆದರೆ, ಲೀಕ್ ಆದರೂ ವೀಕ್ ಅಲ್ಲ ಎಂಬುದನ್ನು ಟೀಸರ್ ಸಾಬೀತು ಪಡಿಸಿತ್ತು. ಇತ್ತೀಚೆಗೆ ಮದಗಜ ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ, ಚಿತ್ರದ ಟೀಸರ್ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ, ಕೌಂಟ್ ಡೌನ್ ಶುರು, 3 ದಿನ ಬಾಕಿ, 2 ದಿನ, 1 ದಿನ, 24 ಗಂಟೆ, 12 ಗಂಟೆ , 8 ಗಂಟೆ ಅಂತ ಇನ್ನೊಂದೇ ಗಂಟೆ ಅಂತೆಲ್ಲಾ ಅಸಂಬದ್ಧವಾಗಿ ಪ್ರಚಾರ ಮಾಡಿ ಅನಗತ್ಯ ಪ್ರಚಾರದಲ್ಲಿ ತೊಡಗಿಕೊಂಡಿದ್ದನ್ನು ನೋಡಿದವರಿಗೆ ಇದೊಂಥರಾ ಒಳ್ಳೆಯದೇ ಆಯಿತು ಎನಿಸಿದ್ರೂ ತಪ್ಪಿಲ್ಲ. ಯಾಕಂದ್ರೆ ಕೆಜಿಎಫ್ ಚಿತ್ರ ತಂಡ ಕೂಡಾ ಯೂಟ್ಯೂಬ್ ನಲ್ಲಿ ಟೀಸರ್ ಬಿಡುಗಡೆಗೆ ಇನ್ನು 15 ಗಂಟೆಗಳು ಬಾಕಿ ಎಂದು ವರಾತ ಶುರು ಹಚ್ಚಿಕೊಂಡಿತ್ತು. ಹಾಗಾಗಿ, ಅದನ್ನು ನೋಡಿ ಗಾಬರಿಯಾಗಿದ್ದ ಸಿನಿಕರಿಗೆ ಈ ಟೀಸರ್ ಲೀಕ್ ಅಸಮಾಧಾನವನ್ನೇನೂ ಮಾಡಿಲ್ಲ ಬಿಡಿ.

-ಹರಿ ಪರಾಕ್

Be the first to comment

Leave a Reply

Your email address will not be published. Required fields are marked *

Translate »
error: Content is protected !!