ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕರಾಗಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಚಿತ್ರರಂಗಕ್ಕೆ ಭವ್ಯ ಇತಿಹಾಸವಿದೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ , ಅಂಬರೀಶ್ ಅವರು ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇದು ಇನ್ನಷ್ಟು ಭದ್ರವಾಗಬೇಕಾದರೆ ಹೆಚ್ಚೆ ಸಿನಿಮಾಗಳು ಬರಬೇಕು. ಶ್ರೇಷ್ಠ ನಟರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಮಾತೃಭಾಷೆಯ ಸಿನಿಮಾಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಡಬ್ಬಿಂಗ್ ಸಿನಿಮಾಗಳನ್ನು ಜನ ನೋಡುತ್ತಿದ್ದಾರೆ. ನಮ್ಮಲ್ಲಿ ಉತ್ತಮ ನಿರ್ದೇಶಕರು, ಉತ್ತಮ ಕಥೆಗಳು ಲಭ್ಯ ಇರುವುದರಿಂದ ನಮ್ಮವೇ ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿ ಬರಲಿ. ಇವತ್ತು ಕನ್ನಡ ಚಿತ್ರರಂಗ ಎತ್ತರದ ಸಾಧನೆಗಳನ್ನು ಮಾಡುತ್ತಿದೆ. ಉತ್ತಮ ಸಿನಿಮಾಗಳು ಬರುತ್ತಿವೆ. ಭಾರತೀಯ ಚಿತ್ರರಂಗ ನಮ್ಮನ್ನು ಬೆರಗಿನಿಂದ ನೋಡುತ್ತಿದೆ. ಆದರೂ ಕನ್ನಡ ಚಿತ್ರಗಳು ಇನ್ನು ಹೆಚ್ಚಿನ ಸಂಖೆಯಲ್ಲಿ ಯಶಸ್ಸು ಸಾಧಿಸಬೇಕು ಎಂದರು.
ನಾಯಕ ನಟ ಕಿಚ್ಚ ಸುದೀಪ್, ಬ್ರಹ್ಮಾಂಡ ಗುರೂಜಿ, ರಾಕ್ ಲೈನ್ ವೆಂಕಟೇಶ್, ಬಸಂತ ಕುಮಾರ್ ಪಾಟೀಲ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಮುಂತಾದವರು ಪಾಲ್ಗೊಂಡಿದ್ದರು.





Be the first to comment