ಕನ್ನಡ ಚಿತ್ರರಂಗದಲ್ಲಿ ಖಳನಾಯಕನ ಮೂಲಕ ಗಮನ ಸೆಳೆದಿದ್ದ ಲಕ್ಷ್ಮಣ್ ಅವರು ಹೃದಯಾಘಾತದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ.
ಅವರು ಸಾಂಗ್ಲಿಯಾನ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಭಾನುವಾರ (ಜ.22ರಂದು) ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಇಸಿಜಿ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.
ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಲಕ್ಷ್ಮಣ್ ನಿಧನಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು, ಸಿನಿಪ್ರಿಯರು ಸಂತಾಪ ಸೂಚಿಸಿದ್ದಾರೆ.
ಲಕ್ಷ್ಮಣ್ ಅವರು ಖಳ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದರು. ವೃತ್ತಿ ಜೀವನದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಲಕ್ಷ್ಮಣ್ ಬಣ್ಣ ಹಚ್ಚಿದ್ದರು.
‘ಒಲವಿನ ಉಡುಗೊರೆ’, ‘ಸಾಂಗ್ಲಿಯಾನ’ ಮೊದಲಾದ ಸಿನಿಮಾಗಳ ಮೂಲಕ ಹೆಸರು ಮಾಡಿದ್ದರು. ಅಂಬರೀಷ್, ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಕನ್ನಡದ ದಿಗ್ಗಜ ನಟರ ಜೊತೆ ಅವರು ಅಭಿನಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
___

Be the first to comment