ನಿರ್ದೇಶಕ : ಶ್ರೀಕಾಂತ್ ಕಟಗಿ
ನಿರ್ಮಾಣ : ಆಶ್ರಗ ಕ್ರಿಯೇಷನ್ಸ್ , ದಿ ಇಮೋಷನ್ಸ್ ಫ್ಯಾಕ್ಟರಿ ಗ್ರೂಪ್.
ಸಂಗೀತ : ರವಿ ಬಸ್ರೂರ್
ಛಾಯಾಗ್ರಹಕ : ಶಿವಸಾಗರ್
ತಾರಾಗಣ : ನವೀನ್ ಶಂಕರ್ , ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್, ರಾಹುಲ್ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್, ನಾಟ್ಯ ರಂಗ, ಹರ್ಷ ಅರ್ಜುನ್ ಹಾಗೂ ಮುಂತಾದವರು…

ರೇಟಿಂಗ್ : 4/5

“ಕ್ಷೇತ್ರಪತಿ’ ಎರಡು ಕಾರಣಗಳಿಂದ ಎಲ್ಲರಿಗೂ ಇಷ್ಟವಾಗತ್ತಾನೆ. ಒಂದು ರೈತರ ಕಷ್ಟಗಳ ಸುತ್ತ ಕಮರ್ಷಿಯಲ್​ ಸಿನಿಮಾ ಬಂದಿರುವುದು ಅಪರೂಪ. ಮತ್ತೊಂದು, ಉತ್ತರ ಕರ್ನಾಟಕದ ಜನರ ಜೀವನಶೈಲಿ, ಜವಾರಿ ಭಾಷೆಯ ಸಿನಿಮಾಗಳು ಬಂದಿರುವುದು ಅತಿ ಅಪರೂಪ.

ರೈತರಿಗೆ ಆಗುತ್ತಿರುವ ಅನ್ಯಾಯದ ಬಗೆ ಜಾಗೃತಿ ಮೂಡಿಸುವುದು ಬಹಳ ಅಗತ್ಯ. ರೈತನ ಭೂಮಿಯನ್ನು ಕಸಿಯುವರು, ರೈತನ ಬೆಳೆಗೆ ಉತ್ತಮ ಬೆಲೆ ಸಿಗುವುದು, ಕೆಮಿಕಲ್ ಕೀಟನಾಶಗಳು, ವಿದೇಶಿ ಬಂಡವಾಳ ಶಾಹಿಗಳ ಆಗಮನ , ರಾಜಕೀಯ ಮುಖಂಡರ ಕುತಂತ್ರ , ಸೂಕ್ತ ಬೆಲೆ ಸಿಗದೆ ಸಾಯುವ ರೈತ , ಕೃಷಿಕನ ಬದುಕು, ಬವಣೆಯ ಸುತ್ತ ನೈಜಕ್ಕೆ ಪೂರಕವಾಗಿರುವಂತೆ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ  ‘ಕ್ಷೇತ್ರಪತಿ’

ಚಿತ್ರದ ಒಂದ ಲೈನ್ ಕಥೆ : ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಮಾಡುತ್ತಿರುವ ರೈತನ ಮಗ ಬಸವ(ನವೀನ್‌ ಶಂಕರ್‌) ತನ್ನ ತಂದೆಯ ಆತ್ಮಹತ್ಯೆ ಸುದ್ದಿ ತಿಳಿದು ಊರಿಗೆ ಮರಳುತ್ತಾನೆ.  ತಂದೆ ಮಾಡಿಟ್ಟ ಸಾಲದ ಬಿಸಿಯನ್ನು ಸಾಹುಕಾರ ವೀರಭದ್ರ(ರಾಹುಲ್‌ ಐನಾಪುರ್‌) ಬಸವನ ಕುಟುಂಬಕ್ಕೆ ನೀಡುತ್ತಾನೆ. ಈ ವೀರಭದ್ರ ಆಡಳಿತದಲ್ಲಿರುವ ರಾಜಕೀಯ ಪಕ್ಷದ ಜಿಲ್ಲಾ ಅಧ್ಯಕ್ಷ. ಈ ಕಷ್ಟ ತನ್ನ ತಂದೆಗಷ್ಟೇ ಅಲ್ಲವೆಂದು ಎಂಜಿನಿಯರಿಂಗ್‌ ಓದನ್ನು ಅರ್ಧದಲ್ಲೇ ಬಿಟ್ಟು, ಊರಿನಲ್ಲಿದ್ದುಕೊಂಡೇ ಸಾಹುಕಾರನನ್ನು ಎದುರು ಹಾಕಿಕೊಂಡು ಒಕ್ಕಲುತನ ಮಾಡಿ ಮುನ್ನಡೆಯುವ ನಿರ್ಧಾರಕ್ಕೆ ಬರುತ್ತಾನೆ ಬಸವ. ಮಾರುಕಟ್ಟೆಯಲ್ಲಿ ತನ್ನ ಬೆಳೆಗೆ ಸೂಕ್ತ ಬೆಲೆ ದೊರೆಯದೇ ಇದ್ದಾಗ ತನ್ನ ಜ್ಞಾನವನ್ನು ಬಳಸಿಕೊಂಡು ಎಪಿಎಂಸಿ ಎದುರಿಗೇ ತಾತ್ಕಾಲಿಕ ಅಂಗಡಿ ತೆರೆದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾನೆ. ಇತರರಿಗೂ ಮಾದರಿಯಾಗುತ್ತದೆ ಈ ನಡೆ. ಈ ರೀತಿ ಬೆಳೆದ ಬಸವನನ್ನು ವ್ಯವಸ್ಥೆಯು ವ್ಯವಸ್ಥಿತವಾಗಿ ಹತ್ತಿಕ್ಕುವ ತಂತ್ರಗಳೇ ಚಿತ್ರವನ್ನು ನೋಡಬೇಕು.

ಬಸವ ಹಾಗೂ ರೈತ ಮುಖಂಡರ ಬೆಂಬಲಕ್ಕೆ ನಿಲ್ಲುವ ಪತ್ರಿಕಾ ಸಂಪಾದಕ (ಅಚ್ಚುತ್ ಕುಮಾರ್) ಒಂದಷ್ಟು ಸಲಹೆ, ಸೂಚನೆಯ ಮೇಲೆ ಮುಂದೆ ಸಾಗುವ ರೈತರ ಬಳಗ. ಎಲ್ಲಾ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಈ ರೈತರ ಪ್ರತಿಭಟನೆಯ ಸುದ್ದಿ. ಪ್ರಖ್ಯಾತ ಟಿವಿ ವಾಹಿನಿ ಸಂದರ್ಶನಕ್ಕೆ ಹೋಗುವ ಬಸವ (ನವೀನ್ ಶಂಕರ್) ನನ್ನು ಸಂದರ್ಶಿಸುವ ನಾಯಕಿ ಭೂಮಿಕಾ ( ಅರ್ಚನಾ ಜೋಯಿಸ್ ). ರೈತ ಬೆಳೆದ ಬೆಲೆಗೆ ಲಾಭದಾಯಕ ಬೆಲೆ ಸಿಗಬೇಕಾದರೆ ಆತನೇ ನೇರವಾಗಿ ಜನರನ್ನು ತಲುಪಬೇಕು ಎಂಬ ಮಾತು ಹೊರಹಾಕುತ್ತಾನೆ. ಇದು ದೊಡ್ಡ ಮಟ್ಟದ ಸಂಚಲನ ವಾಗುತ್ತದೆ. ಮುಂದೆ ಹಲವು ತೊಂದರೆಗಳನ್ನು ಎದುರಿಸುವ ಬಸವ ಜೈಲಿ ಸೇರುವ ಪರಿಸ್ಥಿತಿ ಎದುರಾಗುತ್ತದೆ. ಯಾವುದೇ ತಪ್ಪು ಮಾಡದ ಬಸವ ಕುತಂತ್ರಿಗಳ ಷಡ್ಯಂತ್ರಕ್ಕೆ ನಲುಗಿ ಹೋಗುವ ಪರಿಸ್ಥಿತಿ ಎದುರಾಗುತ್ತದೆ.

ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಬಸವ ನಟ (ನವೀನ್ ಶಂಕರ್) ಎಂದಿನಂತೆ ತಮ್ಮ ನಟನ ಕೌಶಲ್ಯವನ್ನು ಅದ್ಭುತವಾಗಿ ಪರದೆಯ ಮೇಲೆ ಮೆರೆದಿದ್ದಾರೆ. ಬಹಳ ಲೀಲಾಜಾಲವಾಗಿ ತಮ್ಮ ಸೊಗಡಿನ ಭಾಷೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಇನ್ನು ತಂದೆ , ತಾಯಿ , ತಂಗಿ ಪಾತ್ರದಾರಿಗಳು ಕೂಡ ಗಮನ ಸೆಳೆಯುತ್ತಾರೆ. ಇನ್ನು ಸಂಪಾದಕನಾಗಿ ಅಚ್ಚುತ್ ಕುಮಾರ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಷ್ಟೇ ಅಚ್ಚುಕಟ್ಟಾದ ಪತ್ರಕರ್ತೆಯಾಗಿ ನಟಿ ಅರ್ಚನಾ ಜೋಯಿಸ್ ಕೂಡ ತಮ್ಮ ಪಾತ್ರ ಪೋಷಣೆಯಲ್ಲಿ ಮಿಂಚಿದ್ದಾರೆ. ಇನ್ನಷ್ಟು ಅವರ ಪಾತ್ರವನ್ನು ಬಳಸಿಕೊಳ್ಳಬಹುದಿತ್ತು. ಇನ್ನು ವಿಲ್ಲನ್ ಪಾತ್ರಧಾರಿಗಳು, ರಾಜಕೀಯ ಮುಖಂಡರಾಗಿ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ನಿರ್ದೇಶನ ಮಾಡಿರುವ ಶ್ರೀಕಾಂತ್ ಕಟಗಿ ತಮ್ಮ ಮೊದಲ ಪ್ರಯತ್ನದಲ್ಲೇ ಬಹಳ ವರ್ಷಗಳಿಂದ ನಡೆಯುತ್ತಿರುವ ಅನ್ಯಾಯವನ್ನು ಬಹಳ ಸೂಕ್ಷ್ಮವಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ರೈತರಗಾಗುತ್ತಿರುವ ಅನ್ಯಾಯ, ಹಾಗೂ ಅದರ ಹಿಂದಿರುವ ಒಂದಷ್ಟು ಕಾರಣಗಳನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.

ಈ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಸಹಕಾರವನ್ನು ಮೆಚ್ಚಲೇಬೇಕು. ಇಡೀ ಚಿತ್ರದ ಹೈಲೈಟ್ ಅಂದರೆ ಸಂಗೀತ ನಿರ್ದೇಶಕ ರವಿ ಬಸ್ರೂರ್ ರವರ ಹಿನ್ನೆಲೆ ಸಂಗೀತ. ಇನ್ನೂ ಛಾಯಾಗ್ರಹಕ ಶಿವಸಾಗರ್ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ತಾಂತ್ರಿಕವಾಗಿ ಗಮನ ಸೆಳೆಯುವಂತ ಚಿತ್ರ ಇದಾಗಿದ್ದು , ಒಟ್ಟಾರೆ ಈ ಕ್ಷೇತ್ರಪತಿ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.