ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕುಂ. ವೀರಭದ್ರಪ್ಪ ಅವರ ಕಥೆ ಆಧಾರಿಸಿದ ಸಿನಿಮಾ ‘ಕುಬುಸ ‘ ಟ್ರೈಲರ್ ಅನಾವರಣ ಮಾಡಿ ತಂಡಕ್ಕೆ ಶುಭ ಕೋರಿದರು.
ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ವಸಂತ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ನಾಯಕ ನಟರಾಜ್ ಎಸ್ ಭಟ್ ಮಾತನಾಡಿ, ”ಈ ರೀತಿ ಚಿತ್ರಗಳು ಗೆಲ್ಲಬೇಕು. ಈ ಸಿನಿಮಾ ಗೆದ್ದಾಗ ನಿರ್ಮಾಪಕರು ಮತ್ತೆ ಸಿನಿಮಾ ಮಾಡಲು ಮುಂದಾಗುತ್ತಾರೆ. ಇಡೀ ತಂಡ ಈ ಚಿತ್ರಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ . ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಸಹಕಾರ ಕುಬುಸ ಸಿನಿಮಾ ಮೇಲೆ ಇರಲಿ” ಎಂದರು.
ನಿರ್ದೇಶಕ ರಘುರಾಮ ಚರಣ್ ಮಾತನಾಡಿ, ” ಪುಟ್ಟ ಕನಸು ದೊಡ್ಡದಾಗುತ್ತಾ ಬಂತು. ಅದು ಈಗ ಸಿನಿಮಾ ರೂಪತಾಳಿದೆ. ಇದು ಯಾವ ಜಾನರ್ ಎಂದು ಹೇಳಲು ಆಗುವುದಿಲ್ಲ. ಕಥೆ ಬರೆಯುವಾಗ ಏನು ವಿಜ್ವಲ್ ಬಂತು ಅದನ್ನು ಶೂಟ್ ಮಾಡಿದ್ದೇವೆ. 1960ರ ಕಾಲಘಟ್ಟದಲ್ಲಿ ಬರುವ ಕಥೆ ಇದು. ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ” ಎಂದು ಮಾಹಿತಿ ನೀಡಿದರು.
ನಿರ್ಮಾಪಕಿ ವಿ.ಶೋಭಾ ಆದಿನಾರಾಯಣ ಮಾತನಾಡಿ, ”ಕುಬುಸ ಚಲನಚಿತ್ರದಲ್ಲಿ ಹಳ್ಳಿ ಸೊಗಡಿನ ಚಿತ್ರಕಥೆ. ಜನರ ಮನಸ್ಸಿನಲ್ಲಿ ಉಳಿಯುವ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುತ್ತೇನೆ. ಚಿತ್ರ ಜುಲೈ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು” ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ, ಹೊಸಪೇಟೆಯ ಸಮಾಜ ಸೇವಕರಾದ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷರಾದ ಕವಿತಾ ಈಶ್ವರ್ ಸಿಂಗ್, ಹೋಂ ಆಫ್ ಹೋಪ್ ಸಂಸ್ಥಾಪಕರಾದ ಆಟೋರಾಜ್, ಡ್ಯಾನ್ಸ್ ಹರಿಪ್ರಸಾದ್, ಕೃಷ್ಣ ರಿತ್ತಿ ,ಯೂಸುಫ್ ,ಇಮ್ತಿಯಾಜ್, ರಾಜು ಉಪ್ಪರ್, ನಂದೀಶ ಇತರರು ಭಾಗಿಯಾಗಿದ್ದರು.
‘ಕುಬುಸ ‘ ಸಿನಿಮಾ ‘ಯು’ ಸರ್ಟಿಫಿಕೇಟ್ ಪಡೆದುಕೊಂಡಿದೆ. ತಾಯಿ ಮಗನ ಸೆಂಟಿಮೆಂಟ್ ಇರುವ ಚಿತ್ರದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್. ಎಸ್. ಭಟ್, ರಂಗಭೂಮಿ ಕಲಾವಿದೆ ಹನುಮಕ್ಕ ಮರಿಯಮ್ಮನ ಹಳ್ಳಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟರಾಜ್. ಎಸ್. ಭಟ್ ಚಿತ್ರದಲ್ಲಿ ಎರಡು ಶೇಡ್ ನಲ್ಲಿ ನಟಿಸಿದ್ದಾರೆ. ಆರ್ಯ ಮೈಸೂರು, ಅನಿಕ ರಮ್ಯ, ಮಹಾಲಕ್ಷ್ಮೀ ಕೂಡ ಚಿತ್ರದ ಲೀಡ್ ರೋಲ್‌ನಲ್ಲಿ ಬಣ್ಣ ಹಚ್ಚಿದ್ದಾರೆ.
ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ದೊಡ್ಡ ಪಾತ್ರ ಪೋಷಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಗುಂಡಿ ರಮೇಶ್ ಹಾಗೂ ಪತ್ನಿ ಗುಂಡಿ ಭಾರತಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹೊನ್ನಾವರ ಸ್ವಾಮಿ, ಹುಲಿಗಪ್ಪ ಕಟ್ಟೋಮನಿ, ಕನ್ನಡ ಕಲಾ ಸಂಘ ಹೊಸಪೇಟೆ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.
‘ಕುಬುಸ’. ಚಿತ್ರದಲ್ಲಿ ಮೂಲ ಕಥೆಯಲ್ಲಿರುವಂತೆ ಬಳ್ಳಾರಿ ಭಾಷೆಯ ಸೊಗಡನ್ನು ಕಾಣಬಹುದಾಗಿದೆ. ನಾಲ್ಕು ಹಾಡುಗಳಿದ್ದು ಜೋಗಿ ಪ್ರೇಮ್, ವಾಸುಕಿ ವೈಭವ್, ಶೃತಿ.ವಿ.ಎಸ್, ಶಿಲ್ಪ ಮುಡ್ಬಿ, ಪ್ರದೀಪ್ ಚಂದ್ರ ಹಾಡುಗಳಿಗೆ ದನಿಯಾಗಿದ್ದಾರೆ.
ಪ್ರದೀಪ್ ಚಂದ್ರ ಸಂಗೀತ ಸಂಯೋಜನೆ,, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ. ಎ ಕ್ಯಾಮೆರಾ ವರ್ಕ್, ಶಿವಮೂರ್ತಿ ಡೋಣಿಮಲೈ ಸಹ ನಿರ್ದೇಶನ ಚಿತ್ರಕ್ಕಿದೆ. ವಿ. ಶೋಭಾ ಸಿನಿಮಾಸ್ ಬ್ಯಾನರ್ ನಡಿ ವಿ. ಶೋಭಾ ಚಿತ್ರ ನಿರ್ಮಾಣ ಮಾಡಿದ್ದಾರೆ.
Be the first to comment